ಬೆಂಗಳೂರಲ್ಲಿ ಎಮ್ ಎಸ್ ಧೋನಿ ಕಠಿಣ ಅಭ್ಯಾಸ

MS Dhoni, Siddarth Kaul train at National Cricket Academy Bangalore
Highlights

ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಟೀಮ್ಇಂಡಿಯಾ ಕ್ರಿಕೆಟಿಗ ಎಮ್ ಎಸ್ ಧೋನಿ ಕಠಿಣ ಅಭ್ಯಾಸ ಆರಂಭಿಸಿದ್ದಾರೆ. ಬೌನ್ಸಿ ಪಿಚ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಎಮ್ ಎಸ್ ಧೋನಿ ಬೆಂಗಳೂರಿಗೆ ಆಗಮಿಸಿದ್ದಾರೆ. ಇಲ್ಲಿನ ಎನ್‌ಸಿಎನಲ್ಲಿ ಅಭ್ಯಾಸ ಮಾಡಿರುವ ಧೋನಿಗೆ ಕರ್ನಾಟಕದ ಯುವ ಬೌಲರ್‌ಗಳು ಬೌಲಿಂಗ್ ಮಾಡುತ್ತಿದ್ದಾರೆ.

ಬೆಂಗಳೂರು(ಜೂ.19): ಇದೇ ತಿಂಗಳ ಅಂತ್ಯದಲ್ಲಿ ಐರ್ಲೆಂಡ್ ವಿರುದ್ಧ ಟಿ20 ಸರಣಿ ಆಡಲಿರುವ ಭಾರತ, ಬಳಿಕ ಇಂಗ್ಲೆಂಡ್‌ಗೆ ತೆರಳಲಿದೆ. ಅಲ್ಲಿನ ಟಿ20 ಹಾಗೂ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್ ಎಂ.ಎಸ್.ಧೋನಿ ಪ್ರವಾಸಕ್ಕಾಗಿ ಕಠಿಣ ಅಭ್ಯಾಸ ಆರಂಭಿಸಿದ್ದಾರೆ.

ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಸೋಮವಾರ ಪ್ರತ್ಯೇಕವಾಗಿ ಅಭ್ಯಾಸ ನಡೆಸಿದರು. ಜೂ.15 ರಂದು ಯೋ-ಯೋ ಫಿಟ್ನೆಸ್ ಟೆಸ್ಟ್‌ಗೆ ಒಳಗಾಗಿದ್ದ ಧೋನಿ, ಬೆಂಗಳೂರಲ್ಲೇ ಉಳಿದಿದ್ದರು. ಸೋಮವಾರ ಬೆಳಗ್ಗೆ ನೆಟ್ಸ್‌ಗೆ ಆಗಮಿಸಿದ ಧೋನಿಗೆ ಭಾರತ ತಂಡದ ಸಹಾಯಕ ಸಿಬ್ಬಂದಿ ರಾಘವೇಂದ್ರ, ಥ್ರೋ ಡೌನ್ಸ್ (ಚೆಂಡು ಎಸೆಯುವುದು) ನೀಡಿದರು. ಸುಮಾರು ಎರಡೂವರೆ ಗಂಟೆಗಳ ಕಾಲ ಅಭ್ಯಾಸದಲ್ಲಿ ತೊಡಗಿದ ಧೋನಿಗೆ ಭಾರತ ತಂಡದ ವೇಗಿಗಳಾದ ಶಾರ್ದೂಲ್ ಠಾಕೂರ್ ಹಾಗೂ ಸಿದ್ಧಾರ್ಥ್ ಕೌಲ್ ಸಹ ಬೌಲ್ ಮಾಡಿದರು. 

18 ಯಾರ್ಡ್ ನಿಂದ ಥ್ರೋ ಡೌನ್‌ಗಳನ್ನು ಎದುರಿಸಿದ ಧೋನಿ, ಹೆಚ್ಚಾಗಿ ಶಾರ್ಟ್ ಪಿಚ್ ಎಸೆತಗಳಿಗೆ ಬ್ಯಾಟ್ ಬೀಸಿದರು. ಶಾರ್ದೂಲ್‌ಗೆ ಕಾಲ್ಪನಿಕವಾಗಿ ಫೀಲ್ಡರ್‌ಗಳನ್ನು ನಿಗದಿತ ಕ್ಷೇತ್ರಗಳಲ್ಲಿ ನಿಲ್ಲಿಸುವಂತೆ ಸೂಚಿಸಿ, ಅದಕ್ಕೆ ಅನುಗುಣವಾಗಿ ಧೋನಿ ಬ್ಯಾಟಿಂಗ್ ಮಾಡಿದರು. ಇಂಗ್ಲೆಂಡ್‌ನ ವೇಗ ಹಾಗೂ ಬೌನ್ಸಿ ಪಿಚ್ ಗಳಲ್ಲಿ ಆಡಲು ಧೋನಿ ಅಗತ್ಯ ತಯಾರಿ ನಡೆಸುತ್ತಿದ್ದು, 2019ರ ಏಕದಿನ ವಿಶ್ವಕಪ್ ಸಹ ಅಲ್ಲೇ ನಡೆಯಲಿರುವುದರಿಂದ ಮುಂದಿನ ತಿಂಗಳ ಪ್ರವಾಸ ಮಹತ್ವದೆನಿಸಿದೆ. ಮುಂದಿನ ವರ್ಷದ ವಿಶ್ವಕಪ್ ವರೆಗೂ ಧೋನಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಿದ್ದರೆ, ಈ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ತೋರುವ ಅನಿವಾರ್ಯತೆ ಇದ್ದು, ಇದನ್ನು ಅರಿತಿರುವ ಧೋನಿ ಕಠಿಣ ಅಭ್ಯಾಸಕ್ಕೆ ಮುಂದಾಗಿದ್ದಾರೆ. 

loader