ಲಂಡನ್‌(ಜು.27): ಐರ್ಲೆಂಡ್‌ ತಂಡವನ್ನು ಕೇವಲ 38 ರನ್‌ಗೆ ಆಲೌಟ್‌ ಮಾಡಿದ ಇಂಗ್ಲೆಂಡ್‌, ಏಕೈಕ ಟೆಸ್ಟ್‌ ಪಂದ್ಯವನ್ನು 143 ರನ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. 

ಪಂದ್ಯದ 3ನೇ ದಿನವಾದ ಶುಕ್ರವಾರ ಗೆಲುವಿಗೆ 182 ರನ್‌ ಗುರಿ ಪಡೆದ ಐರ್ಲೆಂಡ್‌, ಟೆಸ್ಟ್‌ ಕ್ರಿಕೆಟ್‌ ಇತಿಹಾಸದ 7ನೇ ಕನಿಷ್ಠ ಮೊತ್ತಕ್ಕೆ ಕುಸಿಯಿತು. ಕೇವಲ 94 ಎಸೆತಗಳಲ್ಲಿ ಐರ್ಲೆಂಡ್‌ ಆಲೌಟ್‌ ಆಯಿತು. ಆರಂಭಿಕ ಜೇಮ್ಸ್‌ ಮೆಕ್ಕೊಲುಮ್‌ (11) ಹೊರತು ಪಡಿಸಿ ಉಳಿದ್ಯಾವ ಆಟಗಾರರು ಎರಡಂಕಿ ಮೊತ್ತ ಗಳಿಸಲಿಲ್ಲ.

ವಿಶ್ವಕಪ್ ಗೆದ್ದ ಆಂಗ್ಲರಿಗೆ ಟೆಸ್ಟ್‌ ಶಾಕ್; ಐರ್ಲೆಂಡ್ ವಿರುದ್ದ 85 ರನ್‌ಗೆ ಆಲೌಟ್!

ಕ್ರಿಸ್‌ ವೋಕ್ಸ್‌ ತಮ್ಮ ವೃತ್ತಿಬದುಕಿನ ಶ್ರೇಷ್ಠ 17 ರನ್‌ಗೆ 6 ವಿಕೆಟ್‌ ಕಿತ್ತರೆ, ಸ್ಟುವರ್ಟ್‌ ಬ್ರಾಡ್‌ 19 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು. ಇವರಿಬ್ಬರನ್ನು ಬಿಟ್ಟು ಇನ್ಯಾರೂ ಬೌಲ್‌ ಮಾಡಲಿಲ್ಲ. ಕೇವಲ 3ನೇ ಟೆಸ್ಟ್‌ ಪಂದ್ಯವನ್ನಾಡಿದ ಐರ್ಲೆಂಡ್‌ಗೆ ಚೊಚ್ಚಲ ಜಯ ಪಡೆಯುವ ಅವಕಾಶವಿತ್ತು. ಆದರೆ ಇಂಗ್ಲೆಂಡ್‌ನ ಬಲಿಷ್ಠ ವೇಗದ ಬೌಲಿಂಗ್‌ ಪಡೆ ಎದುರು ಐರ್ಲೆಂಡ್‌ ಮಂಡಿಯೂರಿತು.

ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!

2ನೇ ದಿನದ ಮುಕ್ತಾಯಕ್ಕೆ 9 ವಿಕೆಟ್‌ ನಷ್ಟಕ್ಕೆ 303 ರನ್‌ ಗಳಿಸಿದ್ದ ಇಂಗ್ಲೆಂಡ್‌, 3ನೇ ದಿನವಾದ ಶುಕ್ರವಾರ ಮೊದಲ ಎಸೆತದಲ್ಲೇ ತನ್ನ ಅಂತಿಮ ವಿಕೆಟ್‌ ಕಳೆದುಕೊಂಡಿತು. ಆರಂಭಿಕರು ಹಾಗೂ ಕೆಳ ಕ್ರಮಾಂಕದ ಹೋರಾಟದ ನೆರವಿನಿಂದ ಇಂಗ್ಲೆಂಡ್‌ 2ನೇ ಇನ್ನಿಂಗ್ಸ್‌ನಲ್ಲಿ 181 ರನ್‌ ಮುನ್ನಡೆ ಪಡೆಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಅನ್ನು 85 ರನ್‌ಗೆ ಆಲೌಟ್‌ ಮಾಡಿ, ಬಳಿಕ 207 ರನ್‌ ಗಳಿಸಿದ್ದ ಐರ್ಲೆಂಡ್‌, ಕ್ರಿಕೆಟ್‌ ಕಾಶಿಯಲ್ಲಿ ಇತಿಹಾಸ ಬರೆಯಲಿದೆ ಎನ್ನುವ ನಿರೀಕ್ಷೆ ಕ್ರಿಕೆಟ್‌ ಪ್ರೇಮಿಗಳಲ್ಲಿ ಹುಟ್ಟಿತ್ತು. ಆದರೆ ನಿರೀಕ್ಷೆ ಹುಸಿಯಾಯಿತು.

ಸ್ಕೋರ್‌:

ಇಂಗ್ಲೆಂಡ್‌ 85 ಹಾಗೂ 303, 

ಐರ್ಲೆಂಡ್‌ 207 ಹಾಗೂ 38

(ಜೇಮ್ಸ್‌ 11, ವೋಕ್ಸ್‌ 6-17, ಬ್ರಾಡ್‌ 4-19) 

ಪಂದ್ಯ ಶ್ರೇಷ್ಠ: ಜ್ಯಾಕ್‌ ಲೀಚ್‌