ಚಹಾ ವಿರಾಮದ ಹೊತ್ತಿಗೇ 6 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶ ಫಾಲೋಆನ್ ಸುಳಿಗೆ ಸಿಲುಕುವುದು ಬಹುತೇಕ ಖಚಿತ ಎಂಬಂತಾಗಿತ್ತು.
ಹೈದರಾಬಾದ್(ಫೆ.11): ಆಲ್ರೌಂಡರ್ ಶಕೀಬ್ ಅಲ್ ಹಸನ್ (82) ಹಾಗೂ ನಾಯಕ ಮುಷ್ಪೀಕರ್ ರಹೀಮ್ (81) ಮತ್ತು ಮೆಹದಿ ಹಸನ್ ಮಿರಾಜ್ (51) ಅವರುಗಳ ತ್ರಿವಳಿ ಅರ್ಧಶತಕದ ಮಧ್ಯದಲ್ಲೂ ಪ್ರವಾಸಿ ಬಾಂಗ್ಲಾದೇಶ ತಂಡ ಆತಿಥೇಯ ಭಾರತದ ಎದುರು ಹಿನ್ನಡೆ ಅನುಭವಿಸಿದೆ.
ಇಲ್ಲಿನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ಮೂರನೇ ದಿನದಾಂತ್ಯಕ್ಕೆ ಬಾಂಗ್ಲಾದೇಶ 104 ಓವರ್'ಗಳಲ್ಲಿ 6 ವಿಕೆಟ್ ನಷ್ಟಕ್ಕೆ 322 ರನ್ ಕಲೆಹಾಕಿದೆ. 6 ವಿಕೆಟ್‌ಗೆ 687 ರನ್'ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿರುವ ಭಾರತದ ಎದುರು ಇನ್ನೂ 365 ರನ್ ಹಿನ್ನಡೆಯಲ್ಲಿರುವ ಬಾಂಗ್ಲಾದೇಶ ಹಾದಿ ಇನ್ನೂ ದುರ್ಗಮವಾಗಿದೆ.
ಏಳನೇ ವಿಕೆಟ್‌ಗೆ ಮುರಿಯದ 87 ರನ್ ಕಲೆಹಾಕಿರುವ ಮುಷ್ಪೀಕರ್ ರಹೀಮ್ ಹಾಗೂ ಮೆಹೆದಿ ಜೋಡಿ ನಾಲ್ಕನೇ ದಿನದಂದು ನೀಡುವ ಪ್ರದರ್ಶನದ ಆಧಾರದಲ್ಲಿ ಅದರ ಅಳಿವು-ಉಳಿವು ನಿರ್ಧರಿಸಿದೆ.
ಚಹಾ ವಿರಾಮದ ಹೊತ್ತಿಗೇ 6 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶ ಫಾಲೋಆನ್ ಸುಳಿಗೆ ಸಿಲುಕುವುದು ಬಹುತೇಕ ಖಚಿತ ಎಂಬಂತಾಗಿತ್ತು. ಆದರೆ, ಮುಷ್ಪೀಕರ್ ಹಾಗೂ ಮೆಹೆದಿ ತೋರಿದ ದಿಟ್ಟ ಪ್ರತಿರೋಧ ಆ ಅಪಾಯದಿಂದ ತಂಡವನ್ನು ಪಾರು ಮಾಡಿತು. ಆದಾಗ್ಯೂ ಫಾಲೋಆನ್'ನಿಂದ ಬಚಾವಾಗಲು ಅದು ಇನ್ನೂ 165 ರನ್ ಪೇರಿಸಬೇಕಿದ್ದು, ಬಾಂಗ್ಲಾದೇಶದ ಬಹುದೊಡ್ಡ ಸವಾಲೇ ಇದೆ.
ಸ್ಕೋರ್ ವಿವರ
ಭಾರತ ಮೊದಲ ಇನ್ನಿಂಗ್ಸ್ ; 687/6
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್: 322/6
ಶಕೀಬ್ ಅಲ್ ಹಸನ್ :82
ಮುಷ್ಪೀಕರ್ ರಹೀಮ್ : 81*
ಮೆಹದಿ ಹಸನ್ ಮಿರಾಜ್ : 51*
