‘‘ನ್ಯೂಜಿಲೆಂಡ್ ಅನ್ನು ನಾವು ದುರ್ಬಲ ಎಂದು ಹೇಳಲಾಗದು. ಡಬಲ್ಸ್ ಆಟಗಾರರು ಅತ್ಯಂತ ಬಲಿಷ್ಠರಾಗಿದ್ದು, ಇದೇ ವೇಳೆ ಸಿಂಗಲ್ಸ್ ಆಟಗಾರರನ್ನೂ ಹಗುರವಾಗಿ ತೆಗೆದುಕೊಳ್ಳಲು ನಾವು ಸಿದ್ಧವಿಲ್ಲ’’ ಎಂದು ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ಆಡದ ನಾಯಕ ಆನಂದ್ ಅಮೃತ್‌ರಾಜ್ ತಿಳಿಸಿದರು.
ಪುಣೆ(ಫೆ.02): ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಏಷ್ಯಾ/ಒಷೇನಿಯಾ ಗ್ರೂಪ್ ಮೊದಲ ಹಂತದ ಡೇವಿಸ್ ಕಪ್ ಪಂದ್ಯಾವಳಿಯು ಶುಕ್ರವಾರ ಆರಂಭವಾಗುತ್ತಿದ್ದು, 08 ಗ್ರಾಂಡ್ ಸ್ಲಾಮ್ ಪ್ರಶಸ್ತಿ ವಿಜೇತ ಲಿಯಾಂಡರ್ ಪೇಸ್ ಇದೀಗ ವಿಶ್ವದಾಖಲೆಯ ಗೆಲುವಿಗೆ ಅಣಿಯಾಗಿದ್ದಾರೆ.
ವೃತ್ತಿಬದುಕಿನ 55ನೇ ಡೇವಿಸ್ ಕಪ್ ಪಂದ್ಯನ್ನಾಡುತ್ತಿರುವ ಲಿಯಾಂಡರ್ ಪೇಸ್ ಇದುವರೆಗೆ 42 ಡಬಲ್ಸ್ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಶನಿವಾರ ನಡೆಯಲಿರುವ ಪಂದ್ಯದಲ್ಲಿ ಜಯ ಸಾಧಿಸಿದ್ದೇ ಆದರೆ, ಇಟಲಿಯ ನಿಕೋಲಾ ಪಿಟ್ರಾಂಜೆಲಿ (42) ದಾಖಲೆಯನ್ನು ಹಿಂದಿಕ್ಕಿ ಡೇವಿಸ್ ಕಪ್'ನಲ್ಲಿ ಅತಿಹೆಚ್ಚು ಪಂದ್ಯಗಳನ್ನು ಗೆದ್ದ ವಿಶ್ವದ ಮೊದಲ ಟೆನಿಸಿಗ ಎನಿಸಲಿದ್ದಾರೆ.
ಅಂದಹಾಗೆ 1974ರ ಬಳಿಕ ಪುಣೆ ನಗರವು ಮೊಟ್ಟಮೊದಲ ಡೇವಿಸ್ ಕಪ್ ಟೂರ್ನಿಗೆ ಆತಿಥ್ಯ ವಹಿಸಿದೆ. 2012ರಲ್ಲಿ ಕೊನೆಯ ಬಾರಿಗೆ ಚಂಡೀಗಢದಲ್ಲಿ ನಡೆದ ಡೇವಿಸ್ ಕಪ್ ಕಾದಾಟದಲ್ಲಿ ಇದೇ ಕಿವೀಸ್ ವಿರುದ್ಧ ಭಾರತ 5-0 ಅಂತರದಿಂದ ಕ್ಲೀನ್ಸ್ವೀಪ್ ಮಾಡಿತ್ತು. ಆಗ ಪೇಸ್ ಭಾರತ ತಂಡದಲ್ಲಿ ಆಡಿರಲಿಲ್ಲ.
1974ರಿಂದ ಒಮ್ಮೆಯೂ ಕಿವೀಸ್ ವಿರುದ್ಧ ಸೋಲದ ಭಾರತ, 1970ರಲ್ಲಿ ಸೋಲುಂಡಿತ್ತು.
ಶುಕ್ರವಾರ ನಡೆಯಲಿರುವ ಸಿಂಗಲ್ಸ್ ವಿಭಾಗದಲ್ಲಿ 368ನೇ ಶ್ರೇಯಾಂಕಿತ ಯೂಕಿ ಭಾಂಬ್ರಿ 414ನೇ ಶ್ರೇಯಾಂಕಿತ ಆಟಗಾರ ಫಿನ್ ಟಿಯರ್ನಿ ವಿರುದ್ಧ ಸೆಣಸಲಿದ್ದರೆ, 206ನೇ ಶ್ರೇಯಾಂಕಿತ ರಾಮ್'ಕುಮಾರ್ ರಾಮನಾಥನ್ 417ನೇ ಶ್ರೇಯಾಂಕದ ಜೋಸ್ ಸ್ಟಾಥಮ್ ವಿರುದ್ಧ ಕಾದಾಡಲಿದ್ದಾರೆ.
ಅಂದಹಾಗೆ ಈ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸುವವರು ಏಪ್ರಿಲ್ 7ರಿಂದ 9ರವರೆಗೆ ನಡೆಯಲಿರುವ ಮತ್ತೊಂದು ಸುತ್ತಿನ ಡೇವಿಸ್ ಕಪ್ ಸೆಣಸಾಟದಲ್ಲಿ ಉಜ್ಬೇಕಿಸ್ತಾನ ಇಲ್ಲವೇ ಕೊರಿಯಾ ವಿರುದ್ಧ ಸೆಣಸಲಿದ್ದಾರೆ.
ಮೈನೇನಿ ಔಟ್; ಬಾರದ ಬೋಪಣ್ಣ?
ಟೂರ್ನಿ ಶುರುವಾಗುವ ಒಂದು ದಿನದ ಮುಂಚೆ ಯುವ ಆಟಗಾರ ಸಾಕೇತ್ ಮೈನೇನಿ ಹಿಂದೆ ಸರಿದಿದ್ದಾರೆ. ಕಳೆದ ತಿಂಗಳು ನಡೆದ ಚೆನ್ನೈ ಓಪನ್ನಲ್ಲಿ ಪಾದದ ಬೆರಳಿಗೆ ಗಾಯ ಮಾಡಿಕೊಂಡಿದ್ದ ಅವರು ಇನ್ನೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಅವರ ಬದಲಿಗೆ ಪೇಸ್ ಜತೆಯಾಟಗಾರನಾಗಿ ವಿಷ್ಣುವರ್ಧನ್ ಕಣಕ್ಕಿಳಿಯಲಿದ್ದಾರೆ.
ಶನಿವಾರದ ಡಬಲ್ಸ್ ಪಂದ್ಯದಲ್ಲಿ ಪೇಸ್ ಮತ್ತು ವಿಷ್ಣು ಆರ್ಟೆಮ್ ಸಿಟಾಕ್ ಮತ್ತು ಮೈಕೆಲ್ ವೀನಸ್ ಜೋಡಿಯನ್ನು ಎದುರಿಸಲಿದ್ದಾರೆ. ಅಂದಹಾಗೆ ವಿಷ್ಣುವರ್ಧನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಮುನ್ನ ರೋಹನ್ ಬೋಪಣ್ಣ ಜತೆಗೆ ಎಐಟಿಎ ಪದಾಧಿಕಾರಿಗಳು ಮಾತನಾಡಿದರೆಂತಲೂ, ಆದರೆ, ಮಾತುಕತೆಯ ಪೂರ್ಣಪಾಠದ ಬಗ್ಗೆ ತನಗೇನೂ ತಿಳಿದಿಲ್ಲ ಎಂದೂ ಅಮೃತ್'ರಾಜ್ ಹೇಳಿದರು.
