ಆಗ ಗ್ಯಾಲರಿಯಲ್ಲಿದ್ದ ಪ್ರೇಕ್ಷಕನೊಬ್ಬ ನೀರಜ್‌ರತ್ತ ತ್ರಿವರ್ಣ ಧ್ವಜ ಎಸೆದ. ಅದನ್ನು ನೆಲಕ್ಕೆ ಬೀಳದಂತೆ ಕ್ಯಾಚ್ ಹಿಡಿಯುವಲ್ಲಿ ಚಿನ್ನದ ಹುಡುಗ ಯಶಸ್ವಿಯಾದರು. ಇದು ನೀರಜ್ ಚೋಪ್ರಾ ದೇಶದ ಧ್ವಜಕ್ಕೆ ನೀಡುವ ಗೌರವವನ್ನು ಸೂಚಿಸುತ್ತಿದೆ ಎಂದು ನೆಟ್ಟಿಗರು ಜಾವೆಲಿನ್ ಪಟುವಿನ ನಡೆಯನ್ನು ಶ್ಲಾಘಿಸಿದ್ದಾರೆ.

ಹಾಂಗ್ಝೂ(ಅ.05): ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಸತತ ಎರಡನೇ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬುಧವಾರ(ಅ.04) ಸಂಜೆ ನಡೆದ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ 88.88 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸುತ್ತಿದ್ದಂತೆಯೇ ನೀರಜ್ ಚೋಪ್ರಾ ಅವರತ್ತ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದವರು ತ್ರಿವರ್ಣ ಧ್ವಜ ಹೊದ್ದುಕೊಳ್ಳಲು ಅವರತ್ತ ಧ್ವಜ ಎಸೆದಿದ್ದಾರೆ. ಆ ಧ್ವಜ ಸ್ವಲ್ಪದರಲ್ಲೇ ನೆಲಕ್ಕೆ ಬೀಳುವುದರಲ್ಲಿತ್ತು. ಆದರೆ ಖುಷಿಯಲ್ಲಿ ಮೈಮರೆಯದ ನೀರಜ್ ಚೋಪ್ರಾ, ತ್ರಿವರ್ಣ ಧ್ವಜ ನೆಲಕ್ಕೆ ಬೀಳದಂತೆ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವುದು ಬಹುತೇಕ ಖಚಿತವೆನಿಸಿತ್ತು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಅಭಿಮಾನಿಗಳೇ ಸ್ಟೇಡಿಯಂನಲ್ಲಿ ತುಂಬಿ ಹೋಗಿದ್ದರು. ಪದಕ ಗೆಲ್ಲುತ್ತಿದ್ದಂತೆಯೇ ನೀರಜ್ ಚೋಪ್ರಾ ಹಾಗೂ ಕಿಶೋರ್ ಜೆನಾ ಪ್ರೇಕ್ಷಕರತ್ತ ವಿಜಯದ ಸಿಂಬಲ್ ತೋರಿಸಿದರು. ಆಗ ಗ್ಯಾಲರಿಯಲ್ಲಿದ್ದ ಪ್ರೇಕ್ಷಕನೊಬ್ಬ ನೀರಜ್‌ರತ್ತ ತ್ರಿವರ್ಣ ಧ್ವಜ ಎಸೆದ. ಅದನ್ನು ನೆಲಕ್ಕೆ ಬೀಳದಂತೆ ಕ್ಯಾಚ್ ಹಿಡಿಯುವಲ್ಲಿ ಚಿನ್ನದ ಹುಡುಗ ಯಶಸ್ವಿಯಾದರು. ಇದು ನೀರಜ್ ಚೋಪ್ರಾ ದೇಶದ ಧ್ವಜಕ್ಕೆ ನೀಡುವ ಗೌರವವನ್ನು ಸೂಚಿಸುತ್ತಿದೆ ಎಂದು ನೆಟ್ಟಿಗರು ಜಾವೆಲಿನ್ ಪಟುವಿನ ನಡೆಯನ್ನು ಶ್ಲಾಘಿಸಿದ್ದಾರೆ.

Scroll to load tweet…

Asian Games 2023: ಕೋವಿಡ್‌ ವೇಳೆ ಕೂಲಿ ಕೆಲಸ ಮಾಡುತ್ತಿದ್ದ ರಾಮ್‌ ಬಾಬೂಗೆ ಒಲಿದ ಕಂಚು..!

ಹೀಗಿದೆ ನೋಡಿ ಆ ಕ್ಷಣ:

Scroll to load tweet…


ಭಾರತೀಯರದ್ದೇ ಸ್ಪರ್ಧೆ ಎಂಬಂತಿದ್ದ ಪುರುಷರ ಜಾವೆಲಿನ್‌ ಎಸೆತದಲ್ಲಿ ಯಾರ ನಿರೀಕ್ಷೆಯೂ ಹುಸಿಗೊಳಿಸದೆ ನೀರಜ್‌ ಚೋಪ್ರಾ ಮತ್ತೆ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಅವರಿಗೆ ಪ್ರಬಲ ಪೈಪೋಟಿ ನೀಡಿದ ಕಿಶೋರ್‌ ಜೆನಾ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. 2018ರಲ್ಲೂ ಚಿನ್ನ ಜಯಿಸಿದ್ದ ನೀರಜ್‌, ಈ ಬಾರಿ 4ನೇ ಪ್ರಯತ್ನದಲ್ಲಿ 88.88 ಮೀ. ದೂರ ದಾಖಲಿಸಿ ಚಾಂಪಿಯನ್‌ ಪಟ್ಟ ತಮ್ಮಲ್ಲೇ ಉಳಿಸಿಕೊಂಡರು. 2ನೇ ಪ್ರಯತ್ನದಲ್ಲಿ 84.49 ಮೀ. ದಾಖಲಿಸಿದ್ದ ನೀರಜ್‌ರನ್ನು, ತಮ್ಮ 3ನೇ ಪ್ರಯತ್ನದಲ್ಲಿ 86.77 ಮೀ. ದೂರಕ್ಕೆಸೆದ ಕಿಶೋರ್‌ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದರು. ಬಳಿಕ 4ನೇ ಪ್ರಯತ್ನದಲ್ಲಿ 87.54 ಮೀ. ದೂರ ದಾಖಲಿಸಿದರೂ ಕಿಶೋರ್‌ 2ನೇ ಸ್ಥಾನಿಯಾದರು. ಜಪಾನ್‌ನ ಡೀನ್‌ ರೋಡ್ರಿಕ್‌ (82.68 ಮೀ.) ಕಂಚು ಜಯಿಸಿದರು. ಈ ಮೂವರನ್ನು ಹೊರತುಪಡಿಸಿ ಬೇರೆಯಾರೂ 80ಮೀ. ಗಡಿ ದಾಟಲಿಲ್ಲ. ಇತ್ತೀಚೆಗಷ್ಟೇ ವಿಶ್ವ ಅಥ್ಲೆಟಿಕ್ಸ್‌ನಲ್ಲಿ 84.77 ಮೀಟರ್‌ನೊಂದಿಗೆ 5ನೇ ಸ್ಥಾನಿಯಾಗಿದ್ದ ಒಡಿಶಾದ ಕಿಶೋರ್‌ಗೆ ಇದು ಮೊದಲ ಅಂತಾರಾಷ್ಟ್ರೀಯ ಪದಕ.

Scroll to load tweet…

ಏಷ್ಯನ್‌ ಗೇಮ್ಸ್‌ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ವಿವಾದ, ಚೀನಾ ಕುತಂತ್ರದ ನಡುವೆಯೂ ಚಿನ್ನ ಗೆದ್ದ ನೀರಜ್‌!

ಬೆಳ್ಳಿ ಗೆದ್ದ ಕಿಶೋರ್‌ಗೆ ಒಡಿಶಾ ₹1.5 ಕೋಟಿ!

ಭುವನೇಶ್ವರ್‌: ಏಷ್ಯನ್‌ ಗೇಮ್ಸ್‌ನ ಪುರುಷರ ಜಾವೆಲಿನ್‌ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದ ಕಿಶೋರ್‌ ಜೆನಾಗೆ ಒಡಿಶಾ ಸರ್ಕಾರ 1.5 ಕೋಟಿ ರು. ನಗದು ಬಹುಮಾನ ಘೋಷಿಸಿದೆ. ಬುಧವಾರ ಪದಕ ಗೆದ್ದ ಕೆಲವೇ ಗಂಟೆಗಳಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಈ ಬಗ್ಗೆ ಪ್ರಕಟಣೆ ಹೊರಡಿಸಿದರು. ಕಿಶೋರ್‌ ದೇಶದ ಎಲ್ಲಾ ಯುವ ಕ್ರೀಡಾಪಟುಗಳಿಗೂ ಸ್ಫೂರ್ತಿ ಎಂದಿರುವ ಅವರು, ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನ ಸಿದ್ಧತೆಗೆ ಬೇಕಾದ ಅಗತ್ಯ ಸಹಾಯವನ್ನೂ ಕಿಶೋರ್‌ಗೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಕಳೆದ ತಿಂಗಳು ಕಿಶೋರ್‌ ಬುಡಾಪೆಸ್ಟ್‌ನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ 5ನೇ ಸ್ಥಾನ ಪಡೆದಾಗಲೂ ಒಡಿಶಾ ಸರ್ಕಾರ 50 ಲಕ್ಷ ರು. ನಗದು ಬಹುಮಾನ ಘೋಷಿಸಿತ್ತು.