ಕ್ರಿಕೆಟ್ ಹಾಗೂ ಕ್ರೀಡಾ ಬೆಟ್ಟಿಂಗ್ ಭೂತ ಭಾರತದಲ್ಲಿ ಬಹುವಾಗಿ ಕಾಡುತ್ತಿದೆ. ಬೆಟ್ಟಿಂಗ್‌ನಿಂದಲೇ ಐಪಿಎಲ್‌ನ ಎರಡು ತಂಡಗಳು ಅಮಾನತ್ತು ಶಿಕ್ಷೆ ಅನುಭವಿಸಿದ ಊದಾಹರಣೆಗಳಿವೆ. ಇದೀಗ ಇದೇ ಬೆಟ್ಟಿಂಗ್ ಕಾನೂನು ಬದ್ಧಗೊಳಿಸಲು ಕಾನೂನು ಆಯೋಗ ಮುಂದಾಗಿದೆ. ಹಾಗಾದರೆ ಇನ್ಮುಂದೆ ಬೆಟ್ಟಿಂಗ್ ಕಾನೂನು ಬದ್ಧವಾಗುತ್ತಾ? ಇಲ್ಲಿದೆ ವಿವರ.
ನವದೆಹಲಿ(ಜು.06): ಕದ್ದು ಮುಚ್ಚಿ ಬೆಟ್ಟಿಂಗ್ ಆಡುತ್ತಿದ್ದವರು ಇನ್ಮುಂದೆ ರಾಜಾರೋಷವಾಗಿ ಬೆಟ್ಟಿಂಗ್ ಆಡಬಹುದು. ಇದೀಗ ಕಾನೂನು ಆಯೋಗ ಭಾರತದಲ್ಲಿ ಕ್ರಿಕೆಟ್ ಹಾಗೂ ಇತರ ಕ್ರೀಡೆಗಳ ಬೆಟ್ಟಿಂಗ್ ಕಾನೂನು ಬದ್ಧಗೊಳಿಸಲು ಚಿಂತನೆ ನಡೆಸಿದೆ.
ಭಾರತದಲ್ಲಿ ಕುದುರೆ ರೇಸ್ ಹೊರತು ಪಡಿಸಿ ಉಳಿದೆಲ್ಲಾ ಕ್ರೀಡೆಗಳಲ್ಲಿನ ಬೆಟ್ಟಿಂಗ್ ಕಾನೂನು ಬಾಹಿರ. ಇದೀಗ ಇತರ ದೇಶಗಳಲ್ಲಿರುವಂತೆ ಭಾರತದಲ್ಲೂ ಎಲ್ಲಾ ಕ್ರೀಡೆಗಳಲ್ಲಿ ಬೆಟ್ಟಿಂಗ್ ಕಾನೂನು ಬದ್ಧಗೊಳಿಸಲು ಕಾನೂನು ಆಯೋಗ ಶಿಫಾರಸ್ಸು ಮಾಡಿದೆ.
ಭಾರತದಲ್ಲಿ ಬೆಟ್ಟಿಂಗ್ ಕಾನೂನು ಬದ್ಧಗೊಳಿಸೋ ಚಿಂತೆ ಇಂದು ನಿನ್ನೆಯದ್ದಲ್ಲ. ಹಲವು ಬಾರಿ ಕಾನೂನು ಆಯೋಗ ಈ ಕುರಿತು ಚಿಂತನೆ ನಡೆಸಿದೆ. ಕಾನೂನು ಬದ್ಧ ಬೆಟ್ಟಿಂಗ್‌ನಲ್ಲಿ ಪರಿಸ್ಥಿತಿಗೆ ತಕ್ಕಂತೆ ಹಲವು ಮಾರ್ಪಾಟು ತರಲು ಆಯೋಗ ನಿರ್ಧರಿಸಿದೆ.
ಆಯೋಗದ ಶಿಫಾರಸ್ಸು ಅಂಗೀಕಾರವಾಗೋದು ಕಷ್ಟ. ಕಾರಣ ಬೆಟ್ಟಿಂಗ್ ಕಾನೂನು ಬದ್ಧಗೊಳಿಸೋದಕ್ಕೆ ಭಾರೀ ವಿರೋಧವಿದೆ. ಕ್ರೀಡೆಯಲ್ಲಿ ಬೆಟ್ಟಿಂಗ್ ಆವರಿಸಿದರೆ ಕ್ರೀಡಾ ಸ್ಪೂರ್ತಿ ಇಲ್ಲವಾಗುತ್ತೆ ಅನ್ನೋ ಬಲವಾದ ವಾದವೂ ಸೇರಿಕೊಂಡಿದೆ. ಹೀಗಾಗಿ ಆಯೋಗದ ನಿರ್ಧಾರಕ್ಕೆ ಅನುಮೋದನೆ ಸಿಗುತ್ತಾ ಅನ್ನೋ ಕುತೂಹಲ ಕ್ರೀಡಾಭಿಮಾನಿಗಳಲ್ಲಿ ಮನೆಮಾಡಿದೆ.
