ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಸಾದ್ ರೋಚಕ ಪ್ರಸಂಗವೊಂದನ್ನು ಬಹಿರಂಗಗೊಳಿಸಿ ಧೋನಿ ಬದ್ಧತೆಯನ್ನು ಪ್ರಸಾದ್ ಕೊಂಡಾಡಿದ್ದಾರೆ.

ಚೆನ್ನೈ(.28): ‘ಪಾಕಿಸ್ತಾನ ವಿರುದ್ಧ ಒಂದೇ ಕಾಲಲ್ಲಿ ಬೇಕಿದ್ದರೂ ಆಡುತ್ತೇನೆ’. ಇದು ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ, ಬಿಸಿಸಿಐ ಪ್ರಧಾನ ಆಯ್ಕೆಗಾರ ಎಂ.ಎಸ್.ಕೆ.ಪ್ರಸಾದ್‌ಗೆ ಹೇಳಿದ ಮಾತು.

ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಸಾದ್ ರೋಚಕ ಪ್ರಸಂಗವೊಂದನ್ನು ಬಹಿರಂಗಗೊಳಿಸಿ ಧೋನಿ ಬದ್ಧತೆಯನ್ನು ಪ್ರಸಾದ್ ಕೊಂಡಾಡಿದ್ದಾರೆ.

ಕಳೆದ ವರ್ಷ ಏಷ್ಯಾಕಪ್‌ನ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ 2 ದಿನ ಮುನ್ನ ಧೋನಿ ಜಿಮ್‌ನಲ್ಲಿ ಕಸರತ್ತು ಮಾಡುವ ವೇಳೆ ಗಾಯಗೊಂಡರು. ದಿಢೀರನೆ ನೆಲಕ್ಕೆ ಬಿದ್ದ ಧೋನಿಗೆ ಮೇಲೇಳಲು ಸಹ ಆಗುತ್ತಿರಲಿಲ್ಲ. ಹೋಟೆಲ್ ಸಿಬ್ಬಂದಿ ಧೋನಿಯನ್ನು ಸ್ಟ್ರೆಚರ್‌ನ ಸಹಾಯದಿಂದ ರೂಮ್‌ಗೆ ಕರೆದುಕೊಂಡು ಹೋಗಿದ್ದರು. ವಿಷಯ ತಿಳಿದ ಬಳಿಕ ಧೋನಿ ರೂಮ್‌ಗೆ ತೆರಳಿದ ಪ್ರಸಾದ್ ಪಂದ್ಯದಲ್ಲಿ ಆಡಲು ಸಾಧ್ಯವೇ ಎಂದು ಕೇಳಿದ್ದರಂತೆ. ಈ ವೇಳೆ ಧೋನಿ ಯಾವುದೇ ಆತಂಕವಿಲ್ಲ. ನಾನು ಆಡುತ್ತೇನೆ ಎಂದಿದ್ದರಂತೆ.

ಪಾರ್ಥೀವ್ ಪಟೇಲ್‌ರನ್ನು ಬದಲಿ ಆಟಗಾರನನ್ನಾಗಿ ಕರೆಸಿಕೊಳ್ಳಲಾಗಿತ್ತು. ಪಂದ್ಯಕ್ಕೆ ಹಿಂದಿನ ಮತ್ತೆ ಧೋನಿ ರೂಮ್‌ಗೆ ಪ್ರಸಾದ್ ತೆರಳಿದಾಗ ಧೋನಿ ನಾನು ಪಂದ್ಯದಲ್ಲಿ ಆಡುತ್ತೇನೆ, ಆತಂಕ ಬೇಡ ಎಂದರಂತೆ. ಜತೆಗೆ ನನಗೆ ಹೇಳದೆಯೇ ಪಾರ್ಥೀವ್‌ರನ್ನು ಕರೆಸಿದ್ದೀರ ಎಂದು ತಮಾಷೆ ಸಹ ಮಾಡಿದರಂತೆ.

ಮೇಲೇಳಲು ಸಹ ಕಷ್ಟಪಡುತ್ತಿದ್ದ ಧೋನಿ ಪಂದ್ಯದ ದಿನ ಎಲ್ಲರಿಗಿಂತ ಮೊದಲೇ ಸಿದ್ಧರಾಗಿ ಪ್ರಸಾದ್ ಅವರ ರೂಮ್‌ಗೆ ಭೇಟಿ ನೀಡಿದರಂತೆ. ಈ ವೇಳೆ ಈ ಸ್ಥಿತಿಯಲ್ಲಿ ಹೇಗೆ ಆಡುತ್ತೀರ ಎಂದು ಪ್ರಸಾದ್ ಪ್ರಶ್ನಿಸಿದಾಗ ‘ಪಾಕಿಸ್ತಾನ ವಿರುದ್ಧ ಒಂದೇ ಕಾಲಿನಲ್ಲಿ ಬೇಕಿದ್ದರೂ ಆಡುತ್ತೇನೆ’ ಎಂದು ಹೇಳಿದ್ದರಂತೆ.