ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕ ಯಾರು ಅನ್ನೋ ಪ್ರಶ್ನೆಗೆ ಒಂದೇ ಉತ್ತರ ರೋಹಿತ್ ಶರ್ಮಾ. ಐಪಿಎಲ್ ಟೂರ್ನಿಯಲ್ಲೂ ರೋಹಿತ್ ಬೆಸ್ಟ್ ಕ್ಯಾಪ್ಟನ್ ಅನ್ನೋದರಲ್ಲಿ ಎರಡು ಮಾತಿಲ್ಲ. ಮುಂಬೈ ಇಂಡಿಯನ್ಸ್ ತೊರೆಯುವ ಪ್ರಶ್ನೆಗೆ ರೋಹಿತ್ ಶರ್ಮಾ ನೀಡಿದ ಉತ್ತರವೇನು?
ಮುಂಬೈ(ಸೆ.02): ಐಪಿಎಲ್ ಟೂರ್ನಿಯಲ್ಲಿ ಯಶಸ್ವಿ ನಾಯಕರ ಪೈಕಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. 3 ಬಾರಿ ಮುಂಬೈ ತಂಡಕ್ಕೆ ಐಪಿಎಲ್ ಚಾಂಪಿಯನ್ ಕಿರೀಟ ತೊಡಿಸಿದ ನಾಯಕ ರೋಹಿತ್ ಶರ್ಮಾ.
ಆರಂಭಿಕ 3 ಆವೃತ್ತಿಗಳಲ್ಲಿ ಡೆಕ್ಕನ್ ಚಾರ್ಜಸ್ ತಂಡದ ಪರ ಆಡಿದ್ದ ರೋಹಿತ್ ಶರ್ಮಾ 2011ರಲ್ಲಿ ಮುಂಬೈ ಇಂಡಿಯನ್ಸ್ ಸೇರಿಕೊಂಡರು. 2013ರಲ್ಲಿ ತಂಡದ ನಾಯಕತ್ವ ವಹಿಸಿದ ರೋಹಿತ್ ಶರ್ಮಾ, ಮುಂಬೈ ತಂಡಕ್ಕೆ ಹೊಸ ರೂಪ ನೀಡಿದರು.
ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವ ರೋಹಿತ್ ಶರ್ಮಾ, ಅಭಿಮಾನಿಯೊಬ್ಬರ ಪ್ರಶ್ನೆಗೆ ತಬ್ಬಿಬ್ಬಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಸ್ಕ್ ರೋಹಿತ್ ಶರ್ಮಾ ಅನ್ನೋ ಅಭಿಮಾನಿಗಳ ಜೊತೆಗಿನ ಸಂವಾದಲ್ಲಿ ಅಭಿಮಾನಿ ಭವೇಶ್ ಕುಶ್ವಾ ಬೌನ್ಸರ್ ಎಸೆದಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಒಂದು ವೇಳೆ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವುದಾದರೆ ಯಾವ ತಂಡದ ಪರ ಆಡುತ್ತೀರಿ ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ರೋಹಿತ್ ಅಷ್ಟೇ ಫನ್ನಿಯಾಗಿ ಉತ್ತರಿಸಿದ್ದಾರೆ.
ನಿಮ್ಮ ಪ್ರಶ್ನೆಗೆ ಉತ್ತರಿಸಿದ್ದರೆ, ನನಗೆ ನನ್ನ ಫ್ರಾಂಚೈಸಿ ಮಾಲೀಕರಿಂದ ಕರೆ ಬರುವುದು ಖಚಿತ ಎಂದು ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ಅಭಿಮಾನಿ ಪ್ರಶ್ನೆಗೆ ರೋಹಿತ್ ತಮಾಷೆಯಾಗಿ ಉತ್ತರ ನೀಡಿದ್ದಾರೆ.
