ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ಗೆಲುವಿನ ಓಟ ಮುಂದುವರಿದಿದೆ.  ಮಿಜೋರಾಮ್‌ ವಿರುದ್ಧ ಅಬ್ಬರಿಸಿದ ಕರ್ನಾಟ 137 ರನ್‌ ಗೆಲುವು ದಾಖಲಿಸಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಕಟಕ್‌(ಫೆ.26) : ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕದ ಗೆಲುವಿನ ಓಟ ಮುಂದುವರಿದಿದೆ. ಸೋಮವಾರ ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ‘ಡಿ’ ಗುಂಪಿನ ನಾಲ್ಕನೇ ಪಂದ್ಯದಲ್ಲಿ ಕ್ರಿಕೆಟ್‌ ಶಿಶು ಮಿಜೋರಾಮ್‌ ವಿರುದ್ಧ 137 ರನ್‌ಗಳ ಭರ್ಜರಿ ಗೆಲುವು ಸಾಧಿಸಿ, ಸತತ 4ನೇ ಗೆಲುವು ದಾಖಲಿಸಿತು. 4 ಗೆಲುವುಗಳೊಂದಿಗೆ 16 ಅಂಕ ಸಂಪಾದಿಸಿರುವ ಕರ್ನಾಟಕ, ‘ಡಿ’ ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು ಸೂಪರ್‌ ಲೀಗ್‌ಗೆ ಅರ್ಹತೆ ಪಡೆಯುವ ನೆಚ್ಚಿನ ತಂಡ ಎನಿಸಿದೆ. ತಂಡದ ನೆಟ್‌ ರನ್‌ರೇಟ್‌ +4.292 ಇದ್ದು, ಮುಂದಿನ ಹಂತಕ್ಕೇರಲು ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ಮತ್ತೊಂದೆಡೆ 4 ಪಂದ್ಯಗಳಲ್ಲಿ ಸತತ 4 ಸೋಲು ಅನುಭವಿಸಿರುವ ಮಿಜೋರಾಮ್‌ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ.

ಇದನ್ನೂ ಓದಿ: ಮೂರೇ ಮೂರು ತಪ್ಪು - ಟೀಂ ಇಂಡಿಯಾ ತೆಲೆ ಕೆಳಗಾಗಿ ಬಿತ್ತು!

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿದ ಕರ್ನಾಟಕ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 242 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು. ಕಠಿಣ ಗುರಿ ಬೆನ್ನತ್ತಿದ ಮಿಜೋರಾಮ್‌ 20 ಓವರ್‌ ಬ್ಯಾಟ್‌ ಮಾಡಿದರೂ, ಗಳಿಸಲು ಸಾಧ್ಯವಾಗಿದ್ದು 105 ರನ್‌ ಮಾತ್ರ. ತಂಡ 6 ವಿಕೆಟ್‌ಗಳನ್ನು ಕಳೆದುಕೊಂಡಿತು.

ತಂಡದ ನಾಯಕರಾಗಿರುವ ಪಂಜಾಬ್‌ನ ತರುವರ್‌ ಕೊಹ್ಲಿ (36) ಹಾಗೂ ಮುಂಬೈ ಮೂಲ ಅಖಿಲ್‌ ರಜಪೂತ್‌ (41) ಮೊದಲ ವಿಕೆಟ್‌ಗೆ 63 ರನ್‌ ಜೊತೆಯಾಟವಾಡಿ ಉತ್ತಮ ಆರಂಭ ನೀಡಿದರು. ಆದರೆ ಕೊಹ್ಲಿ ರನೌಟ್‌ ಆಗುತ್ತಿದ್ದಂತೆ ತಂಡದ ಪತನ ಆರಂಭಗೊಂಡಿತು. ಭಾನುವಾರ ಅರುಣಾಚಲ ಪ್ರದೇಶ ವಿರುದ್ಧ 5 ವಿಕೆಟ್‌ ಕಿತ್ತಿದ್ದ ಶ್ರೇಯಸ್‌ ಗೋಪಾಲ್‌, ಮಿಜೋರಾಮ್‌ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. 4 ಓವರ್‌ಗಳಲ್ಲಿ ಕೇವಲ 8 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು.

ಇದನ್ನೂ ಓದಿ: ಪಾಕಿಸ್ತಾನಿಯರಿಗೆ ವಿಸಾ ನಿರಾಕರಣೆ - ಬೆಂಗಳೂರು ಸ್ನೂಕರ್ ಟೂರ್ನಿ ಮುಂದೂಡಿಕೆ!

ಸ್ಫೋಟಕ ಆರಂಭ: ಇದಕ್ಕೂ ಮುನ್ನ ಕರ್ನಾಟಕಕ್ಕೆ ರೋಹನ್‌ ಕದಂ ಹಾಗೂ ಮಯಾಂಕ್‌ ಅಗರ್‌ವಾಲ್‌ (20) ಸ್ಫೋಟಕ ಆರಂಭ ಒದಗಿಸಿದರು. ಈ ಜೋಡಿ ಕೇವಲ 4.2 ಓವರ್‌ಗಳಲ್ಲಿ 52 ರನ್‌ ಸೇರಿಸಿತು. ಮಯಾಂಕ್‌ ಔಟಾದ ಬಳಿಕ, ರೋಹನ್‌ ಜತೆಯಾದ ಕರುಣ್‌ ನಾಯರ್‌, ಮಿಜೋರಾಮ್‌ ಬೌಲರ್‌ಗಳನ್ನು ಚೆಂಡಾಡಿದರು. ಬೌಂಡರಿ, ಸಿಕ್ಸರ್‌ಗಳು ಸಿಡಿದವು.

51 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ ಸಿಡಿಸಿದ ರೋಹನ್‌, 78 ರನ್‌ ಗಳಿಸಿ ಔಟಾದರು. ಇದರೊಂದಿಗೆ 128 ರನ್‌ಗಳ 2ನೇ ವಿಕೆಟ್‌ ಜೊತೆಯಾಟಕ್ಕೆ ತೆರೆಬಿತ್ತು. 16ನೇ ಓವರ್‌ನ 5ನೇ ಎಸೆತದಲ್ಲಿ ರೋಹನ್‌ ವಿಕೆಟ್‌ ಪತನಗೊಂಡರೆ, 16ನೇ ಓವರ್‌ನ ಅಂತಿಮ ಎಸೆತದಲ್ಲಿ ಕರುಣ್‌ ಔಟಾದರು. ಕೇವಲ 33 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್‌ ಚಚ್ಚಿದ ಕರುಣ್‌, ರಾಲ್ಟೆಗೆ 2ನೇ ಬಲಿಯಾದರು.

ಇದನ್ನೂ ಓದಿ: ಸೌತ್ಆಫ್ರಿಕಾದಲ್ಲಿ ಟೆಸ್ಟ್ ಸರಣಿಗೆ ಗೆದ್ದ ಏಷ್ಯಾದ ಮೊದಲ ತಂಡ ಶ್ರೀಲಂಕಾ!

17ನೇ ಓವರ್‌ನಲ್ಲಿ ವಿಕೆಟ್‌ ಕೀಪರ್‌ ಲುವ್ನಿತ್‌ ಸಿಸೋಡಿಯಾ (01) ವಿಕೆಟ್‌ ಚೆಲ್ಲಿದರು. 9 ರನ್‌ ಅಂತರದಲ್ಲಿ 3 ವಿಕೆಟ್‌ ಕಳೆದುಕೊಂಡರೂ, ಕರ್ನಾಟಕಕ್ಕೆ ಹಿನ್ನಡೆಯಾಗಲಿಲ್ಲ. ನಾಯಕ ಮನೀಶ್‌ ಪಾಂಡೆ ಹಾಗೂ ಆಲ್ರೌಂಡರ್‌ ಜೆ.ಸುಚಿತ್‌, ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು. 13 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್‌ನೊಂದಿಗೆ ಪಾಂಡೆ 33 ರನ್‌ ಗಳಿಸಿ ಅಜೇಯರಾಗಿ ಉಳಿದರೆ, 8 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ ಸುಚಿತ್‌ 26 ರನ್‌ ಸಿಡಿಸಿ ಔಟಾಗದೆ ಉಳಿದರು. ಕರ್ನಾಟಕ ಸತತ 2ನೇ ಪಂದ್ಯದಲ್ಲಿ 200ಕ್ಕೂ ಹೆಚ್ಚು ಮೊತ್ತ ದಾಖಲಿಸಿತು. ಮಿಜೋರಾಮ್‌ ಪರ ಆಡುತ್ತಿರುವ ಕರ್ನಾಟಕದ ಸಿನಾನ್‌ ಖಾದಿರ್‌ 4 ಓವರ್‌ಗಳಲ್ಲಿ 54 ರನ್‌ ಚಚ್ಚಿಸಿಕೊಂಡರು. ಕರ್ನಾಟಕ ಬುಧವಾರ ‘ಡಿ’ ಗುಂಪಿನ ತನ್ನ 5ನೇ ಪಂದ್ಯದಲ್ಲಿ ಛತ್ತೀಸ್‌ಗಢ ತಂಡವನ್ನು ಎದುರಿಸಲಿದೆ.