ರುಬಿನಾ ಮಾತ್ರವಲ್ಲದೇ ನೇಪಾಳ ಹಾಗೂ ಬಾಂಗ್ಲಾದೇಶದ ಹಲವು ಅಂತಾರಾಷ್ಟ್ರೀಯ ಆಟಗಾರ್ತಿಯರು, ಜಮ್ಮು-ಕಾಶ್ಮೀರದ ಪೊಲೀಸ್ ಹಾಗೂ ರಾಜ್ಯ ಕ್ರೀಡಾ ಇಲಾಖೆ ಜಂಟಿಯಾಗಿ ಆಯೋಜಿಸಿರುವ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ.
ಶ್ರೀನಗರ(ಡಿ.26): ನೇಪಾಳ ಕ್ರಿಕೆಟ್ ತಂಡದ ನಾಯಕಿ ರುಬಿನಾ ಚೆಟ್ರಿ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಕ್ರಿಕೆಟ್ ಆಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಭದ್ರತೆ ದೃಷ್ಟಿಯಿಂದ ಕಾಶ್ಮೀರದಲ್ಲಿ ಆಯೋಜಿಸಿರುವ ಮುಖ್ಯಮಂತ್ರಿಗಳ ಟಿ20 ಪ್ರೀಮಿಯರ್ ಲೀಗ್'ನಲ್ಲಿ ಪಾಲ್ಗೊಳ್ಳಲು, ಈ ಮೊದಲು ರುಬಿನಾ ಹಿಂಜರಿದಿದ್ದರು.
ಆದರೆ, ಕಾಶ್ಮೀರದಲ್ಲಿನ ಆಟಗಾರ್ತಿಯರ ಜತೆ ಸಮಯ ಕಳೆದ ಬಳಿಕ ರುಬಿನಾ ಮನಸ್ಸು ಬದಲಿಸಿದ್ದಾರೆ. ರುಬಿನಾ ಮಾತ್ರವಲ್ಲದೇ ನೇಪಾಳ ಹಾಗೂ ಬಾಂಗ್ಲಾದೇಶದ ಹಲವು ಅಂತಾರಾಷ್ಟ್ರೀಯ ಆಟಗಾರ್ತಿಯರು, ಜಮ್ಮು-ಕಾಶ್ಮೀರದ ಪೊಲೀಸ್ ಹಾಗೂ ರಾಜ್ಯ ಕ್ರೀಡಾ ಇಲಾಖೆ ಜಂಟಿಯಾಗಿ ಆಯೋಜಿಸಿರುವ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ.
‘ಲೀಗ್'ನಲ್ಲಿ ಪಾಲ್ಗೊಳ್ಳಲು ಮೊದಲು ಆಹ್ವಾನ ಬಂದಾಗ, ಉಗ್ರರ ದಾಳಿ ಕಾರಣ ಇಲ್ಲಿಗೆ ಬರಲು ಭಯಗೊಂಡಿದ್ದೆ. ಆದರೆ, ಇಲ್ಲಿಗೆ ಬಂದ ಬಳಿಕ ನಾನು ಕೈಗೊಂಡ ನಿರ್ಧಾರ ಸರಿ ಎನಿಸಿತು. ನನ್ನ ಆಟವನ್ನು ಇಲ್ಲಿ ಸಾಕಷ್ಟು ಎಂಜಾಯ್ ಮಾಡುತ್ತಿದ್ದೇನೆ. ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಕಾಶ್ಮೀರಕ್ಕೆ ಭೇಟಿ ನೀಡಲು ಇಚ್ಛಿಸುತ್ತೇನೆ’ ಎಂದು ರುಬಿನಾ ಪ್ರತಿಕ್ರಿಯಿಸಿದ್ದಾರೆ. ‘ಅಂತಾರಾಷ್ಟ್ರೀಯ ಆಟಗಾರ್ತಿಯರ ಜತೆಗೆ ಭಾರತದ 15 ರಾಜ್ಯಗಳ 70 ಆಟಗಾರ್ತಿಯರು ಹಾಗೂ ಜಮ್ಮು-ಕಾಶ್ಮೀರದ 45 ಆಟಗಾರ್ತಿಯರು ಲೀಗ್'ನಲ್ಲಿ ಭಾಗವಹಿಸುತ್ತಿದ್ದಾರೆ’ ಎಂದು ಪಂದ್ಯಾವಳಿಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಗಿಲ್ ತಿಳಿಸಿದ್ದಾರೆ.
