ಇಂದಿನಿಂದ ಅಂತರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್, ನೀರಜ್ ಚೋಪ್ರಾ ಗೈರು..!
* ಅಂತರ್‌ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಇಂದಿನಿಂದ ಆರಂಭ
* 5 ದಿನಗಳ ಕಾಲ ನಡೆಯುವ ಕೂಟದಲ್ಲಿ ಹಲವು ತಾರಾ ಅಥ್ಲೀಟ್‌ಗಳು ಭಾಗಿ
* ಕರ್ನಾಟಕದ ಯುವ ರನ್ನರ್ ಪ್ರಿಯಾ ಮೋಹನ್, ದ್ಯುತಿ ಚಂದ್, ಹಿಮಾ ದಾಸ್ ಪ್ರಮುಖ ಆಕರ್ಷಣೆ
ಚೆನ್ನೈ(ಜೂ.10): 61ನೇ ಆವೃತ್ತಿಯ ಅಂತರ್‌ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ (National Inter State Senior Athletics Championship 2022) ಶುಕ್ರವಾರ ಚೆನ್ನೈನಲ್ಲಿ ಆರಂಭವಾಗಲಿದೆ. ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ಕಾತರದಲ್ಲಿರುವ ಹಲವು ಅಥ್ಲೀಟ್‌ಗಳು 5 ದಿನಗಳ ಕಾಲ ನಡೆಯುವ ಕೂಟದಲ್ಲಿ ಅಗ್ರ ಸ್ಥಾನಕ್ಕಾಗಿ ಹೋರಾಡಲಿದ್ದಾರೆ. ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ (Neeraj Chopra), 3000 ಮೀ. ಸ್ಟೀಪಲ್‌ಚೇಸ್ ರನ್ನರ್ ಅವಿನಾಶ್ ಸಬ್ಳೆ ಕೂಟಕ್ಕೆ ಗೈರಾಗಲಿದ್ದಾರೆ.
ಅಂತರ್‌ರಾಜ್ಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 23 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 600ರಷ್ಟು ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದು, ಶ್ರೀಲಂಕಾದ 11 ಅಥ್ಲೀಟ್‌ಗಳು ಕೂಡಾ ಸ್ಪರ್ಧೆ ನಡೆಸಲಿದ್ದಾರೆ. ಕರ್ನಾಟಕದ ಯುವ ರನ್ನರ್ ಪ್ರಿಯಾ ಮೋಹನ್, ದ್ಯುತಿ ಚಂದ್, ಹಿಮಾ ದಾಸ್, ತೇಜಿಂದ್ರಪಾಲ್, ಶ್ರೀಕುಮಾರ್, ಅನಸ್, ಜ್ಯೋತಿ ಯರ್ರಾಜಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಅಥ್ಲೀಟ್‌ಗಳು ಅಮೆರಿಕದಲ್ಲಿ ಜುಲೈ 15-24ರ ವರೆಗೆ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೂ ಅರ್ಹತೆ ಪಡೆಯಲು ಎದುರು ನೋಡುತ್ತಿದ್ದಾರೆ.
ಖೇಲೋ ಇಂಡಿಯಾ: ಒಟ್ಟು 10 ಚಿನ್ನ ಗೆದ್ದ ಕರ್ನಾಟಕ
ಪಂಚಕುಲ: 4ನೇ ಆವೃತ್ತಿಯ ಖೇಲೋ ಇಂಡಿಯಾ ಕಿರಿಯರ ಕ್ರೀಡಾಕೂಟದಲ್ಲಿ ಕರ್ನಾಟಕ ಮತ್ತೆ ಪದಕ ಬೇಟೆಗೆ ಇಳಿದಿದೆ. ರಾಜ್ಯದ ಸ್ಪರ್ಧಿಗಳು ಈಗಾಗಲೇ 10 ಚಿನ್ನದ ಪದಕ ಬಾಚಿಕೊಂಡಿದ್ದು, ಬಹುತೇಕ ಪದಕಗಳು ಈಜು ಸ್ಪರ್ಧೆಯಲ್ಲಿ ಬಂದಿವೆ. ಹಷಿಕಾ ಬಾಲಕಿರ 200 ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನ, 400 ಮೀ. ಫ್ರಿಸ್ಟೈಲ್‌ನಲ್ಲಿ ಬೆಳ್ಳಿ ಗೆದ್ದಿದ್ದಾರೆ. 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ರಿಧಿಮಾ ಚಿನ್ನ, ನೀನಾ ಬೆಳ್ಳಿ ಪಡೆದಿದ್ದಾರೆ. 100 ಮತ್ತು 200 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ರಾಜ್ಯದ ಈಜುಪಟುಗಳು ಕ್ಲೀನ್‌ಸ್ವೀಪ್ ಮಾಡಿದರು. ಎರಡೂ ವಿಭಾಗದಲ್ಲಿ ಲಕ್ಷ್ಯ ಚಿನ್ನ ಗೆದ್ದರು. ಭಾರತ ಒಟ್ಟಾರೆ 11 ಬೆಳ್ಳಿ, 10 ಕಂಚಿನ ಪದಕವನ್ನೂ ಗೆದ್ದಿದ್ದು, ಒಟ್ಟು 32 ಪದಕಗಳೊಂದಿಗೆ ಪದಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಕೋಚ್ ವಿರುದ್ಧ ಸೈಲಿಂಗ್ ಪಟು ಅಸಭ್ಯ ವರ್ತನೆ ದೂರು
ನವದೆಹಲಿ: ವಿದೇಶದಲ್ಲಿ ತರಬೇತಿಗೆ ತೆರಳಿದ್ದ ವೇಳೆ ಕೋಚ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸೈಕ್ಲಿಸ್ಟ್ ಪಟುವೊಬ್ಬರು ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಹಿರಿಯ ಸೈಲಿಂಗ್ ಪಟುವೊಬ್ಬರು ಕೂಡಾ ಇಂತಹದ್ದೇ ಆರೋಪವನ್ನು ಕೋಚ್ ವಿರುದ್ಧ ಹೊರಿಸಿದ್ದಾರೆ. ಈ ಬಗ್ಗೆ ಅವರು ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್) ಪತ್ರ ಬರೆದಿದ್ದಾರೆ ಎನ್ನಲಾಗಿದ್ದು, ಜರ್ಮನಿಗೆ ಶಿಬಿರಕ್ಕೆ ತೆರಳಿದ್ದ ಕೋಚ್ ತಮಗೆ ಮುಜುಗರ ಆಗುವ ರೀತಿ ವರ್ತಿಸಿದ್ದಾರೆ. ಈ ಬಗ್ಗೆ ಭಾರತೀಯ ಯಾಚಿಂಗ್ ಫೆಡರೇಶನ್(ವೈಎಐ)ಗೆ ದೂರು ನೀಡಿದರೂ ಅವರು ಗಂಭೀರವಾಗಿ ಪರಿಗಣಿಸಿಲ್ಲ’ ಎಂದಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಿದ ಸಾಯ್, ಪ್ರಕರಣವನ್ನು ಹಗುರವಾಗಿ ತೆಗೆದುಕೊಂಡ ಬಗ್ಗೆ ವೈಎಐಯನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ.