ಆಸ್ಟ್ರೇಲಿಯನ್ನರು ಯಾಕೋ ಹತಾಶರಾಗಿದ್ದಾರೆ. ಪಂದ್ಯ ಗೆಲ್ಲು ಅಡ್ಡದಾರಿ ಹಿಡಿಯುತ್ತಿದ್ದಾರೆ. ಕೋಲ್ಕತ್ತಾದಲ್ಲಿ ವಿರಾಟ್ ಕೊಹ್ಲಿಗೆ ಕಿರಿಕ್ ಮಾಡಿ ಪಂದ್ಯ ಸೋತ್ರು. ಈಗ ಇಂದೋರ್'ನಲ್ಲಿ ಪಾಂಡೆ ಮತ್ತು ಪಾಂಡ್ಯಗೆ ಕಿರಿಕ್ ಮಾಡಿ ಪಂದ್ಯ ಸೋತಿದ್ದಾರೆ. ಈ ಎರಡು ಕಿರಿಕ್ಗಳನ್ನ ಮಾಡಿರೋದು ಒಬ್ಬನೇ ಆಟಗಾರ.
ಸ್ಲೆಡ್ಜಿಂಗ್ ಎನ್ನುವ ಭೂತ ಕಾಂಗರೂಗಳನ್ನ ಬಿಡುವಂತೆ ಕಾಣ್ತಿಲ್ಲ. ಪಂದ್ಯಕ್ಕಿಂತ ಅವರಿಗೆ ಸ್ಲೆಡ್ಜಿಂಗ್ ಮುಖ್ಯವಾಗಿದೆ. ವಿರಾಟ್ ಕೊಹ್ಲಿಗೆ ಸ್ಲೆಡ್ಜಿಂಗ್ ಮಾಡಿ ಕೋಲ್ಕತ್ತಾ ಪಂದ್ಯವನ್ನ ಸೋತಿದ್ದು ಎಲ್ಲರಿಗೂ ಗೊತ್ತಿದೆ. ಇದಕ್ಕೆ ಆಸೀಸ್ನ ಮಾಜಿ ಆಟಗಾರರೆಲ್ಲಾ ತರಾಟೆಗೆ ತೆಗೆದುಕೊಂಡಿದ್ದು ಆಯ್ತು. ಈಗ ಇಂದೋರ್ನಲ್ಲೂ ಸ್ಲೆಡ್ಜಿಂಗ್ ಮಾಡಿ ಪಂದ್ಯ ಸೋತಿದ್ದಾರೆ ಕಾಂಗರೂಗಳು. ಭಾರತ ವಿರುದ್ಧ ಹ್ಯಾಟ್ರಿಕ್ ಸೋಲಿಗೆ ಸ್ಲೆಡ್ಜಿಂಗ್ ಕಾರಣವಾಗಿದೆ.
ಪಾಂಡೆಯನ್ನ ಸ್ಟೋನಿಸ್ ಬೈಯ್ದಿದ್ಯಾಕೆ..?
43ನೇ ಓವರ್'ನಲ್ಲಿ ಮಾರ್ಕಸ್ ಸ್ಟೋನಿಸ್ ಬೌಲಿಂಗ್ ಮಾಡುತ್ತಿದ್ದರು. ಆಗ ಭಾರತಕ್ಕೆ ಇನ್ನೂ 48 ಬಾಲ್ನಲ್ಲಿ 44 ರನ್ ಬೇಕಿದ್ದವು. ಈ ಓವರ್ನಲ್ಲಿ ಕನ್ನಡಿಗ ಮನೀಶ್ ಪಾಂಡೆ ಒಂದು ಬೌಂಡ್ರಿ ಸಹ ಹೊಡೆದ್ರು. ಆದರೆ ಕೊನೆ ಬಾಲ್ ಆದ್ಮೇಲೆ ಪಾಂಡೆಗೆ ಸ್ಟೋನಿಸ್ ಸ್ಲೆಡ್ಜಿಂಗ್ ಮಾಡಿದ್ರು. ಏನೋ ಬೈಯ್ದು ಬಂದರು. ಇದು ಕ್ರೀಸಿನಲ್ಲಿದ್ದ ಮನೀಶ್ ಪಾಂಡೆ ಮತ್ತು ಹಾರ್ದಿಕ್ ಪಾಂಡ್ಯಗೆ ಪಿತ್ತ ನೆತ್ತಿಗೇರಿಸ್ತು. ಸೋಲು ಹತಾಶೆಯಲ್ಲಿ ಸ್ಟೋನಿಸ್ ಹೀಗೆ ಸ್ಲೆಡ್ಜಿಂಗ್ ಮಾಡಿದ್ದರು ಎನ್ನುವುದು ಮಾತ್ರ ಸತ್ಯ.
ಭಾರತಕ್ಕೆ ಜಯವನ್ನ ಕನ್ಫರ್ಮ್ ಮಾಡಿದ ಆ ಓವರ್
43ನೇ ಓವರ್ನಲ್ಲಿ ಸ್ಲೆಡ್ಜಿಂಗ್ ಮಾಡಿ ಹೋಗಿದ್ದ ಮಾರ್ಕಸ್ ಸ್ಟೋನಿಸ್ 45ನೇ ಓವರ್'ನಲ್ಲಿ ಬೌಲಿಂಗ್'ಗೆ ಇಳಿದ್ರು. ಆಗ ಭಾರತಕ್ಕೆ 36 ಬಾಲ್ನಲ್ಲಿ 29 ರನ್ ಬೇಕಿತ್ತು. ಸಿಟ್ಟಿನಲ್ಲೇ ಇದ್ದ ಮನೀಶ್ ಪಾಂಡೆ ಮತ್ತು ಹಾರ್ದಿಕ್ ಪಾಂಡ್ಯ ಬ್ಯಾಕ್ ಟು ಬ್ಯಾಕ್ ಬೌಂಡ್ರಿ ಬಾರಿಸಿದ್ರು. ಆ ಓವರ್ನಲ್ಲಿ ಒಟ್ಟು 18 ರನ್ ಕೊಳ್ಳೆ ಹೊಡೆದು ಟೀಂ ಇಂಡಿಯಾ ಗೆಲುವನ್ನ ಕನ್ಫರ್ಮ್ ಮಾಡಿದ್ರು. ಸ್ಲೆಡ್ಜಿಂಗ್ ಮಾಡಲು ಹೋಗಿ ಹಿಂಗು ತಿಂದ ಮಂಗನಂತಾದ ಸ್ಟೋನಿಸ್, ಭಾರೀ ದಂಡನೆಗೆ ಒಳಗಾದ್ರು.
2ನೇ ಪಂದ್ಯದಲ್ಲಿ ಕೊಹ್ಲಿಗೆ ಸ್ಲೆಡ್ಜಿಂಗ್ ಮಾಡಿದ್ದು ಇದೇ ಸ್ಟೋನಿಸ್
ಕೋಲ್ಕತ್ತಾ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಕೇದರ್ ಜಾಧವ್ ಬ್ಯಾಟ್ ಮಾಡುತ್ತಿದ್ದಾಗ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್ ಸ್ಟೋನಿಸ್ ಸ್ಲೆಡ್ಜ್ ಮಾಡಿದ್ದರು. ಇದೇ ಸಿಟ್ಟಿನಿಂದ ಕೊಹ್ಲಿ 92 ರನ್ ಹೊಡೆದ ಕಾಂಗರೂಗಳ ಬೇಟೆಯಾಡಿದ್ದರು. ಆದ್ರೂ ಬುದ್ಧಿ ಕಲಿಯದ ಸ್ಟೋನಿಸ್ ಅದನ್ನ ಇಂದೋರ್ನಲ್ಲಿ ರಿಪೀಟ್. ಮತ್ತೆ ಹಿಗ್ಗಾಮುಗ್ಗ ದಂಡಿಸಿಕೊಂಡು ಸುಮ್ಮನಾದ್ರು.
ಸ್ಲೆಡ್ಜಿಂಗ್ ಬಿಟ್ಟು ಕ್ರಿಕೆಟ್ ಆಡಿ
ಭಾರತೀಯರ ವಿರುದ್ಧ ಕಿರಿಕ್ ಮಾಡಿಕೊಂಡು ಪಂದ್ಯ ಗೆಲ್ತೇವೆ ಅನ್ನೋ ಕನಸನ್ನ ಆಸ್ಟ್ರೇಲಿಯಾ ಕಾಣ್ತಿದೆ. ಅಂತಹ ಕನಸನ್ನ ಕಾಣ್ಬೇಡಿ ಅಂತ ಎರಡು ಮ್ಯಾಚ್ನಲ್ಲಿ ಭಾರತೀಯರು ತೋರಿಸಿಕೊಟ್ಟಿದ್ದಾರೆ. ಉಳಿದ ಎರಡು ಪಂದ್ಯದಲ್ಲಾದ್ರೂ ಸ್ಲೆಡ್ಜಿಂಗ್ ಮಾಡೋದು ಬಿಟ್ಟು ಕ್ರಿಕೆಟ್ ಆಡಿ. ಆಗ ಮಾತ್ರ ಪಂದ್ಯ ಗೆಲ್ಲೋಕೆ ಸಾಧ್ಯ ಅಂತಿದ್ದಾರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು.
