ಬ್ರೆಡಾ(ಜೂ.23): ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನ ಮಣಿಸಿದ ಭಾರತ ಇದೀಗ ಪುರುಷರ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲೂ  ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನ ಬಗ್ಗುಬಡಿದಿದೆ.

ನೆದರ್ಲೆಂಡ್‌ನ ಬ್ರೆಡಾದಲ್ಲಿ ನಡೆಯುತ್ತಿರುವ ಪುರುಷರ ಹಾಕಿ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿತ್ತು. ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ ಭಾರತ 4-0 ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ.

ಮೊದಲ ಕ್ವಾರ್ಟರ್ ಪ್ಲೇನಲ್ಲಿ ಭಾರತ ಹಾಗೂ ಪಾಕಿಸ್ತಾನ ಗೋಲಿಗಾಗಿ ಹೋರಾಟ ನಡೆಸಿತು. ಆದರೆ ಗೋಲು ದಾಖಲಾಗಲಿಲ್ಲ. ಸೆಕೆಂಡ್ ಕ್ವಾರ್ಟರ್ನಲ್ಲಿ ಭಾರತದ ರಾಮ್‌ದೀಪ್ ಸಿಂಗ್ ಸಿಡಿಸಿದ ಗೋಲಿನಿಂದ ಭಾರತ 1-0 ಮುನ್ನಡೆ ಸಾಧಿಸಿತು. ಈ ಮೂಲಕ ಫಸ್ಟ್ ಹಾಫ್ ಮುಕ್ತಾಯದ ವೇಳೆಗೆ ಭಾರತ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.

32ನೇ ನಿಮಿಷದಲ್ಲಿ ಪಾಕಿಸ್ತಾನ ಗೋಲು ಸಿಡಿಸಿತು. ಆದರೆ ಭಾರತ ರಿವ್ಯೂವ್ ಮನವಿಯಿಂದ ಪಾಕಿಸ್ತಾನ ಗೋಲನ್ನ ಕಳೆದುಕೊಂಡಿತು. ಆದರೆ 54ನೇ ನಿಮಿಷದಲ್ಲಿ ದಿಲ್‌ಪ್ರೀತ್ ಸಿಂಗ್ ಗೋಲು ಸಿಡಿಸಿದರೆ, 57ನೇ ನಿಮಿಷದಲ್ಲಿ ಮನ್ದೀಪ್ ಸಿಂಗ್ ಗೋಲು ಬಾರಿಸೋ ಮೂಲಕ ಭಾರತ 3-0 ಮುನ್ನಡೆ ಪಡೆದುಕೊಂಡಿತು.

60ನೇ ನಿಮಿಷದಲ್ಲಿ ಮತ್ತೆ ಭಾರತ ಅಬ್ಬರಿಸಿತು. ಹತಾಶೆಗೊಂಡಿದ್ದ ಪಾಕಿಸ್ತಾನ ರಿವ್ಯೂವ್ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಪಂದ್ಯದ ಮುಕ್ತಾಯದ ವೇಳೆಗೆ ಭಾರತ 4-0 ಅಂತರದ ಗೆಲುವು ಸಾಧಿಸಿತು. ಈ ಮೂಲಕ ಹಾಕಿಯಲ್ಲೂ ಪಾಕ್ ತಂಡವನ್ನ ಸೋಲಿಸಿತು. ಬದ್ಧವೈರಿ ಪಾಕಿಸ್ತಾನ ವಿರುದ್ಧದ ಗೆಲುವು ಅಭಿಮಾನಿಗಳ ಸಂತಸವನ್ನ ಇಮ್ಮಡಿಗೊಳಿಸಿದೆ.