ಜೈಪುರ: ಜೋಪ್ರಾ ಆರ್ಚರ್ ಕರಾರುವಕ್ಕಾದ ದಾಳಿಗೆ ತತ್ತರಿಸಿದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 167 ರನ್ ಕಲೆಹಾಕಿದ್ದು, ರಾಜಸ್ಥಾನ ರಾಯಲ್ಸ್'ಗೆ ಗೆಲ್ಲಲು 168 ರನ್'ಗಳ ಗುರಿ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಓವರ್'ನಲ್ಲೇ ಮುಂಬೈ ಎವಿನ್ ಲೆವಿಸ್ ವಿಕೆಟ್ ಕಳೆದುಕೊಂಡಿತು. ಎರಡನೇ ವಿಕೆಟ್'ಗೆ ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಜೋಡಿ ಶತಕದ ಜತೆಯಾಟ(129)ವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಸೂರ್ಯಕುಮಾರ್ ಯಾದವ್ 72 ರನ್ ಸಿಡಿಸಿದರೆ, ಇಶಾನ್ ಕಿಶನ್ 58 ರನ್ ಚಚ್ಚಿದರು. ಈ ಜೋಡಿಯನ್ನು ದವಳ್ ಕುಲಕರ್ಣಿ ಬೇರ್ಪಡಿಸಿದರು. ಕಿಶನ್ 58 ರನ್ ಬಾರಿಸಿ ಪೆವಿಲಿಯನ್ ಸೇರಿದರೆ, ಸೂರ್ಯಕುಮಾರ್ ಅವರನ್ನು ಉನಾದ್ಕತ್ ಬಲಿ ಪಡೆದರು.

ದಿಢೀರ್ ಕುಸಿದ ಮಧ್ಯಮ ಕ್ರಮಾಂಕ:

ಸೂರ್ಯಕುಮಾರ್ ಯಾದವ್ ಪೆವಿಲಿಯನ್ ಸೇರುವ ಮುನ್ನ ಮುಂಬೈ 15.2 ಓವರ್'ಗಳಲ್ಲಿ 135/2 ರನ್'ಗಳಿಸಿ ಸುಭದ್ರವಾಗಿತ್ತು. ಆದರೆ ಸೂರ್ಯಕುಮಾರ್ ವಿಕೆಟ್ ಬೀಳುತ್ತಿದ್ದಂತೆ ದಿಢೀರ್ ಕುಸಿತ ಕಂಡ ಮುಂಬೈ ಕೊನೆಯ 4.2 ಓವರ್'ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗಳಿಸಿದ್ದು 32 ರನ್ ಮಾತ್ರ. ರೋಹಿತ್(0), ಕೃನಾಲ್ ಪಾಂಡ್ಯ(7), ಹಾರ್ದಿಕ್ ಪಾಂಡ್ಯ(4) ಮಿಚೆಲ್ ಮೆಕ್'ಲಾಘನ್(0) ನಿರಾಸೆ ಮೂಡಿಸಿದರು. ಜೋಪ್ರಾ ಅರ್ಚರ್ 22 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ದವಳ್ ಕುಲಕರ್ಣಿ 2 ವಿಕೆಟ್ ಪಡೆದು ಮಿಂಚಿದರು.