ಬೆಂಗಳೂರು(ಜು.23]: ಈ ಬಾರಿ ಕರ್ನಾಟಕ ಪ್ರೀಮಿಯರ್ ಲೀಗ್‌ನ ಆಟಗಾರರ ಹರಾಜು ಹಲವು ಅಚ್ಚರಿಗಳಿಗೆ ಸಾಕ್ಷಿಯಾಯಿತು. ಭಾರೀ ನಿರೀಕ್ಷೆಯಲ್ಲಿದ್ದ ತಾರಾ ಆಟಗಾರರನ್ನು ಒಂದು ಕಡೆ ಕೇಳುವವರೆ ಇಲ್ಲವಾದರೆ, ಮತ್ತೊಂದೆಡೆ ಹೆಸರೇ ಕೇಳಿರದ ಕೆಲ ಆಟಗಾರರು ಲಕ್ಷ ಲಕ್ಷಕ್ಕೆ ಬಿಕರಿಯಾಗಿ ಅಚ್ಚರಿ ಮೂಡಿಸಿದರು. ಇಂತಹ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ ನಾಗಾಲ್ಯಾಂಡ್ ಮೂಲದ ರೋಗ್ಸಾನ್ ಜೋನಾಥನ್. 

ಕಳೆದ ಬಾರಿ ಶಿವಮೊಗ್ಗ ಲಯನ್ಸ್ ತಂಡದಲ್ಲಿದ್ದ ಜೋ ನಾಥನ್ ಈ ಬಾರಿ ಮತ್ತೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಶನಿವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಜೋನಾಥನ್‌ನನ್ನು ಉಳಿಸಿಕೊಳ್ಳಲು ಶಿವಮೊಗ್ಗ ಫ್ರಾಂಚೈಸಿ ಹೆಚ್ಚಿನ ಆಸಕ್ತಿ ತೋರಿತು. ‘ಬಿ’ ಗುಂಪಿನಲ್ಲಿ ಜೋನಾಥನ್‌ರ ಮೂಲ ಬೆಲೆ ₹20 ಸಾವಿರ ಇತ್ತು. ಇದು ಲಕ್ಷ ದಾಟಿದ್ದು ನಿಜಕ್ಕೂ ಅಚ್ಚರಿ, ಪಟ್ಟು ಬಿಡದ ಶಿವಮೊಗ್ಗ ₹ 5.45ಲಕ್ಷ ನೀಡಿ ಜೋನಾಥನ್'ರನ್ನು ಉಳಿಸಿಕೊಂಡಿತು. 

ಜೋನಾಥನ್ ಇಡೀ ಕುಟುಂಬ ನಾಗಾಲ್ಯಾಂಡ್‌ನಲ್ಲಿ ನೆಲೆಸಿದ್ದು, ವಿದ್ಯಾಭ್ಯಾಸದ ಸಲುವಾಗಿ 21 ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ ಅವರು ಇದನ್ನೇ ತಮ್ಮ  ಕರ್ಮಭೂಮಿಯನ್ನಾಗಿರಿಸಿಕೊಂಡಿದ್ದಾರೆ. ತಮ್ಮ ವಿದ್ಯಾಭ್ಯಾಸ, ವೃತ್ತಿಜೀವನ, ಕ್ರಿಕೆಟ್ ಬಗ್ಗೆ ಆಸಕ್ತಿ ಕೆರಳಿದ್ದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜೋನಾಥನ್ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ್ದಾರೆ.

ಕೆಪಿಎಲ್ ಕಾಯಂ ಸದಸ್ಯ: ವಿದ್ಯಾಭ್ಯಾಸಕ್ಕೆಂದು ಕರ್ನಾಟಕಕ್ಕೆ ವಲಸೆ ಬಂದ ಜೋನಾಥನ್ ಹುಟ್ಟೂರು ನಾಗಾಲ್ಯಾಂಡ್‌ನ ದಿಮಾಪುರ್. ಇಂದಿಗೂ ಅವರ ಕುಟುಂಬ ಅಲ್ಲಿಯೇ ನೆಲೆಸಿದೆ. ಆದರೆ ಜೋನಾಥನ್ ಮಾತ್ರ ಕಳೆದ 21 ವರ್ಷಗಳಿಂದ ಕರ್ನಾಟಕದಲ್ಲಿ ಭವಿಷ್ಯ ಕಂಡುಕೊಂಡಿದ್ದಾರೆ. ಸದ್ಯ ರೈಲ್ವೇಸ್ ತಂಡದಲ್ಲಿರುವ ಜೋನಾಥನ್ ಕೆಪಿಎಲ್‌ನ ಕಾಯಂ ಆಟಗಾರ, ಕಳೆದ 6 ಆವೃತ್ತಿಗಳಲ್ಲಿ ಮೈಸೂರು, ಮಂಗಳೂರು ತಂಡದಲ್ಲಿ ಆಡಿದ್ದಾರೆ.

ಶಾಲೆಯಿಂದಲೇ ಕ್ರಿಕೆಟ್ ಬಗ್ಗೆ ಆಸಕ್ತಿ: ವಿದ್ಯಾಭ್ಯಾಸಕ್ಕಾಗಿ ನಾಗಾಲ್ಯಾಂಡ್ ತೊರೆದು ಬೆಂಗಳೂರಿಗೆ ಬಂದ ಜೋನಾಥನ್ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಸೇಂಟ್ ಜೋಸೆಫ್ ಶಾಲೆಯಲ್ಲಿ 5ನೇ ತರಗತಿ ಓದುವಾಗಲೇ ಕ್ರಿಕೆಟ್ ಶುರು ಮಾಡಿದರು. ಆರಂಭದಲ್ಲಿ ಶಾಲಾ ಮಟ್ಟದ ಕ್ರಿಕೆಟ್‌ನಲ್ಲಿ ಹೊಸ ಭರವಸೆ ಮೂಡಿಸಿದ ಜೋನಾಥನ್‌ಗೆ ಸಬ್ ಜೂನಿಯರ್ ವಿಭಾಗದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶ ದೊರೆಯಿತು. ಇದನ್ನು ಎರಡೂ ಕೈಯಲ್ಲಿ ಬಾಚಿಕೊಂಡ ಜೋನಾಥನ್ ವಿವಿಧ ವಯೋಮಿತಿಯ ರಾಜ್ಯ ತಂಡದಲ್ಲಿ ಆಡಿದರು.

ಅಪ್ಪ ಪ್ರೊಫೆಸರ್, ಅಣ್ಣ ಪೊಲೀಸ್: ‘ನನ್ನ ತಂದೆ ನಾಗಾಲ್ಯಾಂಡ್‌ನ ಕಾಲೇಜ್‌ವೊಂದರಲ್ಲಿ ಪ್ರೊಫೆಸರ್, ಅಣ್ಣ ಪೊಲೀಸ್, ನಾವು ಒಟ್ಟು 5 ಜನ ಮಕ್ಕಳು, ನಾನು 4ನೇ ಯವನು. ನಾನೊಬ್ಬನೇ ಬೆಂಗಳೂರಿಗೆ ಬಂದಿದ್ದು, ಇಲ್ಲೇ ಇರಬೇಕೆಂಬುದುಕೊಂಡಿದ್ದೇನೆ’ ಎಂದು ಜೋನಾಥನ್ ಹೇಳಿದರು.

ಕ್ರಿಕೆಟ್ ಪಟ್ಟು ಕಲಿಸಿದ ಇರ್ಫಾನ್ ಸೇಠ್: ‘ಆರಂಭದ ದಿನಗಳಲ್ಲಿ ಕ್ರಿಕೆಟ್ ಆಟದ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ಈ ಸಮಯದಲ್ಲಿ ಕೋಚ್ ಇರ್ಫಾನ್ ಸೇಠ್ ನನ್ನ ಆಟದ ಪಟ್ಟುಗಳನ್ನು ಉತ್ತಮಗೊಳಿಸಿದರು. ಸ್ವಸ್ಥಿಕ್ ಕ್ರಿಕೆಟ್ ಕ್ಲಬ್ ನನ್ನ ಆಸೆಗಳನ್ನು ಈಡೇರಿಸಿತು. ಕ್ಲಬ್‌ನಲ್ಲಿ 16, 19 ಮತ್ತು 20 ವರ್ಷದೊಳಗಿನ ತಂಡದಲ್ಲಿ ಆಡಿದ್ದೇನೆ. ವಿಶ್ವದ ಅದ್ಭುತ ಬ್ಯಾಟ್ಸ್‌ಮನ್ ಆಗಬೇಕು, ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕು ಎನ್ನುವುದು ನನ್ನ ಆಶಯ’ ಎಂದು ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸುತ್ತಾರೆ ಜೋನಾಥನ್. 

ಆರಂಭದಲ್ಲಿ ಫುಟ್ಬಾಲ್‌ನಲ್ಲಿ ಆಸಕ್ತಿ : ‘ನಾಗಾಲ್ಯಾಂಡ್‌ನಲ್ಲಿ ಇತರೆ ಕ್ರೀಡೆಗಳಿಗಿಂತ ಹೆಚ್ಚಾಗಿ ಫುಟ್ಬಾಲ್ ಆಡುತ್ತಾರೆ. ಅಲ್ಲಿಯೇ 4ನೇ ತರಗತಿವರೆಗೂ ಓದಿದ್ದ ಜೋನಾಥನ್, ಫುಟ್ಬಾಲ್ ಆಟದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರಂತೆ. ಆದರೆ, ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದ ಮೇಲೆ ಕ್ರಿಕೆಟ್ ಮೇಲೆ ಹೆಚ್ಚಿನ ಆಸಕ್ತಿ ಬೆಳೆಯಿತು. ಇದೇ ಕ್ರಿಕೆಟ್ ಆಟಗಾರನಾಗಿ ರೂಪುಗೊಳ್ಳಲು ನಾಂದಿಯಾಯಿತು. ಫುಟ್ಬಾಲ್ ಅನ್ನು ಈಗಲೂ ಇಷ್ಟಪಡುತ್ತೇನೆ. ಬಿಡುವಿನ ವೇಳೆಯಲ್ಲಿ ಗೆಳೆಯರೊಂದಿಗೆ ಫುಟ್ಬಾಲ್ ಆಡಿ ಎಂಜಾಯ್ ಮಾಡುತ್ತೇನೆ’ ಎನ್ನುತ್ತಾರೆ ಜೋನಾಥನ್. 

ಧನಂಜಯ ಎಸ್. ಹಕಾರಿ, ಕನ್ನಡಪ್ರಭ