ಐದನೇ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ತೋರಿದ ಕಾರ್ಲ್‌ಸನ್, ಈ ಪಂದ್ಯದಲ್ಲಿ ಜಯ ಸಾಧಿಸುವುದರೊಂದಿಗೆ ವಿಶ್ವ ಚಾಂಪಿಯನ್‌'ಗೂ ಭಾಜನರಾದರು.
ನ್ಯೂಯಾರ್ಕ್(ಡಿ.01): ನಾರ್ವೆಯ ಗ್ರ್ಯಾಂಡ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್ಸನ್ ಸತತ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇಂದು ಮುಕ್ತಾಯಗೊಂಡ ವಿಶ್ವ ಚೆಸ್ ಚಾಂಪಿಯನ್ಶಿಪ್ನ ಅಂತಿಮ ಸುತ್ತಿನ ಟೈಬ್ರೇಕರ್ ಸೆಣಸಿನಲ್ಲಿ ಅವರು, ರಷ್ಯಾದ ಸರ್ಗಿ ಕರ್ಯಾಕಿನ್ ವಿರುದ್ಧ ಜಯ ಸಾಧಿಸುವಲ್ಲಿ ಯಶಸ್ವಿಯಾದರು.
ವಿಶ್ವ ಚಾಂಪಿಯನ್ ಪಟ್ಟವನ್ನು ನಿರ್ಧರಿಸುವ ಅಂತಿಮ ಸುತ್ತಿನ ಪಂದ್ಯವು ಪದೇ ಪದೇ ಡ್ರಾ ಆಗುತ್ತಿದ್ದುದು ಚೆಸ್ ಕ್ರೀಡಾಭಿಮಾನಿಗಳಲ್ಲಿ ಈ ಬಾರಿಯ ಚಾಂಪಿಯನ್ ಯಾರಾಗುವರೆಂಬ ಕುತೂಹಲವನ್ನು ದಿನೇ ದಿನೇ ಹೆಚ್ಚಿಸುತ್ತಿತ್ತು. ಸುಮಾರು 12 ಪಂದ್ಯಗಳು ಡ್ರಾ ಆಗಿ ವಿಜೇತರು ಯಾರೆಂಬುದು ನಿರ್ಧಾರವಾಗದೇ ಇದ್ದಿದ್ದರಿಂದ ಅಂತಾರಾಷ್ಟ್ರೀಯ ಚೆಸ್ ಸಂಸ್ಥೆಯ ನಿಯಮಗಳನುಸಾರ ನಾಲ್ಕು ಕ್ವಿಕ್ ಫೈನಲ್ ಹೆಚ್ಚುವರಿ ಪಂದ್ಯಗಳನ್ನು ನಿಗದಿಗೊಳಿಸಲಾಗಿತ್ತು. ಇದರಲ್ಲೂ ಮೊದಲ ನಾಲ್ಕು ಪಂದ್ಯಗಳು ಡ್ರಾ ಆದವು. ಆದರೆ, ಐದನೇ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ತೋರಿದ ಕಾರ್ಲ್ಸನ್, ಈ ಪಂದ್ಯದಲ್ಲಿ ಜಯ ಸಾಧಿಸುವುದರೊಂದಿಗೆ ವಿಶ್ವ ಚಾಂಪಿಯನ್'ಗೂ ಭಾಜನರಾದರು.
ಈ ಬಾರಿ ವಿಶ್ವ ಚಾಂಪಿಯನ್ ಆಗುವ ಮೂಲಕ ಚೆಸ್ ದಂತಕತೆ ರಷ್ಯಾದ ಗ್ಯಾರಿ ಕ್ಯಾಸ್ಪೆರೊವ್ ಅವರಂತೆ ವಿಶ್ವದ ಶ್ರೇಷ್ಠಾತಿಶ್ರೇಷ್ಠ ಚೆಸ್ ಆಟಗಾರರ ಪಟ್ಟಿಗೆ ಸೇರ್ಪಡೆಗೊಳ್ಳುವ ಮುನ್ಸೂಚನೆ ನೀಡಿದ್ದಾರೆಂದು ಕೆಲ ಮಾಧ್ಯಮಗಳು ಕಾರ್ಲ್ಸನ್ ಅವರನ್ನು ಕೊಂಡಾಡಿವೆ. ಕ್ಯಾಸ್ಪೆರೊವ್ ಅವರು, ಸುಮಾರು 15 ವರ್ಷಗಳ ಕಾಲ ಚೆಸ್ ರಂಗದಲ್ಲಿ ವಿಶ್ವ ಚಾಂಪಿಯನ್ ಆಗಿ ಮೆರೆದಿದ್ದರು.
