ದೆಹಲಿ(ಸೆ. 18): ಹಾಲಿ ರಣಜಿ ಚಾಂಪಿಯನ್ ಮುಂಬೈ ಹಾಗೂ ನ್ಯೂಜಿಲೆಂಡಿಗರ ನಡುವಿನ ಮೂರು ದಿನಗಳ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇಂದು ನಡೆದ ಕೊನೆಯ ದಿನದಾಟದಲ್ಲಿ ಕಿವೀಸ್ ಪಡೆಯ ಎರಡನೇ ಇನ್ನಿಂಗ್ಸ್ 235 ರನ್'ಗೆ ಅಂತ್ಯಗೊಂಡಿತು. ಮುಂಬೈ ತಂಡಕ್ಕೆ ಗೆಲುವಿನ ಗುರಿ ಕೇವಲ 96 ರನ್ ಸಿಕ್ಕಿತಾದರೂ ಪಂದ್ಯದ ಅವಧಿ ಮುಕ್ತಾಯಗೊಂಡಿತ್ತು.

ನ್ಯೂಜಿಲೆಂಡರ್ಸ್'ನ ಎರಡನೇ ಇನ್ನಿಂಗ್ಸ್'ನ ಹೈಲೈಟ್ ಎನಿಸಿದ್ದು ಲೂಕ್ ರೋಂಚಿಯವರ ಶತಕ. ಇವರನ್ನು ಬಿಟ್ಟರೆ ಗಮನ ಸೆಳೆದದ್ದು ವ್ಯಾಟ್ಲಿಂಗ್ ಅವರ 43 ರನ್ ಆಟ. ಮುಂಬೈನ ಬೌಲರ್'ಗಳಲ್ಲಿ ಪರೀಕ್ಷಿತ್ ವಾಲ್ಸಂಗಕರ್, ಸಿದ್ದೇಶ್ ಲಾಡ್ ಮತ್ತು ವಿಜಯ್ ಗೋಹಿಲ್ ಕ್ರಮವಾಗಿ 3, 2 ಮತ್ತು 2 ವಿಕೆಟ್ ಸಂಪಾದಿಸಿ ಕಿವೀಸ್ ಟೀಮನ್ನು ಕಟ್ಟಿಹಾಕಿದರು. ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸಲ್ಲಿ 6 ವಿಕೆಟ್ ನಷ್ಟಕ್ಕೆ 431 ರನ್ ಗಳಿಸಿದ್ದ ಮುಂಬೈ ತಂಡ ಮೂರನೇ ದಿನದ ಆರಂಭದಲ್ಲಿ ಆಟ ಮುಂದುವರಿಸಿ 8 ವಿಕೆಟ್ ನಷ್ಟಕ್ಕೆ 464 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಸಿದ್ದೇಶ್ ಲಾಡ್ ಶತಕ ಪೂರೈಸಿದ್ದು ವಿಶೇಷ. ಇದರೊಂದಿಗೆ ಮೂವರು ಮುಂಬೈ ಆಟಗಾರರು ಒಂದೇ ಇನ್ನಿಂಗ್ಸಲ್ಲಿ ಶತಕ ಭಾರಿಸಿದಂತಾಯಿತು. ಕೌಸ್ತುಭ್ ಪವಾರ್, ಸೂರ್ಯಕುಮಾರ್ ಯಾದವ್ ಮತ್ತು ಸಿದ್ದೇಶ್ ಲಾಡ್ ಶತಕ ಗಳಿಸಿದರು. ರೋಹಿತ್ ಶರ್ಮಾ ಕೇವಲ 18 ರನ್ ಗಳಿಸಿದ್ದು ನಿರಾಶೆ ಮೂಡಿಸಿತು. ಉದಯೋನ್ಮುಖ ಪ್ರತಿಭೆ ಅರ್ಮಾನ್ ಜಾಫರ್ 69 ರನ್ ಗಳಿಸಿ ತಮ್ಮ ಮೇಲಿದ್ದ ನಿರೀಕ್ಷೆಯನ್ನು ಉಳಿಸಿಕೊಂಡರು.

ಭಾರತ ಪ್ರವಾಸದಲ್ಲಿರುವ ನ್ಯೂಜಿಲೆಂಡಿಗರಿಗೆ ಇದು ಅಭ್ಯಾಸದ ಪಂದ್ಯವಾಗಿದ್ದು ಮುಂದಿನ ದಿನಗಳಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 5 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನು ಆಡಲಿದೆ. ಸೆ. 22ರಂದು ಮೊದಲ ಕ್ರಿಕೆಟ್ ಟೆಸ್ಟ್ ಕಾನಪುರ್'ನಲ್ಲಿ ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ಯಾವ ಪಂದ್ಯಗಳೂ ಈ ಬಾರಿ ನಡೆಯುತ್ತಿಲ್ಲ. ವಿಶಾಖಪಟ್ಟಣಂನಲ್ಲಿ ಕೊನೆಯ ಏಕದಿನ ಕ್ರಿಕೆಟ್ ಪಂದ್ಯ ನಡೆಯುತ್ತಿರುವುದು ಬಿಟ್ಟರೆ ದಕ್ಷಿಣ ಭಾರತದಲ್ಲಿ ಬೇರಾವ ಪಂದ್ಯವೂ ನಡೆಯುತ್ತಿಲ್ಲ.

ಸ್ಕೋರು ವಿವರ:

ನ್ಯೂಜಿಲೆಂಡರ್ಸ್ ಮೊದಲ ಇನ್ನಿಂಗ್ಸ್ 75 ಓವರ್ 324/7(ಡಿಕ್ಲೇರ್)
(ಟಾಮ್ ಲಾಥಮ್ 55, ಕೇನ್ ವಿಲಿಯಮ್ಸನ್ 50, ಮಿಶೆಲ್ ಸ್ಯಾಂಟ್ನೆರ್ 45, ರಾಸ್ ಟೇಲರ್ 41, ಮಾರ್ಕ್ ಕ್ರೇಗ್ 33, ಹೆನ್ರಿ ನಿಕೋಲ್ಸ್ 29, ಈಶ್ ಸೋಧಿ ಅಜೇಯ 29 ರನ್ - ಬಲ್ವಿಂದರ್ ಸಿಂಗ್ ಸಂಧು 21/2)

ಮುಂಬೈ ಮೊದಲ ಇನ್ನಿಂಗ್ಸ್ 464/8(ಡಿಕ್ಲೇರ್)
ಸೂರ್ಯಕುಮಾರ್ ಯಾದವ್ 103, ಕೌಸ್ತುಭ್ ಪವಾರ್ 100, ಸಿದ್ದೇಶ್ ಲಾಡ್ ಅಜೇಯ 100, ಅರ್ಮಾನ್ ಜಾಫರ್ 69, ಆದಿತ್ಯ ತಾರೆ 53 ರನ್ - ಈಶ್ ಸೋಧಿ 132/2)

ನ್ಯೂಜಿಲೆಂಡರ್ಸ್ ಎರಡನೇ ಇನ್ನಿಂಗ್ಸ್ 66.4 ಓವರ್ 235 ರನ್ ಆಲೌಟ್
(ಲೂಕ್ ರೋಂಚಿ 107, ಬಿ.ವ್ಯಾಟ್ಲಿಂಗ್ 43, ಟಾಮ್ ಲಾಥಮ್ 25 ರನ್ - ಪರೀಕ್ಷಿತ್ ವಾಲ್ಸಂಗಕರ್ 41/3, ಸಿದ್ದೇಶ್ ಲಾಡ್ 11/2, ವಿಜಯ್ ಗೋಹಿಲ್ 61/2)