ಮೂರನೇ ದಿನದಾಟದಂತ್ಯಕ್ಕೆ ಭಾರತ ತನ್ನ ಮೊದಲ ಇನ್ನಿಂಗ್ಸಲ್ಲಿ 7 ವಿಕೆಟ್ ನಷ್ಟಕ್ಕೆ 451 ರನ್ ಗಳಿಸಿದೆ. ಈ ಮೂಲಕ 51 ರನ್'ಗಳ ಮೊದಲ ಇನ್ನಿಂಗ್ಸ್ ಪಡೆದುಕೊಂಡು ಸುಸ್ಥಿತಿಯಲ್ಲಿದೆ.
ಮುಂಬೈ(ಡಿ. 10): ವಿರಾಟ್ ಕೊಹ್ಲಿ ಮತ್ತು ಮುರಳಿ ವಿಜಯ್ ಅವರ ಭರ್ಜರಿ ಶತಕದ ನೆರವಿನಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮುನ್ನಡೆ ಗಳಿಸಿಕೊಳ್ಳಲು ಯಶಸ್ವಿಯಾಗಿದೆ. ಇಂದು ಮುಕ್ತಾಯಗೊಂಡ ಮೂರನೇ ದಿನದಾಟದಂತ್ಯಕ್ಕೆ ಭಾರತ ತನ್ನ ಮೊದಲ ಇನ್ನಿಂಗ್ಸಲ್ಲಿ 7 ವಿಕೆಟ್ ನಷ್ಟಕ್ಕೆ 451 ರನ್ ಗಳಿಸಿದೆ. ಈ ಮೂಲಕ 51 ರನ್'ಗಳ ಮೊದಲ ಇನ್ನಿಂಗ್ಸ್ ಪಡೆದುಕೊಂಡು ಸುಸ್ಥಿತಿಯಲ್ಲಿದೆ.
ನಿನ್ನೆ ಒಂದು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದ್ದ ಭಾರತ ಇಂದು ಆರಂಭದಲ್ಲೇ ಪೂಜಾರ ವಿಕೆಟನ್ನು ಕಳೆದುಕೊಂಡಿತು. ಮುರಳಿ ವಿಜಯ್ ಮತ್ತು ಪೂಜಾರ ನಡುವಿನ 2ನೇ ವಿಕೆಟ್'ನ ಜೊತೆಯಾಟ 107 ರನ್'ಗೆ ಅಂತ್ಯಗೊಂಡಿತು. ಪೂಜಾರ ನಿರ್ಗಮನದ ಬಳಿಕ ಮುರಳಿ ವಿಜಯ್'ಗೆ ಜೊತೆಯಾದವರು ನಾಯಕ ವಿರಾಟ್ ಕೊಹ್ಲಿ. ಇವರಿಬ್ಬರು 3ನೇ ವಿಕೆಟ್'ಗೆ 116 ರನ್ ಸೇರಿಸಿದರು. ಮುರಳಿ ವಿಜಯ್ 8ನೇ ಶತಕ ದಾಖಲಿಸಿದರು. ಮುರಳಿ ಔಟಾದ ಬಳಿಕ ಭಾರತ ಬಹುಬೇಗನೇ ಇನ್ನಷ್ಟು ವಿಕೆಟ್ ಕಳೆದುಕೊಂಡಿತು. ಕರುಣ್ ನಾಯರ್, ಪಾರ್ಥಿವ್ ಪಟೇಲ್ ಮತ್ತು ಆರ್.ಅಶ್ವಿನ್ ಹೆಚ್ಚು ಸ್ಕೋರ್ ಮಾಡದೇ ಪೆವಿಲಿಯನ್'ಗೆ ಮರಳಿದರು.
ಆದರೆ, ರವೀಂದ್ರ ಜಡೇಜಾ ಮತ್ತು ಜಯಂತ್ ಯಾದವ್ ಅವರು ನಾಯಕ ಕೊಹ್ಲಿ ಜೊತೆ ಉತ್ತಮ ಜೊತೆಯಾಟದಲ್ಲಿ ಭಾಗಿಯಾಗಿ ತಂಡದ ಸ್ಕೋರು ಉಬ್ಬುವಂತೆ ಸಹಾಯ ಮಾಡಿದರು. ಜಡೇಜಾ 25 ರನ್ ಗಳಿಸಿದರೆ, ಜಯಂತ್ ಯಾದವ್ ಅಜೇಯ 30 ರನ್ ಪೇರಿಸಿದರು. ಈ ನಡುವೆ ನಾಯಕ ಕೊಹ್ಲಿ ತಮ್ಮ 15ನೇ ಟೆಸ್ಡ್ ಶತಕ ಭಾರಿಸಿ 147 ರನ್'ಗಳೊಂದಿಗೆ ಅಜೇಯರಾಗಿ ಉಳಿದರು.
ಸ್ಕೋರು ವಿವರ(3ನೇ ದಿನ):
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 130.1 ಓವರ್ 400 ರನ್ ಆಲೌಟ್
(ಕೀಟನ್ ಜೆನ್ನಿಂಗ್ಸ್ 112, ಜೋಸ್ ಬಟ್ಲರ್ 76, ಮೊಯೀನ್ ಅಲಿ 50, ಅಲಸ್ಟೇರ್ ಕುಕ್ 46, ಬೆನ್ ಸ್ಟೋಕ್ಸ್ 31, ಜೇಕ್ ಬಾಲ್ 31 ರನ್ - ಆರ್.ಅಶ್ವಿನ್ 112/6, ರವೀಂದ್ರ ಜಡೇಜಾ 109/4)
ಭಾರತ ಮೊದಲ ಇನ್ನಿಂಗ್ಸ್ 142 ಓವರ್ 451/7
(ವಿರಾಟ್ ಕೊಹ್ಲಿ ಅಜೇಯ 147, ಮುರಳಿ ವಿಜಯ್ 136, ಜಯಂತ್ ಯಾದವ್ ಅಜೇಯ 30, ರವೀಂದ್ರ ಜಡೇಜಾ 25, ಕೆಎಲ್ ರಾಹುಲ್ 24 ರನ್ - ಜೋ ರೂಟ್ 18/2, ಮೊಯೀನ್ ಅಲಿ 139/2, ಅದಿಲ್ ರಷೀದ್ 152/2)
