ಪಂದ್ಯದ ನಾಲ್ಕನೇ ದಿನದಂದು ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕುವುದರೊಂದಿಗೆ ಗುಜರಾತ್‌ಗೆ ದಿಟ್ಟ ಪೈಪೋಟಿ ನೀಡಲು ನಿರ್ಧರಿಸಿರುವ ತಂಡದ ಪರ ನಾಯಕ ಆದಿತ್ಯ ತಾರೆ 13 ಮತ್ತು ಸೂರ್ಯಕುಮಾರ್ ಯಾದವ್ 45 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಇಂದೋರ್(ಜ.12): ಬರೋಬ್ಬರಿ ನೂರು ರನ್'ಗಳ ಮೊದಲ ಇನ್ನಿಂಗ್ಸ್ ಹಿನ್ನಡೆಯ ಬಳಿಕ ಮತ್ತೆ ಪುಟಿದೆದ್ದು ನಿಂತಿರುವ ಹಾಲಿ ಚಾಂಪಿಯನ್ ಮುಂಬೈ, ಪ್ರತಿಷ್ಠಿತ ರಣಜಿ ಟ್ರೋಫಿ ಫೈನಲ್ ಹಣಾಹಣಿಯಲ್ಲಿ ಗುಜರಾತ್ ವಿರುದ್ಧ ಮರು ಹೋರಾಟಕ್ಕೆ ಇಳಿದಿದೆ.
ಇಲ್ಲಿನ ಹೋಳ್ಕರ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದ ಅಂತ್ಯಕ್ಕೆ ಮುಂಬೈ ತನ್ನ ದ್ವಿತೀಯ ಇನ್ನಿಂಗ್ಸ್ನಲ್ಲಿ 67 ಓವರ್ಗಳಲ್ಲಿ 3 ವಿಕೆಟ್ಗೆ 208 ರನ್ ಕಲೆಹಾಕಿದ್ದು, ಆ ಮೂಲಕ 108 ರನ್ ಮುನ್ನಡೆ ಕಂಡಿದೆ.
ಪಂದ್ಯದ ನಾಲ್ಕನೇ ದಿನದಂದು ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕುವುದರೊಂದಿಗೆ ಗುಜರಾತ್ಗೆ ದಿಟ್ಟ ಪೈಪೋಟಿ ನೀಡಲು ನಿರ್ಧರಿಸಿರುವ ತಂಡದ ಪರ ನಾಯಕ ಆದಿತ್ಯ ತಾರೆ 13 ಮತ್ತು ಸೂರ್ಯಕುಮಾರ್ ಯಾದವ್ 45 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ಶ್ರೇಯಸ್ ಅರ್ಧಶತಕ
ಇತ್ತ ಗುಜರಾತ್ನ ಮೊದಲ ಹಂತದ ಹೋರಾಟ ಮುಗಿದ ಬಳಿಕ ದ್ವಿತೀಯ ಇನ್ನಿಂಗ್ಸ್ಗೆ ಇಳಿದ ಮುಂಬೈ ಎಚ್ಚರಿಕೆಯ ಹೆಜ್ಜೆ ಇರಿಸಿತು. ಆರಂಭಿಕರಾದ ಅಖಿಲ್ ಹೆರ್ವಾಡ್ಕರ್ (16) ಹಾಗೂ ಪೃಥ್ವಿ ಶಾ (44) ಮೊದಲ ವಿಕೆಟ್ಗೆ 54 ರನ್ ಕಲೆಹಾಕಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ ಅರ್ಧಶತಕ ದಾಖಲಿಸಿದ್ದ ಪೃಥ್ವಿ ಶಾ, ಕೇವಲ 6 ರನ್ಗಳಿಂದ ಮತ್ತೊಮ್ಮೆ ಈ ಸಾಧನೆಯಿಂದ ವಂಚಿತರಾದರೆ, ಹೆರ್ವಾಡ್ಕರ್ ಅಸ್ಥಿರ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ, ಈ ಹಂತದಲ್ಲಿ ಜತೆಯಾದ ಶ್ರೇಯಸ್ ಅಯ್ಯರ್ (82) ಹಾಗೂ ಸೂರ್ಯಕುಮಾರ್ ಯಾದವ್ (45) ಮೂರನೇ ವಿಕೆಟ್'ಗೆ ಮನೋಜ್ಞ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿಯ 127 ರನ್'ಗಳ ಅದ್ಭುತ ಜತೆಯಾಟವು ಗುಜರಾತ್ ಹಿನ್ನಡೆ ಅನುಭವಿಸಲು ಕಾರಣವಾಯಿತು. ಸೂರ್ಯಕುಮಾರ್ ನಿಧಾನಗತಿಯ ಆಟಕ್ಕೆ ಮೊರೆ ಹೋದರೆ, ಶ್ರೇಯಸ್ ಅಯ್ಯರ್ ಆಕ್ರಮಣಕಾರಿ ಆಟದಿಂದ ಯಶಸ್ವಿ ಅರ್ಧಶತಕ ಪೂರೈಸಿದರೂ, ಶತಕದಿಂದ ವಂಚಿತವಾದರು.
ಮಧ್ಯಮ ವೇಗಿ ಚಿಂತನ್ ಗಜ ಮೂರು ವಿಕೆಟ್ ಗಳಿಸಿದರೆ, ಮಿಕ್ಕವರು ವಿಕೆಟ್ ಪಡೆಯುವಲ್ಲಿ ವಿಫಲವಾದರು.
ಮೂರಂಕಿ ಮುನ್ನಡೆ
ಇದಕ್ಕೂ ಮುನ್ನ ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ಗೆ 291 ರನ್'ಗಳಿಂದ ಆಟ ಮುಂದುವರೆಸಿದ ಗುಜರಾತ್, ಬಾಲಂಗೋಚಿಗಳ ತಿಣುಕಾಟದ ಆಟದೊಂದಿಗೆ ಪ್ರಯಾಸದಿಂದಲೇ 100 ರನ್ ಮುನ್ನಡೆ ಕಂಡಿತು. ಉಳಿದ ನಾಲ್ಕು ವಿಕೆಟ್'ಗಳಿಂದ ಅದು ಗಳಿಸಿದ್ದು ಕೇವಲ 37 ರನ್'ಗಳನ್ನಷ್ಟೆ. ಹದಿನಾರು ರನ್ ಗಳಿಸಿದ್ದ ರುಶ್ ಕುಲಾರಿಯಾ ಅದಕ್ಕೆ 11 ರನ್ ಪೇರಿಸಿ ಬಲ್ವೀಂದರ್ ಸಿಂಗ್ ಬೌಲಿಂಗ್ನಲ್ಲಿ ಎಲ್'ಬಿ ಬಲೆಗೆ ಬಿದ್ದರೆ, ಯಾವುದೇ ರನ್ ಗಳಿಸದೆ ಕ್ರೀಸ್'ನಲ್ಲಿದ್ದ ಚಿರಾಗ್ ಗಾಂಧಿ 17 ರನ್'ಗೆ ವಿಕೆಟ್ ಒಪ್ಪಿಸಿದರು. ಮಿಕ್ಕವರ ಪೈಕಿ ಚಿಂತನ್ ಗಜ 11 ರನ್ ಗಳಿಸಿ ಅಜೇಯರಾಗುಳಿದರೆ, ಆರ್.ಪಿ. ಸಿಂಗ್ (8) ಮತ್ತು ಹಾರ್ದಿಕ್ ಪಟೇಲ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಮುಂಬೈ ಪರ ವೇಗಿ ಶಾರ್ದೂಲ್ ಠಾಕೂರ್ 84ಕ್ಕೆ 4 ವಿಕೆಟ್ ಗಳಿಸಿದರೆ, ಬಲ್ವೀಂದರ್ ಸಂಧು ಮತ್ತು ಅಭಿಷೇಕ್ ನಾಯರ್ ತಲಾ ಮೂರು ವಿಕೆಟ್ ಉರುಳಿಸಿದರು.
ಸ್ಕೋರ್ ವಿವರ
ಮುಂಬೈ ಮೊದಲ ಇನ್ನಿಂಗ್ಸ್: 228
ಗುಜರಾತ್ ಮೊದಲ ಇನ್ನಿಂಗ್ಸ್: 328
ಮುಂಬೈ ದ್ವಿತೀಯ ಇನ್ನಿಂಗ್ಸ್: 208/3
