ಮುಂಬೈ(ಸೆ.21): ಭಾರತ ಕ್ರಿಕೆಟ್ ತಂಡದ ನೂತನ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಎಂಎಸ್'ಕೆ ಪ್ರಸಾದ್ ಆಯ್ಕೆಯಾಗಿದ್ದಾರೆ.
ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದ ಪ್ರಸಾದ್ ಇನ್ನುಮುಂದೆ ಸಂದೀಪ್ ಪಾಟೀಲ್ ಸ್ಥಾನವನ್ನು ತುಂಬಲಿದ್ದಾರೆ.
ಇಂದು ನಡೆದ ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಿರಿಯ ಸಲಹಾ ಸಮಿತಿ ಈ ನಿರ್ಧಾರವನ್ನು ಕೈಗೊಂಡಿದೆ.
ದಕ್ಷಿಣ ವಲಯವನ್ನು ಪ್ರತಿನಿಧಿಸುವ ಪ್ರಸಾದ್(41) ಒಟ್ಟು ಆರು ಟೆಸ್ಟ್ ಹಾಗೂ 17 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಎಂಎಸ್'ಕೆ ಪ್ರಸಾದ್ ಆಯ್ಕೆ ಸಮಿತಿಯ ಅಧ್ಯಕ್ಷರಾದರೆ, ಅವರ ತಂಡದಲ್ಲಿ ದೇವಾಂಗ್ ಗಾಂಧಿ(ಪೂರ್ವ), ಜತಿನ್ ಪರಾಂಜ್ಪೆ(ಪಶ್ಚಿಮ), ಸರಣ್'ದೀಪ್ ಸಿಂಗ್(ಉತ್ತರ) ಹಾಗೂ ಗಗನ್ ಖೋಡಾ(ಕೇಂದ್ರ ವಲಯ)ವನ್ನು ಪ್ರತಿನಿಧಿಸಲಿದ್ದಾರೆ.
'ಆಯ್ಕೆ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ನನಗೆ ದೊಡ್ಡ ಗೌರವವಾಗಿದೆ. 2019ರ ವಿಶ್ವಕಪ್'ಗೆ ಬಲಿಷ್ಟ ತಂಡವನ್ನು ಕಟ್ಟಲು ಸ್ಪಷ್ಟ ಗುರಿಗಳನ್ನು ಹೊಂದಿದ್ದೇನೆ. 2017ರ ಚಾಂಪಿಯನ್ಸ್ ಟ್ರೋಫಿಯ ಮೇಲೂ ನಾವು ಕಣ್ಣಿಟ್ಟಿದ್ದೇವೆ, ಸಾಕಷ್ಟು ಯೋಜನೆಗಳನ್ನು ಇನ್ನುಮುಂದೆ ರೂಪಿಸಲಿದ್ದೇವೆ' ಎಂದು ಪ್ರಸಾದ್ ತಿಳಿಸಿದ್ದಾರೆ.
