KPL ಹರಾಜು: ಮನೀಶ್ ಪಾಂಡೆ, ಶ್ರೇಯಸ್, ಕರುಣ್ ಅನ್‌ಸೋಲ್ಡ್..!
ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿ ’ಎ’ ಗುಂಪಿನ ಹರಾಜು ಮುಕ್ತಾಯವಾಗಿದ್ದು, ಪವನ್ ದೇಶ್‌ಪಾಂಡೆ, ಅನಿರುದ್ದ್ ಜೋಶಿ ಅಚ್ಚರಿ ಬೆಲೆಗೆ ಹರಾಜಾದರೆ, ಕರ್ನಾಟಕದ ಸ್ಟಾರ್ ಕ್ರಿಕೆಟಿಗರಾದ ಮನೀಶ್ ಪಾಂಡೆ, ಕರುಣ್ ನಾಯರ್, ಶ್ರೇಯಸ್ ಗೋಪಾಲ್ ಅವರು ಹರಾಜಾಗದೇ ಉಳಿದಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಜು.27]: 8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಗೆ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಕೆಲ ಆಟಗಾರರು ಅಚ್ಚರಿ ಬೆಲೆಗೆ ಹರಾಜಾದರೆ, ಮತ್ತೆ ಕೆಲವು ಸ್ಟಾರ್ ಆಟಗಾರರನ್ನು ಖರೀದಿಸಲು ಯಾವ ಪ್ರಾಂಚೈಸಿಯೂ ಮನಸು ಮಾಡಲಿಲ್ಲ.
KPL ಹರಾಜು: ದಾಖಲೆ ಮೊತ್ತಕ್ಕೆ ಶಿವಮೊಗ್ಗ ಪಾಲಾದ ಪವನ್ ದೇಶ್‌ಪಾಂಡೆ..!
ಹೌದು, A ಗುಂಪಿನಲ್ಲಿ ಸ್ಥಾನ ಪಡೆದಿದ್ದ ಕರ್ನಾಟಕದ ಸ್ಟಾರ್ ಕ್ರಿಕೆಟಿಗರಾದ ಮನೀಶ್ ಪಾಂಡೆ, ಕರುಣ್ ನಾಯರ್ ಹಾಗೂ ಶ್ರೇಯಸ್ ಗೋಪಾಲ್ ಅವರನ್ನು ಖರೀದಿಸಲು ಯಾವ ತಂಡವು ಮುಂದೆ ಬರಲಿಲ್ಲ. ಮನೀಶ್ ಪಾಂಡೆ ವೆಸ್ಟ್ ಇಂಡೀಸ್ ಸರಣಿಗೆ ಆಯ್ಕೆಯಾಗಿರುವುದರಿಂದ ಆಗಸ್ಟ್ 16ರಿಂದ ಆರಂಭವಾಗಲಿರುವ KPL ಟೂರ್ನಿಗೆ ಲಭ್ಯವಿರುವುದಿಲ್ಲ. ಹಾಗಾಗಿ ಪ್ರಾಂಚೈಸಿಗಳು ಖರೀದಿಸಲು ಮನಸು ಮಾಡಲಿಲ್ಲ. ಇನ್ನುಳಿದಂತೆ ವೇಗಿ ಪ್ರಸಿದ್ಧ್ ಕೃಷ್ಣ, ಐಪಿಎಲ್’ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಆಲ್ರೌಂಡರ್ ಶ್ರೇಯಸ್ ಗೋಪಾಲ್ ಅವರನ್ನು ಕೂಡಾ ಖರೀದಿಸದೇ ಇದ್ದದ್ದು ಅಚ್ಚರಿಗೆ ಸಾಕ್ಷಿಯಾಯಿತು. ಇನ್ನುಳಿದಂತೆ ರೋನಿತ್ ಮೋರೆ, ರವಿ ಕುಮಾರ್ ಸಮರ್ಥ್ ಅವರನ್ನು ಖರೀದಿಸಲು ಯಾವುದೇ ಪ್ರಾಂಚೈಸಿಗಳು ಮನಸು ಮಾಡಲಿಲ್ಲ.
KPL 2019 ಟೂರ್ನಿ ವೇಳಾಪಟ್ಟಿ ಬಿಡುಗಡೆ-ಹರಾಜಿಗೆ ಕ್ಷಣಗಣನೆ!
KPL 2019ರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...
A ಗುಂಪಿನಲ್ಲಿ ಹರಾಜಾಗದೇ ಉಳಿದ ಆಟಗಾರರನ್ನು, B ಗುಂಪಿನ ಹರಾಜು ಮುಕ್ತಾಯವಾದ ಬಳಿಕ ಮತ್ತೊಮ್ಮೆ ಹರಾಜು ಕರೆಯಲಾಗುತ್ತದೆ. ಆಗಲಾದರೂ ಈ ಆಟಗಾರರನ್ನು ಪ್ರಾಂಚೈಸಿಗಳು ಖರೀದಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಗೆ ಬೆಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರು ಆತಿಥ್ಯ ವಹಿಸಲಿದ್ದು, ಆಗಸ್ಟ್ 16ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. 7 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಈ ಬಾರಿ ಚಾಂಪಿಯನ್ ಯಾರಾಗುತ್ತಾರೆ ಎನ್ನುವುದು ಸದ್ಯದ ಕುತೂಹಲ.