ಪರಮೇಶ್ವರ್ ಅಲಂಕರಿಸಿದ ಸ್ಥಾನಕ್ಕೆ ಮುತ್ತಪ್ಪ ರೈ ಅಧ್ಯಕ್ಷ?
ಕಳೆದ 14 ವರ್ಷಗಳಿಂದ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಅಲಂಕರಿಸಿದ್ದ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿ ಮುತ್ತಪ್ಪ ರೈ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಬೆಂಗಳೂರು (ಸೆ.11): ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ (ಕೆಎಎ)ಯ ಅಧ್ಯಕ್ಷರಾಗಿ ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಎನ್. ಮುತ್ತಪ್ಪ ರೈ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಲು ಸೆ.10ರ ಸೋಮವಾರ ಕಡೆಯ ದಿನವಾಗಿತ್ತು. ಸಂಜೆ 5 ಗಂಟೆಯಾದರೂ ಮುತ್ತಪ್ಪ ರೈ ಹೊರತುಪಡಿಸಿ ಯಾರೊಬ್ಬರೂ ನಾಮಪತ್ರ ಸಲ್ಲಿಸಿಲ್ಲ. ಆದಕಾರಣ ಮುತ್ತಪ್ಪ ರೈ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೆಎಎ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಕಳೆದ 14 ವರ್ಷಗಳಿಂದ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಈ ಹುದ್ದೆಯನ್ನು ಅಲಂಕರಿಸಿದ್ದರು. ಅವರ ಅವಧಿ ಪೂರ್ಣಗೊಂಡಿದ್ದು ಈ ಸ್ಥಾನಕ್ಕೆ ಮುತ್ತಪ್ಪ ರೈ ಅವರು ಆಯ್ಕೆಯಾಗುತ್ತಿದ್ದಾರೆ.
ಮೊನ್ನೆ ನಾಮಪತ್ರ ಸಲ್ಲಿಕೆ:
ಪ್ರಸ್ತುತ ರಾಮನಗರ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿರುವ ಮುತ್ತಪ್ಪ ರೈ, ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿರುವ ಕೆಎಎ ಕಚೇರಿಗೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಸೆ.11ರ ಮಂಗಳವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಸೆ.19ರಂದು ರಾಜ್ಯ ಅಧ್ಯಕ್ಷ ಹುದ್ದೆ ಸೇರಿದಂತೆ, ಜಿಲ್ಲಾ ಘಟಕಗಳ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸಲು ದಿನಾಂಕವನ್ನು ಈಗಾಗಲೇ ನಿಗದಿ ಪಡಿಸಲಾಗಿದೆ. ಮರು ಆಯ್ಕೆ ಬಯಸದ ಪರಂ: 14 ವರ್ಷಗಳಿಂದ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರೇ ಕೆಎಎ ಅಧ್ಯಕ್ಷರಾಗಿ ಸತತವಾಗಿ ಆಯ್ಕೆಗೊಂಡಿದ್ದರು. ಅವರ ಅಧಿಕಾರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇದೇ ಮೇ 26ರಂದು ನಡೆದ ಚುನಾವಣೆಯಲ್ಲಿ ಸುನಿಲ್ ಕುಮಾರ್ ಶೆಟ್ಟಿ ಎಂಬುವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ, ನಿಯಮಗಳ ಉಲ್ಲಂಘಿಸಿ ಚುನಾವಣೆ ನಡೆಸಲಾಗಿದೆ ಎಂದು ಮಾಜಿ ಒಲಿಂಪಿಯನ್ ಅಶ್ವಿನಿ ನಾಚಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ಪರಿಶೀಲನೆ ನಡೆಸಿದ ನ್ಯಾಯಾಲಯ, ಚುನಾವಣೆಯನ್ನು ರದ್ದುಗೊಳಿಸಿ ಹೊಸದಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಲು ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ನ್ಯಾಯಾಲಯದ ಆದೇಶದಂತೆ ಚುನಾವಣೆ ನಡೆಸಲಾಗುತ್ತಿದೆ.
ಅಶ್ವಿನಿ ನಾಚಪ್ಪಗೆ ನಿರಾಸೆ:
ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಅಶ್ವಿನಿ ನಾಚಪ್ಪ ಅವರ ಹೆಸರನ್ನು ಈ ಬಾರಿಯ ಕೆಎಎ ಮತದಾರರ ಪಟ್ಟಿಯಿಂದಲೇ ತೆಗೆದು ಹಾಕಲಾಗಿದೆ. ಹೀಗಾಗಿ ಸ್ಪರ್ಧಿಸಲು ಅವರು ಅವಕಾಶವೇ ಇಲ್ಲದಂತಾಗಿದ್ದು, ಅವರಿಗೆ ಭಾರೀ ನಿರಾಸೆಯುಂಟಾಗಿದೆ. ಇನ್ನು ಈ ಬಾರಿಯ ಚುನಾವಣೆಯಲ್ಲಿ ಅಶ್ವಿನಿ ನಾಚಪ್ಪ ಬಣದ ಯಾವೊಬ್ಬ ಸ್ಪರ್ಧಿಗಳು ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ 29 ಜಿಲ್ಲೆಗಳಲ್ಲಿನ ಕೆಎಎ ಸಂಸ್ಥೆಗಳ ಪ್ರತಿನಿಧಿಗಳೆ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಕೆಎಎ ಅಧಿಕಾರಿಗಳು ಹೇಳಿದ್ದಾರೆ.