ಒಂದೊಮ್ಮೆ ಗುಜರಾತ್ ಈ ಮೊತ್ತವನ್ನು ಭೇದಿಸಿ ಜಯ ಸಾಧಿಸಿದ್ದೇ ಆದಲ್ಲಿ, ರಣಜಿ ಕ್ರಿಕೆಟ್‌ನಲ್ಲೊಂದು ದಾಖಲೆ ಬರೆದಂತಾಗಲಿದೆ.
ಇಂದೋರ್(ಜ.13): ಸೇರಿಗೆ ಸವ್ವಾಸೇರು ಎಂಬಂತೆ ಜಿದ್ದಾಜಿದ್ದಿನ ಸೆಣಸಾಟದಲ್ಲಿ ಪಟ್ಟು ಬಿಡದ ಮುಂಬೈ ಹಾಗೂ ಗುಜರಾತ್ ಗೆಲುವಿಗಾಗಿ ದಿಟ್ಟ ಹೋರಾಟ ನಡೆಸುತ್ತಿದ್ದು, ರಣಜಿ ಟ್ರೋಫಿ ಫೈನಲ್ ಹಣಾಹಣಿಯು ಕೌತುಕದತ್ತ ಸಾಗಿದೆ.
ಇಲ್ಲಿನ ಹೋಳ್ಕರ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನದ ಅಂತ್ಯಕ್ಕೆ ಹಾಲಿ ಚಾಂಪಿಯನ್ ಮುಂಬೈ 312 ರನ್ ಗುರಿ ನೀಡಿದ್ದು, ಗುಜರಾತ್ ಇದಕ್ಕೆ ಉತ್ತರವಾಗಿ 13.2 ಓವರ್'ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 47 ರನ್ ಕಲೆಹಾಕಿದೆ. ನಾಯಕ ಆದಿತ್ಯ ತಾರೆ (69) ಹಾಗೂ ಅಭಿಷೇಕ್ ನಾಯರ್ (91) ಅವರ ಉಪಯುಕ್ತ ಅರ್ಧಶತಕಗಳ ನೆರವಿನಿಂದ ಗುಜರಾತ್'ಗೆ ಸವಾಲಿನ ಗುರಿ ನೀಡಿದೆ. ಇತ್ತ ಆರಂಭಿಕರಾದ ಸಮಿತ್ ಗೋಹೆಲ್ ಮತ್ತು ಮೊದಲ ಇನ್ನಿಂಗ್ಸ್ನಲ್ಲಿ ಎರಡಂಕಿ ದಾಟಲು ವಿಫಲವಾದ ಪ್ರಿಯಾಂಕ್ ಪಾಂಚಲ್ ಕ್ರಮವಾಗಿ 8 ಮತ್ತು 34 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ಶನಿವಾರ ಆಟದ ಕೊನೆಯ ದಿನವಾಗಿದ್ದು, ಚೊಚ್ಚಲ ರಣಜಿ ಟ್ರೋಫಿ ಮೇಲೆ ಪಾರ್ಥೀವ್ ಪಡೆ ಕಣ್ಣಿಟ್ಟಿದ್ದರೆ, ಇತ್ತ ಮುಂಬೈ ಅಚ್ಚರಿಯ ಫಲಿತಾಂಶದೊಂದಿಗೆ 42ನೇ ಟ್ರೋಫಿ ಗೆಲ್ಲುವ ತುಡಿತದಲ್ಲಿದೆ. 66 ವರ್ಷಗಳ ಬಳಿಕ ಮೊದಲ ರಣಜಿ ಫೈನಲ್ನಲ್ಲಿ ಆಡುತ್ತಿರುವ ಗುಜರಾತ್, ಟ್ರೋಫಿ ಗೆಲ್ಲಲು ಇನ್ನೂ 265 ರನ್ ಪೇರಿಸಬೇಕಿದ್ದರೆ, ಮುಂಬೈಗೆ 10 ವಿಕೆಟ್'ಗಳ ಅಗತ್ಯವಿದೆ. ಹೀಗಾಗಿ ಕೊನೆಯ ದಿನದಾಟ ಸಹಜವಾಗಿಯೇ ಕೌತುಕ ಕೆರಳಿಸಿದೆ.
ಒಂದೊಮ್ಮೆ ಗುಜರಾತ್ ಈ ಮೊತ್ತವನ್ನು ಭೇದಿಸಿ ಜಯ ಸಾಧಿಸಿದ್ದೇ ಆದಲ್ಲಿ, ರಣಜಿ ಕ್ರಿಕೆಟ್ನಲ್ಲೊಂದು ದಾಖಲೆ ಬರೆದಂತಾಗಲಿದೆ. ಏಕೆಂದರೆ, 1937-38ರ ಆವೃತ್ತಿಯಲ್ಲಿ ನವನಗರ್ ನೀಡಿದ್ದ 310 ರನ್ ಗುರಿಯನ್ನು ಹೈದರಾಬಾದ್ ಯಶಸ್ವಿಯಾಗಿ ಭೇದಿಸಿದ್ದು ಇಲ್ಲೀವರೆಗಿನ ಶ್ರೇಷ್ಠ ಚೇಸ್ ಎನಿಸಿದೆ.
ಅಭಿಷೇಕ್ ಅಬ್ಬರ
ಬೌಲಿಂಗ್ನಲ್ಲಿ ಮೂರು ವಿಕೆಟ್ ಪಡೆದು ತಂಡದ ಹೋರಾಟಕ್ಕೆ ಕೈ ಜೋಡಿಸಿದ್ದ ಆಲ್ರೌಂಡರ್ ಹಾಗೂ ಅನುಭವಿ ಆಟಗಾರ ಅಭಿಷೇಕ್ ನಾಯರ್ ಬ್ಯಾಟಿಂಗ್ನಲ್ಲಿಯೂ ಮಿಂಚಿದ್ದರ ಫಲವಾಗಿ ಮುಂಬೈ ತನ್ನ ದ್ವಿತೀಯ ಇನ್ನಿಂಗ್ಸ್ನಲ್ಲಿ 411 ರನ್ಗಳಂಥ ಸವಾಲಿನ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಗುರುವಾರದ ಅಂತ್ಯಕ್ಕೆ 208 ರನ್ಗಳಿಗೆ 3 ವಿಕೆಟ್ಗಳಿಂದ ಆಟ ಮುಂದುವರೆಸಿದ ಮುಂಬೈ, ಸೂರ್ಯಕುಮಾರ್ ಅವರನ್ನು ಬೇಗನೆ ಕಳೆದುಕೊಂಡಿತು. ಇತ್ತ, 13 ರನ್ ಗಳಿಸಿದ್ದ ನಾಯಕ ಆದಿತ್ಯ ತಾರೆ 69 ರನ್ ಮಾಡಿದ್ದಾಗ ಹಾರ್ದಿಕ್ ಪಟೇಲ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದು ಪೆವಿಲಿಯನ್ ಸೇರಿಕೊಂಡರು. ಆದರೆ, ಆನಂತರದಲ್ಲಿ ಅಭಿಷೇಕ್ ನಾಯರ್ ಆಕರ್ಷಕ ಬ್ಯಾಟಿಂಗ್ನಿಂದ ತಂಡದ ಬೃಹತ್ ಮೊತಕ್ಕೆ ಕಾರಣರಾದರು. ಇನ್ನಿಂಗ್ಸ್ನ ಕೊನೆಯವರೆಗೂ ದಿಟ್ಟ ಹೋರಾಟ ನಡೆಸಿದ ಅಭಿಷೇಕ್, ತಂಡ 400ರ ಗಡಿ ದಾಟುವಂತೆ ನೋಡಿಕೊಂಡರು.
ಗುಜರಾತ್ ಪರ ಚಿಂತನ್ ಗಜ 6 ವಿಕೆಟ್ ಪಡೆದರೆ, ಆರ್.ಪಿ. ಸಿಂಗ್ 2, ರುಶ್ ಕಲಾರಿಯಾ ಮತ್ತು ಹಾರ್ದಿಕ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.
ಸ್ಕೋರ್ ವಿವರ
ಮುಂಬೈ ಮೊದಲ ಇನ್ನಿಂಗ್ಸ್: 228
ಗುಜರಾತ್ ಮೊದಲ ಇನ್ನಿಂಗ್ಸ್: 328
ಮುಂಬೈ ದ್ವಿತೀಯ ಇನ್ನಿಂಗ್ಸ್: 411/10
ಗುಜರಾತ್ ದ್ವಿತೀಯ ಇನ್ನಿಂಗ್ಸ್: 47/0
