Asianet Suvarna News Asianet Suvarna News

5ನೇ ಏಷ್ಯಾ ಚಿನ್ನದ ಪದಕಕ್ಕೆ ಪಂಚ್ ಕೊಟ್ಟ ಮೇರಿ ಕೋಮ್; ತೋಳಲ್ಲಿನ್ನು ಶಕ್ತಿಯಿದೆ ಎಂದ ಮೂರು ಮಕ್ಕಳ ತಾಯಿ

‘ಪ್ರತಿ ಪದಕವೂ ನಾನು ಕ್ರಮಿಸಿದ ಕಠಿಣ ಹಾದಿಗೆ ಸಿಕ್ಕ ಪ್ರತಿಫಲವಾಗಿದೆ. ನನ್ನ ತೋಳುಗಳಲ್ಲಿ ಇನ್ನೂ ಶಕ್ತಿ ಇದೆ. ನನ್ನ ಅಂತಾರಾಷ್ಟ್ರೀಯ ವೃತ್ತಿಬದುಕು ಮುಗಿಯಿತು ಎಂದು ಹಲವರು ಹೇಳಿದ್ದರು. ಅವರಿಗೆಲ್ಲಾ ಈ ಚಿನ್ನದ ಪದಕವೇ ಉತ್ತರ ಎಂದು ಹೇಳಲು ಇಚ್ಛಿಸುತ್ತೇನೆ’ ಎಂದು ಮೇರಿ ಹೇಳಿದರು. 2016ರ ರಿಯೋ ಒಲಿಂಪಿಕ್ಸ್‌'ಗೆ ಅರ್ಹತೆ ಪಡೆಯಲು ವಿಫಲರಾದ ಬಳಿಕ ಮೇರಿ, ನಿವೃತ್ತಿ ಘೋಷಿಸಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದರು.

Mary Kom marks triumphant return with Asian Championship gold

ವಿಯೆಟ್ನಾಂ(ನ.09): ಐದು ಬಾರಿ ವಿಶ್ವ ಚಾಂಪಿಯನ್, ಮೂರು ಮಕ್ಕಳ ತಾಯಿ, ಭಾರತದ ಮೇರಿ ಕೋಮ್ ಏಷ್ಯಾ ಬಾಕ್ಸಿಂಗ್ ಚಾಂಪಿಯನ್‌'ಶಿಪ್‌'ನ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಫೈನಲ್‌ನಲ್ಲಿ ಉ.ಕೊರಿಯಾದ ಕಿಮ್ ಹ್ಯಾಂಗ್ ಮಿ ವಿರುದ್ಧ ಮೇರಿ 5-0 ಅಂತರದ ಸುಲಭ ಗೆಲುವು ದಾಖಲಿಸಿದರು.

ಈ ಚಾಂಪಿಯನ್‌'ಶಿಪ್‌'ನಲ್ಲಿ ಮೇರಿ ಎದುರಿಸಿದ ಅತ್ಯಂತ ಕಠಿಣ ಎದುರಾಳಿ ಕಿಮ್. ಆದರೂ ತಮ್ಮ ಅನುಭವದ ಬಲದೊಂದಿಗೆ ಭಾರತೀಯ ಬಾಕ್ಸಿಂಗ್ ತಾರೆ, ನಿರಾಯಾಸವಾಗಿ ಗೆಲುವು ಸಾಧಿಸಿದರು. ಏಷ್ಯಾಚಾಂಪಿಯನ್‌'ಶಿಪ್‌'ನಲ್ಲಿ ಇದು ಅವರ 5ನೇ ಚಿನ್ನ ಹಾಗೂ 6ನೇ ಪದಕವಾಗಿದೆ. ಈ ಮೊದಲು ಮೇರಿ, 2003,2005, 2010, 2012ರಲ್ಲಿ ಚಿನ್ನ ಗೆದ್ದಿದ್ದರು.

ಏಷ್ಯನ್ ಗೇಮ್ಸ್ ಬಳಿಕ ಮೊದಲ ಚಿನ್ನ: 2014ರ ಏಷ್ಯನ್ ಗೇಮ್ಸ್‌'ನಲ್ಲಿ ಚಿನ್ನದ ಪದಕ ಗೆದ್ದಿದ್ದ ಮೇರಿ ಕೋಮ್, ಆ ನಂತರ ಅಂತರಾಷ್ಟ್ರೀಯ ಕೂಟದಲ್ಲಿ ಜಯಿಸುತ್ತಿರುವ ಮೊದಲ ಚಿನ್ನ ಇದಾಗಿದೆ. ಅಲ್ಲದೇ ಕಳೆದೊಂದು ವರ್ಷದಲ್ಲಿ ಅವರು ಗೆಲ್ಲುತ್ತಿರುವ ಮೊದಲ ಪದಕವಿದು. ಇತ್ತೀಚೆಗಷ್ಟೇ 51 ಕೆಜಿಯಿಂದ 48 ಕೆಜಿ ವಿಭಾಗಕ್ಕೆ ಕಾಲಿಟ್ಟಿದ್ದ ಮೇರಿ, ಈ ವಿಭಾಗದಲ್ಲಿ ಗೆಲ್ಲುತ್ತಿರುವ ಮೊದಲ ಅಂತರಾಷ್ಟ್ರೀಯ ಪದಕ ಎನ್ನುವುದು ಮತ್ತೊಂದು ವಿಶೇಷವಾಗಿದೆ.

ಸೋನಿಯಾಗೆ ಬೆಳ್ಳಿ: 57 ಕೆಜಿ ವಿಭಾಗದ ಫೈನಲ್ ಪ್ರವೇಶಿಸಿದ್ದ ವಿಶ್ವ ಚಾಂಪಿಯನ್‌'ಶಿಪ್ ಬೆಳ್ಳಿ ಪದಕ ವಿಜೇತೆ ಸೋನಿಯಾ ಲಾಥರ್, ಚೀನಾದ ಯಿನ್ ಜುನ್ಹ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟರು. ಇದರೊಂದಿಗೆ ಭಾರತ 1 ಚಿನ್ನ, 1 ಬೆಳ್ಳಿ ಹಾಗೂ 5 ಕಂಚಿನೊಂದಿಗೆ ಕೂಟಕ್ಕೆ ವಿದಾಯ ಹೇಳಿತು. 2015ರ ಆವೃತ್ತಿಯಲ್ಲಿ ಭಾರತ ಒಟ್ಟು 6 ಪದಕ ಗಳಿಸಿತ್ತು.

‘ನನ್ನ ತೋಳುಗಳಲ್ಲಿ ಇನ್ನೂ ಶಕ್ತಿಯಿದೆ’:

35 ವರ್ಷದ ಮೇರಿ, ಚಿನ್ನ ಗೆಲ್ಲುತ್ತಲೇ ಭಾವುಕರಾದರು. ಬಳಿಕ, ಪ್ರತಿಕ್ರಿಯೆ ನೀಡಿದ ಅವರು ‘ಪ್ರತಿ ಪದಕವೂ ನಾನು ಕ್ರಮಿಸಿದ ಕಠಿಣ ಹಾದಿಗೆ ಸಿಕ್ಕ ಪ್ರತಿಫಲವಾಗಿದೆ. ನನ್ನ ತೋಳುಗಳಲ್ಲಿ ಇನ್ನೂ ಶಕ್ತಿ ಇದೆ. ನನ್ನ ಅಂತಾರಾಷ್ಟ್ರೀಯ ವೃತ್ತಿಬದುಕು ಮುಗಿಯಿತು ಎಂದು ಹಲವರು ಹೇಳಿದ್ದರು. ಅವರಿಗೆಲ್ಲಾ ಈ ಚಿನ್ನದ ಪದಕವೇ ಉತ್ತರ ಎಂದು ಹೇಳಲು ಇಚ್ಛಿಸುತ್ತೇನೆ’ ಎಂದು ಮೇರಿ ಹೇಳಿದರು. 2016ರ ರಿಯೋ ಒಲಿಂಪಿಕ್ಸ್‌'ಗೆ ಅರ್ಹತೆ ಪಡೆಯಲು ವಿಫಲರಾದ ಬಳಿಕ ಮೇರಿ, ನಿವೃತ್ತಿ ಘೋಷಿಸಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದರು.

Follow Us:
Download App:
  • android
  • ios