ಏಪ್ರಿಲ್ 06ರಂದು ನಡೆಯುವ ಶ್ರೀಲಂಕಾ ವಿರುದ್ಧದ ಪಂದ್ಯ ಮೊರ್ತಜಾ ಪಾಲಿಗೆ ಕೊನೆಯ ಟಿ20 ಪಂದ್ಯವಾಗಲಿದೆ. ಮೊರ್ತಜಾ ಬಾಂಗ್ಲಾದೇಶ ಏಕದಿನ ತಂಡವನ್ನು ಮುನ್ನೆಡೆಸಲಿದ್ದಾರೆ.

ಕೊಲಂಬೊ(ಏ.05): ಸೀಮಿತ ಓವರ್‌'ಗಳ ಬಾಂಗ್ಲಾದೇಶ ತಂಡದ ನಾಯಕ ಹಾಗೂ ಆಲ್ರೌಂಡರ್ ಮಶ್ರಾಫೆ ಮೊರ್ತಜಾ ಅಂತಾರಾಷ್ಟ್ರೀಯ ಟಿ20 ಪಂದ್ಯಾವಳಿಗೆ ನಿವೃತ್ತಿ ಘೋಷಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದ ಸೋಲಿನ ಬಳಿಕ ಮಶ್ರಾಫೆ ತಮ್ಮ ನಿರ್ಧಾರವನ್ನು ಹೊರಹಾಕಿದ್ದಾರೆ.

‘‘ಕಳೆದ ಹತ್ತು ವರ್ಷಗಳಿಂದ ಬಾಂಗ್ಲಾದೇಶ ತಂಡವನ್ನು ಚುಟುಕು ಪ್ರಕಾರದಲ್ಲಿ ಪ್ರತಿನಿಧಿಸಿದ್ದು ನನಗೆ ಗೌರವದ ಸಂಗತಿ. ಮುಂದಿನ ತಲೆಮಾರಿನ ಯುವ ಕ್ರಿಕೆಟಿಗರಿಗೆ ಅವಕಾಶ ನೀಡುವ ದೃಷ್ಟಿಯಿಂದ ನಿವೃತ್ತಿಯ ತೀರ್ಮಾನ ತೆಗೆದುಕೊಳ್ಳುತ್ತಿದ್ದೇನೆ'' ಎಂದು ಮಶ್ರಾಫೆ ಹೇಳಿದ್ದಾರೆ. 2006ರಲ್ಲಿ ಜಿಂಬಾಬ್ವೆ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಿದ್ದ ಮೊರ್ತಜಾ, ಬಾಂಗ್ಲಾದೇಶ ಪರ ಒಟ್ಟು 52 ಪಂದ್ಯಗಳನ್ನಾಡಿದ್ದು 39 ವಿಕೆಟ್ ಕಬಳಿಸಿದ್ದಾರೆ. ಇದರ ಜೊತೆಗೆ 368 ಬಾರಿಸಿ ಬ್ಯಾಟಿಂಗ್'ನಲ್ಲೂ ತಂಡಕ್ಕೆ ನೆರವಾಗಿದ್ದಾರೆ.

ಇನ್ನು ಮೊರ್ತಜಾ, 27 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು ಒಂಬತ್ತು ಬಾರಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. 

ಏಪ್ರಿಲ್ 06ರಂದು ನಡೆಯುವ ಶ್ರೀಲಂಕಾ ವಿರುದ್ಧದ ಪಂದ್ಯ ಮೊರ್ತಜಾ ಪಾಲಿಗೆ ಕೊನೆಯ ಟಿ20 ಪಂದ್ಯವಾಗಲಿದೆ. ಮೊರ್ತಜಾ ಬಾಂಗ್ಲಾದೇಶ ಏಕದಿನ ತಂಡವನ್ನು ಮುನ್ನೆಡೆಸಲಿದ್ದಾರೆ.