ಧೋನಿ ತಮ್ಮ ಬ್ಯಾಟಿಂಗ್'ನಲ್ಲಿ ಯಾವ ಲಯವೂ ಕಮ್ಮಿಯಾಗಿಲ್ಲವೆಂಬುದನ್ನು ಸಾಬೀತಪಡಿಸಿದರು.
ಮುಂಬೈ(ಜ. 10): ಟೀಮ್ ಇಂಡಿಯಾದ ನಾಯಕತ್ವವನ್ನು ಸಂಪೂರ್ಣ ತೊರೆದಿರುವ ಮಹೇಂದ್ರ ಸಿಂಗ್ ಧೋನಿ ಒಬ್ಬ ಬ್ಯಾಟುಗಾರನಾಗಿ ಇಂದು ಭಾರೀ ಖದರ್ ತೋರಿದ್ದಾರೆ. ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ ಸರಣಿಗೆ ಮುನ್ನ ನಡೆದ ಅಭ್ಯಾಸದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಧಮಾಕ ಮಾಡಿದ್ದಾರೆ. ಭಾರತ ಎ ಮತ್ತು ಇಂಗ್ಲೆಂಡ್ ಇಲನೆವ್ ತಂಡಗಳ ನಡುವಿನ ಪಂದ್ಯದಲ್ಲಿ ಧೋನಿ ಕೇವಲ 40 ಬಾಲ್'ಗೆ 68 ರನ್ ಭಾರಿಸಿದ್ದಾರೆ. ಕ್ರಿಸ್ ವೋಕ್ಸ್ ಅವರ ಇನ್ನಿಂಗ್ಸ್'ನ ಕೊನೆಯ ಒಂದು ಓವರ್'ನಲ್ಲಿ ಧೋನಿ ಬರೋಬ್ಬರಿ 23 ರನ್ ಚಚ್ಚಿದ್ದಾರೆ. ಧೋನಿ ಬ್ಯಾಟಿಂಗ್ ಪರಿಣಾಮವಾಗಿ ಭಾರತ ಎ ತನ್ನ ಎದುರಾಳಿ ತಂಡಕ್ಕೆ ಗೆಲ್ಲಲು 305 ರನ್ ಟಾರ್ಗೆಟ್ ನೀಡಿದೆ.
ಧೋನಿಗೆ ಮುನ್ನ ಅಂಬಾಟಿ ರಾಯುಡು, ಶಿಖರ್ ಧವನ್ ಮತ್ತು ಯುವರಾಜ್ ಸಿಂಗ್ ಅವರು ಭಾರತ ಎ ತಂಡದ ಇನ್ನಿಂಗ್ಸನ್ನು ಸಮರ್ಥವಾಗಿ ಕಟ್ಟಿದರು. ಅತೀವ ಆತ್ಮವಿಶ್ವಾಸದಿಂದ ಬ್ಯಾಟ್ ಮಾಡಿದ ರಾಯುಡು ಭರ್ಜರಿ ಶತಕ ಗಳಿಸಿದರು. ಅಷ್ಟೇ ಅಲ್ಲ, ರಾಯುಡು ಎರಡು ಪ್ರಮುಖ ಜೊತೆಯಾಟದಲ್ಲಿ ಭಾಗಿಯಾದರು. ಎರಡನೇ ವಿಕೆಟ್'ಗೆ ಧವನ್ ಜೊತೆ 111 ರನ್, ಮೂರನೇ ವಿಕೆಟ್'ಗೆ ಯುವಿ ಜೊತೆ 90 ರನ್ ಜೊತೆಯಾಟದಲ್ಲಿ ರಾಯುಡು ಭಾಗಿಯಾದರು. ಧೋನಿಗೋಸ್ಕರ ರಿಟೈರ್ ಹರ್ಟ್ ತೆಗೆದುಕೊಂಡ ರಾಯುಡು 97 ಎಸೆತದಲ್ಲಿ 100 ರನ್ ಗಳಿಸಿದರು. ರಾಯುಡು ನಂತರ ಬಂದ ಧೋನಿ ತಮ್ಮ ಬ್ಯಾಟಿಂಗ್'ನಲ್ಲಿ ಯಾವ ಲಯವೂ ಕಮ್ಮಿಯಾಗಿಲ್ಲವೆಂಬುದನ್ನು ಸಾಬೀತಪಡಿಸಿದರು. ಧೋನಿ ಭಾರತ ಎ ತಂಡದ ಕ್ಯಾಪ್ಟನ್ ಆಗಿ ಆಡಿದ್ದು ವಿಶೇಷ.
ಸ್ಕೋರು ವಿವರ:
ಭಾರತ ಎ ತಂಡ 50 ಓವರ್ 304/4
(ಅಂಬಾಟಿ ರಾಯುಡು ರಿಟೈರ್ಡ್ ಹರ್ಟ್ 100, ಎಂಎಸ್ ಧೋನಿ ಅಜೇಯ 68, ಶಿಖರ್ ಧವನ್ 63, ಯುವರಾಜ್ ಸಿಂಗ್ 56 ರನ್ - ಡೇವಿಡ್ ವಿಲ್ಲೀ 55/2, ಜೇಕ್ ಬಾಲ್ 61/2)
