ಭಾರತ ಸೋತರೂ ಲಿಯಾಂಡರ್ ಪೇಸ್ ಅವರ ಹೋರಾಟದ ಸ್ವಭಾವವನ್ನು ಸ್ವತಃ ನಡಾಲ್ ಅವರೇ ಕೊಂಡಾಡಿದರು. ಪಂದ್ಯದ ಬಳಿಕ ಮಾತನಾಡಿದ ನಡಾಲ್, ಡಬಲ್ಸ್'ನ ಇತಿಹಾಸದಲ್ಲಿ ಪೇಸ್ ಅತ್ಯುತ್ತಮ ಆಗಾರರಲ್ಲೊಬ್ಬರು ಎಂದು ಬಣ್ಣಿಸಿದರು.
ನವದೆಹಲಿ(ಸೆ. 18): ಡೇವಿಸ್ ಕಪ್ ಟೆನಿಸ್ ಟೂರ್ನಿಯಲ್ಲಿ ಸ್ಪೇನ್ ತಂಡದ ವಿರುದ್ಧ ಭಾರತ ನಿರೀಕ್ಷೆಯಂತೆ ಸೋಲನುಭವಿಸಿದೆ. ನಡಾಲ್'ರಂಥ ಟಾಪ್ ಆಟಗಾರರಿರುವ ಸ್ಪೇನ್ ವಿರುದ್ಧ ಭಾರತ ಗೆಲ್ಲುವ ಯಾವ ನಿರೀಕ್ಷೆಯಂತೂ ಇರಲಿಲ್ಲ. ಪುರುಷರ ಡಬಲ್ಸ್'ನಲ್ಲಿ ಏನಾದರೂ ಮ್ಯಾಜಿಕ್ ನಡೆಯಬಹುದೆಂದಷ್ಟೇ ಅಪೇಕ್ಷಿಸಲಾಗಿತ್ತು. ನಿನ್ನೆ ಅದೂ ನಡೆಯಲಿಲ್ಲ. ಆದರೂ ಟೆನಿಸ್'ನ ಹಳೆಯ ಹುಲಿ ಲಿಯಾಂಡರ್ ಪೇಸ್ ಕೊನೆಯವರೆಗೂ ಹೋರಾಡಿ ತಮ್ಮ ಎದುರಾಳಿಗಳನ್ನು ಅಚ್ಚರಿಗೊಳಿಸಿದರು. ನಿನ್ನೆಯ ಡಬಲ್ಸ್ ಆಟದಲ್ಲಿ ಲಿಯಾಂಡರ್ ಪೇಸ್ ಮತ್ತು ಸಾಕೇತ್ ಮೈನೇನಿ ಜೋಡಿ ಸ್ಪೇನ್'ನ ರಫೇಲ್ ನಡಾಲ್ ಮತ್ತು ಮಾರ್ಕ್ ಲೋಪೆಜ್ ವಿರುದ್ಧ 6-4, 6-7, 6-4, 6-4ರಿಂದ ಪರಾಭವಗೊಂಡರು.
ಹಾಲಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತರಾದ ನಡಾಲ್-ಲೋಪೆಜ್ ಜೋಡಿ ವಿರುದ್ಧ ಭಾರತೀಯರು ಸರಿಸಮನಾಗಿ ಹೋರಾಡಿದ್ದು ಗಮನಾರ್ಹ. 3 ಗಂಟೆ 23 ನಿಮಿಷ ಕಾಲ ಕಾದಾಡಿದ ಭಾರತೀಯರಿಗೆ ಸಾಕೇತ್ ಮೈನೇನಿಯವರ ಅನನುಭವ ಕಾಡಿತು. ಅಲ್ಲದೇ, ನಡಾಲ್ ಮತ್ತು ಲೋಪೆಜ್ ವಿಶ್ವದ ಅತ್ಯುತ್ತಮ ಆಟಗಾರರಾಗಿದ್ದು ಅವರ ಮುಂದೆ ಭಾರತೀಯರ ಆಟ ಹೆಚ್ಚು ಸಾಗಲಿಲ್ಲ. ಪೇಸ್'ಗೆ ಒಳ್ಳೆಯ ಜೊತೆಗಾರ ಸಿಕ್ಕಿದ್ದರೆ ಗೆಲುವು ಪ್ರಾಪ್ತವಾಗುತ್ತಿತ್ತೆಂಬುದರಲ್ಲಿ ಸಂಶಯವಿಲ್ಲ. ಭಾರತ ಸೋತರೂ ಲಿಯಾಂಡರ್ ಪೇಸ್ ಅವರ ಹೋರಾಟದ ಸ್ವಭಾವವನ್ನು ಸ್ವತಃ ನಡಾಲ್ ಅವರೇ ಕೊಂಡಾಡಿದರು. ಪಂದ್ಯದ ಬಳಿಕ ಮಾತನಾಡಿದ ನಡಾಲ್, ಡಬಲ್ಸ್'ನ ಇತಿಹಾಸದಲ್ಲಿ ಪೇಸ್ ಅತ್ಯುತ್ತಮ ಆಗಾರರಲ್ಲೊಬ್ಬರು ಎಂದು ಬಣ್ಣಿಸಿದರು.
ಪೇಸ್ ನಿವೃತ್ತಿ ಸದ್ಯಕ್ಕಿಲ್ಲ?
43 ವರ್ಷದ ಲಿಯಾಂಡರ್ ಪೇಸ್ ದೇಶದ ವಿಷಯಕ್ಕೆ ಬಂದರೆ ಅಪ್ಪಟ ದೇಶಪ್ರೇಮಿ. ತಮ್ಮಲ್ಲಿರುವುದನ್ನೆಲ್ಲಾ ಆಟದ ಮೂಲಕ ಧಾರೆ ಎರೆದುಬಿಡುತ್ತಾರೆ. ಡೇವಿಸ್ ಕಪ್'ನಲ್ಲಿ ಅವರು ಅನೇಕ ಅವಿಸ್ಮರಣೀಯ ಗೆಲುವು ಸಂಪಾದಿಸಿದ್ದಾರೆ. ಭಾರತೀಯ ಟೆನಿಸ್ ವಲಯದಲ್ಲಿ ಪೇಸ್ ವಿರುದ್ಧ ಪಿತೂರಿ ನಡೆಸುತ್ತಿರುವ ಹಲವು ಮಂದಿ ಇದ್ದಾರೆ. ರಿಯೋ ಒಲಿಂಪಿಕ್ಸ್'ನಲ್ಲಿ ಪೇಸ್'ಗೆ ಆದ ದುಸ್ಥಿತಿ ಆ ಶಿವನಿಗೇ ಪ್ರೀತಿ. ಪೇಸ್ ರಿಟೈರ್ ಆಗಬೇಕು ಎಂದು ಹಂಬಲಿಸುತ್ತಿರುವ, ಆಗ್ರಹಿಸುತ್ತಿರುವ ಸಾಕಷ್ಟು ಮಂದಿ ಇದ್ದಾರೆ. ಇವರಿಗೆಲ್ಲಾ ತಮ್ಮ ಟೆನಿಸ್ ರ್ಯಾಕೆಟ್ ಮೂಲಕ ಉತ್ತರ ಕೊಡಲು ಪೇಸ್ ನಿರ್ಧರಿಸಿದ್ದಾರೆ. ತಾವು ಇನ್ನಷ್ಟು ಕಾಲ ಆಡುವುದಾಗಿ ಪಣ ತೊಟ್ಟಿದ್ದಾರೆ.
ಲಿಯಾಂಡರ್ ಪೇಸ್ ತಮ್ಮ ವೃತ್ತಿಯಲ್ಲಿ 42 ಡಬಲ್ಸ್ ಪ್ರಶಸ್ತಿ ಗೆದ್ದಿದ್ದಾರೆ. ಇನ್ನೊಂದು ಗೆದ್ದರೆ ಅವರು ಹೊಸ ದಾಖಲೆ ನಿರ್ಮಿಸಲಿದ್ದಾರೆ. ಇಟಲಿಯ ನಿಕೋಲಾ ಪಿಯೆಟ್ರಾಂಗೆಲಿ ಅವರ ಸಾಧನೆಯನ್ನು ಹಿಂದಿಕ್ಕಲಿದ್ದಾರೆ.
