ಮುಂಬೈ ಇಂಡಿಯನ್ಸ್'ಗಿಂದು ಮಾಡು ಇಲ್ಲವೇ ಮಡಿ ಪಂದ್ಯ
ಇಂದು ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸನ್'ರೈಸರ್ಸ್ ಹೈದರಾಬಾದ್ ತಂಡದ ಸವಾಲನ್ನು ಎದುರಿಸಲಿದ್ದು, ರೋಹಿತ್ ಪಡೆ ಪುಟಿದೇಳಲು ತಹತಹಿಸುತ್ತಿದೆ. ಭಾನುವಾರದ ಮುಖಾಮುಖಿಯಲ್ಲಿ ಮುಂಬೈ ಹಾಗೂ ಸನ್'ರೈಸರ್ಸ್ ಎರಡೂ ಕೊನೆ ಓವರ್'ನಲ್ಲಿ ಸೋಲು ಕಂಡಿದ್ದವು. ಮುಂಬೈಗೆ ರಾಜಸ್ಥಾನ ರಾಯಲ್ಸ್ ಪೆಟ್ಟು ನೀಡಿದರೆ, ಚೆನ್ನೈ ಮುಂದೆ ಸನ್'ರೈಸರ್ಸ್ ಮಂಡಿಯೂರಿತ್ತು. ಹೀಗಾಗಿ ಕೊನೆ ಕ್ಷಣದ ಆಘಾತ ಉಭಯ ತಂಡಗಳ ಮೇಲೆ ಪರಿಣಾಮ ಬೀರಿದ್ದು, ಆ ಕಹಿ ಘಟನೆಯನ್ನು ಮರೆಯಲು ಎದುರು ನೋಡುತ್ತಿವೆ.
ಮುಂಬೈ(ಏ.24): ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್ 11ನೇ ಆವೃತ್ತಿಯ ಆರಂಭಿಕ ಘಟ್ಟದಲ್ಲೇ ಒತ್ತಡಕ್ಕೆ ಸಿಲುಕಿದೆ. 5 ಪಂದ್ಯಗಳಲ್ಲಿ ೪ರಲ್ಲಿ ಸೋಲು ಕಂಡಿದ್ದು, ಪ್ಲೇ-ಆಫ್ ಆಸೆ ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಇನ್ನುಳಿದ 9 ಪಂದ್ಯಗಳಲ್ಲಿ ಕನಿಷ್ಠ 7ರಲ್ಲಿ ಗೆಲ್ಲಲೇಬೇಕಿದೆ.
ಇಂದು ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಸನ್'ರೈಸರ್ಸ್ ಹೈದರಾಬಾದ್ ತಂಡದ ಸವಾಲನ್ನು ಎದುರಿಸಲಿದ್ದು, ರೋಹಿತ್ ಪಡೆ ಪುಟಿದೇಳಲು ತಹತಹಿಸುತ್ತಿದೆ. ಭಾನುವಾರದ ಮುಖಾಮುಖಿಯಲ್ಲಿ ಮುಂಬೈ ಹಾಗೂ ಸನ್'ರೈಸರ್ಸ್ ಎರಡೂ ಕೊನೆ ಓವರ್'ನಲ್ಲಿ ಸೋಲು ಕಂಡಿದ್ದವು. ಮುಂಬೈಗೆ ರಾಜಸ್ಥಾನ ರಾಯಲ್ಸ್ ಪೆಟ್ಟು ನೀಡಿದರೆ, ಚೆನ್ನೈ ಮುಂದೆ ಸನ್'ರೈಸರ್ಸ್ ಮಂಡಿಯೂರಿತ್ತು. ಹೀಗಾಗಿ ಕೊನೆ ಕ್ಷಣದ ಆಘಾತ ಉಭಯ ತಂಡಗಳ ಮೇಲೆ ಪರಿಣಾಮ ಬೀರಿದ್ದು, ಆ ಕಹಿ ಘಟನೆಯನ್ನು ಮರೆಯಲು ಎದುರು ನೋಡುತ್ತಿವೆ.
ಮೊದಲ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಬಾರಿಸಿದ ಸನ್'ರೈಸರ್ಸ್ ಕೂಡ ಸತತ 2 ಸೋಲು ಕಂಡಿದ್ದು, ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಆರಂಭಿಕ ಶಿಖರ್ ಧವನ್ ಅನುಪಸ್ಥಿತಿ ಕಳೆದ ಪಂದ್ಯದಲ್ಲಿ ತಂಡವನ್ನು ಬಲವಾಗಿ ಕಾಡಿತ್ತು. ಈ ಪಂದ್ಯದಲ್ಲಿ ಧವನ್ ಆಡುವ ಸಾಧ್ಯತೆ ಇದೆ. ಪ್ರಮುಖ ಸ್ಪಿನ್ ಅಸ್ತ್ರ ರಶೀದ್ ಖಾನ್ ದುಬಾರಿಯಾಗುತ್ತಿರುವುದು, ಸನ್'ರೈಸರ್ಸ್ ಸಮತೋಲನ ಕಳೆದುಕೊಳ್ಳುವಂತೆ ಮಾಡಿದೆ. ಪಂದ್ಯದಿಂದ ಪಂದ್ಯಕ್ಕೆ ಕೇನ್ ವಿಲಿಯಮ್ಸನ್ ಮೇಲೆ ಒತ್ತಡ ಹೆಚ್ಚುತ್ತಿದ್ದು, ಉಳಿದ ಬ್ಯಾಟ್ಸ್'ಮನ್'ಗಳು ಜವಾಬ್ದಾರಿ ಅರಿತು ಆಡಬೇಕಿದೆ. ಗಾಯಾಳು ಭುವನೇಶ್ವರ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಗೊಂದಲದಲ್ಲಿ ಮುಂಬೈ: ಸೂರ್ಯಕುಮಾರ್'ರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಮುಂಬೈ ಯೋಜನೆ ಕೈಹಿಡಿದಿದ್ದರೂ, ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಇನ್ನೂ ಗೊಂದಲ ಮುಂದುವರಿದಿದೆ. ಕೆಳ ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆ ಇಲ್ಲದಿರುವುದು ತಂಡಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಜತೆಗೆ ಜಸ್'ಪ್ರೀತ್ ಬುಮ್ರಾ ಮೊನಚು ಕಳೆದುಕೊಂಡಿದ್ದಾರೆ.