ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌'ಫೈನಲ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 30ರನ್‌'ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಹಾಲಿ ಚಾಂಪಿಯನ್ ಮುಂಬೈ ತಂಡ ಉಪಾಂತ್ಯಕ್ಕೆ ಲಗ್ಗೆ ಹಾಕಿದೆ.

ರಾಯ್ಪುರ(ಡಿ.27): ಅನುಭವಿ ಆಟಗಾರ ಅಭಿಷೇಕ್ ನಾಯರ್ (40ಕ್ಕೆ 5) ಮತ್ತು ಸ್ಪಿನ್ನರ್ ವಿಜಯ್ ಗೊಯೆಲ್ (64ಕ್ಕೆ 5) ಅವರ ಪ್ರಭಾವಿ ಪ್ರದರ್ಶನದ ನೆರವಿನಿಂದ ಮುಂಬೈ ತಂಡ, ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌'ಫೈನಲ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 30ರನ್‌'ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ಹಾಲಿ ಚಾಂಪಿಯನ್ ಮುಂಬೈ ತಂಡ ಉಪಾಂತ್ಯಕ್ಕೆ ಲಗ್ಗೆ ಹಾಕಿದೆ.

ಇಲ್ಲಿನ ಶಾಹೀದ್ ವೀರ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ಕೊನೆಯ ದಿನವಾದ ಇಂದು 7 ವಿಕೆಟ್‌ಗೆ 121ರನ್‌'ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಹೈದರಾಬಾದ್ ತಂಡ 201ರನ್‌'ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.

232ರನ್‌'ಗಳ ಗುರಿ ಪಡೆದಿದ್ದ ಹೈದರಾಬಾದ್ ತಂಡಕ್ಕೆ ಅಭಿಷೇಕ್ ನಾಯರ್ ಮತ್ತು ಎಡಗೈ ಸ್ಪಿನ್ನರ್ ವಿಜಯ್ ಗೊಯೆಲ್ ನಿರಂತರ ವಿಕೆಟ್ ಕಿತ್ತು ತಂಡಕ್ಕೆ ಘಾಸಿಗೊಳಿಸಿದರು. ಹೈದರಾಬಾದ್ ತಂಡ ಉಳಿದ 3 ವಿಕೆಟ್‌'ಗಳಿಂದ 111ರನ್‌'ಗಳಿಸಿದ್ದರೇ ಗೆಲುವು ಸಾಧಿಸುತ್ತಿತ್ತು. ಆದರೆ ಹೈದರಾಬಾದ್ 80ರನ್‌'ಗಳಿಸಲಷ್ಟೇ ಶಕ್ತವಾಯಿತು.

ಹೈದರಾಬಾದ್ ತಂಡದ ಪರ ಅಗ್ರ ಕ್ರಮಾಂಕದ ಆಟಗಾರ ಬಾಲಚಂದ್ರ ಅನಿರುದ್ಧ ಅಜೇಯ (84*)ರನ್‌'ಗಳಿಸಿದ್ದು ಹೊರತುಪಡಿಸಿದರೆ, ಇನ್ನುಳಿದ ಆಟಗಾರರಿಂದ ಗಮನಾರ್ಹ ಪ್ರದರ್ಶನ ಬರಲಿಲ್ಲ. ಉಳಿದಂತೆ ಕೊನೆಯಲ್ಲಿ ಮಿಲಿಂದ್ (29)ರನ್‌ಗಳಿಸಿದರು. ಹೈದರಾಬಾದ್ ತಂಡದ ಮೊತ್ತ 185ರನ್‌'ಗಳಾಗಿದ್ದಾಗ ಮಿಲಿಂದ್, ಅಭಿಷೇಕ್ ಬೌಲಿಂಗ್‌ನಲ್ಲಿ ಆದಿತ್ಯ ತಾರೆಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಅದೇ ಓವರ್‌ನ ಕೊನೆಯ ಎಸೆತದಲ್ಲಿ ಮೊಹಮ್ಮದ್ ಸಿರಾಜ್ (0) ಅಭಿಷೇಕ್ ಬೌಲಿಂಗ್‌'ನಲ್ಲಿ ಎಲ್‌'ಬಿಡಬ್ಲ್ಯೂ ಬಲೆಗೆ ಬಿದ್ದರು. ರವಿ ಕಿರಣ್ (1) ಕೂಡ ಅಭಿಷೇಕ್‌'ಗೆ ವಿಕೆಟ್ ಒಪ್ಪಿಸಿದರು. ಆರಂಭಿಕ ತನ್ಮಯ್ ಅಗರ್‌ವಾಲ್ (29), ಮಧ್ಯಮ ಕ್ರಮಾಂಕದಲ್ಲಿ ಸಂದೀಪ್ (25), ಸುಮಂತ್ (14)ರನ್‌'ಗಳಿಸಿದರೆ ಉಳಿದ ಬ್ಯಾಟ್ಸ್‌ಮನ್‌ಗಳು ಒಂದಂಕಿ ಮೊತ್ತವನ್ನು ದಾಟಲಿಲ್ಲ.

ಅಂತಿಮ ದಿನದಾಟದಲ್ಲಿ ಹೈದರಾಬಾದ್‌'ನ ಕೊನೆಯ ಕ್ರಮಾಂಕದ 3 ವಿಕೆಟ್‌'ಗಳನ್ನು ಅಭಿಷೇಕ್ ಪಡೆದರು. ಮೊದಲ ಇನಿಂಗ್ಸ್‌ನಲ್ಲಿ ಅಭಿಷೇಕ್ 4 ವಿಕೆಟ್ 2ನೇ ಇನಿಂಗ್ಸ್‌ನಲ್ಲಿ 5 ಸೇರಿದಂತೆ ಒಟ್ಟು ಎರಡು ಇನಿಂಗ್ಸ್‌ಗಳಲ್ಲಿ 100ರನ್ ನೀಡಿ 9 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಮುಂಬೈ ಮೊದಲ ಇನಿಂಗ್ಸ್ : 294

ಹೈದರಾಬಾದ್ ಮೊದಲ ಇನಿಂಗ್ಸ್ : 280

ಮುಂಬೈ ದ್ವಿತೀಯ ಇನಿಂಗ್ಸ್ : 217

ಹೈದರಾಬಾದ್ ದ್ವಿತೀಯ ಇನಿಂಗ್ಸ್ 71 ಓವರ್‌ಗಳಲ್ಲಿ 201

(ಅನಿರುದ್ಧ ಅಜೇಯ 84, ಮಿಲಿಂದ್ 29, ನಾಯರ್ 40ಕ್ಕೆ 5)

ಫಲಿತಾಂಶ:ಮುಂಬೈಗೆ 30 ರನ್‌ಗಳ ಗೆಲುವು

ಪಂದ್ಯಶ್ರೇಷ್ಠ:ಅಭಿಷೇಕ್ ನಾಯರ್ (ಮುಂಬೈ)