ರಾಜ್ಯದಲ್ಲಿನ್ನು ಹೊಸ ಕ್ರೀಡಾ ನೀತಿ; ಒಲಿಂಪಿಕ್ಸ್'ನಲ್ಲಿ ಚಿನ್ನದ ಗುರಿ

First Published 12, Mar 2018, 3:31 PM IST
Minister Pramod Madhwaraj releases first sports policy of State
Highlights

‘ಅನುಮೋದನೆಗೆ ಮೊದಲು ರಾಜ್ಯದ ಎಲ್ಲಾ ಇಲಾಖೆಗಳಿಗೂ ಕ್ರೀಡಾ ನೀತಿಯನ್ನು ಕಳುಹಿಸಲಾಗಿತ್ತು. ಅವುಗಳಿಂದ ಒಪ್ಪಿಗೆ ಪಡೆದು ಇದೀಗ ಅನುಷ್ಠಾನಗೊಳಿಸಲಾಗಿದೆ. ಇದರಿಂದಾಗಿ ಕ್ರೀಡಾನೀತಿ ಜಾರಿಗೆ 2 ವರ್ಷಗಳಷ್ಟು ದೀರ್ಘಾವಧಿ ಬೇಕಾಯಿತು’ ಎಂದರು.

ಉಡುಪಿ(ಮಾ.12): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮಾ.8ರಂದು ನಡೆದ ಸಂಪುಟ ಸಭೆಯಲ್ಲಿ ರಾಜ್ಯದ ನೂತನ ಕ್ರೀಡಾ ನೀತಿಗೆ ಅನುಮೋದನೆ ನೀಡಲಾಗಿದ್ದು, ಭಾನುವಾರ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿದೆ.

ಹೊಸ ಕ್ರೀಡಾ ನೀತಿ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಮಾಹಿತಿ ನೀಡಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ‘ಅನುಮೋದನೆಗೆ ಮೊದಲು ರಾಜ್ಯದ ಎಲ್ಲಾ ಇಲಾಖೆಗಳಿಗೂ ಕ್ರೀಡಾ ನೀತಿಯನ್ನು ಕಳುಹಿಸಲಾಗಿತ್ತು. ಅವುಗಳಿಂದ ಒಪ್ಪಿಗೆ ಪಡೆದು ಇದೀಗ ಅನುಷ್ಠಾನಗೊಳಿಸಲಾಗಿದೆ. ಇದರಿಂದಾಗಿ ಕ್ರೀಡಾನೀತಿ ಜಾರಿಗೆ 2 ವರ್ಷಗಳಷ್ಟು ದೀರ್ಘಾವಧಿ ಬೇಕಾಯಿತು’ ಎಂದರು.

ಒಲಿಂಪಿಕ್ಸ್ ಚಿನ್ನದ ಗುರಿ: ‘ಮುಂದಿನ ಒಲಿಂಪಿಕ್ಸ್‌'ನಲ್ಲಿ ಕರ್ನಾಟಕದ ಕ್ರೀಡಾಪಟುಗಳು ಕನಿಷ್ಠ 4 ಚಿನ್ನದ ಪದಕಗಳನ್ನು ಗೆಲ್ಲುವುದು ಮತ್ತು ಮುಂಬರುವ ವರ್ಷಗಳಲ್ಲಿ ಪ್ರತಿ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಪಟ್ಟಿಯಲ್ಲಿ ಕರ್ನಾಟಕ ಅಗ್ರ 3ರಲ್ಲಿ ಸ್ಥಾನ ಗಳಿಸುವುದಕ್ಕೆ ಪೂರಕವಾಗುವಂತೆ ಕ್ರೀಡಾ ನೀತಿ ರೂಪಿಸಲಾಗಿದೆ’ ಎಂದು ಹೇಳಿದರು.

ಕ್ರೀಡೆಗೆ ಉದ್ಯಮ ರೂಪ: ಕ್ರೀಡೆಯನ್ನು ಒಂದು ಲಾಭದಾಯಕ ಉದ್ಯಮವಾಗಿಯೂ ರೂಪಿಸುವ ಸಾಧ್ಯತೆಯನ್ನು ಕ್ರೀಡಾ ನೀತಿಯಲ್ಲಿ ಗುರುತಿಸಲಾಗಿದೆ. ‘ಕ್ರೀಡಾ ಕ್ಷೇತ್ರಕ್ಕೆ ಬೇಕಾದ ಸಾಮಗ್ರಿಗಳ ಉತ್ಪಾದನೆಗೆ ಪ್ರೋತ್ಸಾಹ ನೀಡುವುದು, ಪ್ರೀಮಿಯರ್ ಲೀಗ್ ರೂಪದಲ್ಲಿ ಕ್ರೀಡೆಯನ್ನು ಮನರಂಜನೆಗೂ ಬಳಸಲಾಗುತ್ತಿದ್ದು, ಇದರಲ್ಲಿ ಕಾರ್ಪೋರೇಟ್ ಕಂಪನಿಗಳು ಹಣ ಹೂಡುತ್ತಿವೆ. ಇದಕ್ಕೆ ಪ್ರೋತ್ಸಾಹ ನೀಡುವ ಮೂಲಕ ರಾಜ್ಯದ ಕ್ರೀಡಾ ಕ್ಷೇತ್ರ ಮತ್ತು ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯ-ತರಬೇತಿಯನ್ನು ಒದಗಿಸುವುದಕ್ಕೆ ಪೂರಕವಾಗುವಂತೆ ಕ್ರೀಡಾನೀತಿಯನ್ನು ರೂಪಿಸಲಾಗಿದೆ. ಬೃಹತ್ ಕಂಪನಿಗಳು ಸಿ.ಆರ್.ಎಸ್. ನಿಧಿಯಲ್ಲಿ ಕ್ರೀಡಾಪಟುಗಳನ್ನು ದತ್ತು ತೆಗೆದುಕೊಳ್ಳುವುದಕ್ಕೆ ಮತ್ತು ಕ್ರೀಡಾಕೂಟಗಳನ್ನು ನಡೆಸುವುದು ಅವಕಾಶ ನೀಡಲಾಗಿದೆ ಎಂದರು.

 

loader