‘‘ಬಿಸಿಸಿಐ ಕಾರ್ಯಚಟುವಟಿಕೆಗಳೆಲ್ಲವೂ ಸಾರ್ವಜನಿಕವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದ್ದು, ಇದರ ಹಿನ್ನೆಲೆಯಲ್ಲಿ ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿಯನ್ನು ಆರ್‌ಟಿಐ ವ್ಯಾಪ್ತಿಗೆ ಒಳಪಡಿಸುವ ಸಂಬಂಧದ ಕಾರ್ಯಸಾಧ್ಯತೆಯನ್ನು ಪರಿಶೀಲಿಸುತ್ತಿದ್ದೇವೆ’’ - ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎಸ್. ಚೌಹಾಣ್
ಮುಂಬೈ(ನ.02): ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ಮಾಹಿತಿ ಹಕ್ಕು ಕಾಯಿದೆ (ಆರ್ಟಿಐ) ಅಡಿ ತರಬೇಕೆಂಬ ಕುರಿತಾದ ಹಲವರ ಒತ್ತಾಯವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಕಾನೂನು ಆಯೋಗ ಈ ಕುರಿತು ಗಂಭೀರ ಚಿಂತನೆ ನಡೆಸಿದೆ.
ಬಿಸಿಸಿಐ ಆಡಳಿತ ಸುಧಾರಣೆಗಾಗಿ ನ್ಯಾ. ಲೋಧಾ ಸಮಿತಿ ನೀಡಿರುವ ಪ್ರಮುಖ ಶಿಫಾರಸುಗಳ ಪೈಕಿ ಇದೂ ಕೂಡ ಒಂದಾಗಿದೆ. ಒಂದೊಮ್ಮೆ ಬಿಸಿಸಿಐ ಏನಾದರೂ ಆರ್ಟಿಐ ವ್ಯಾಪ್ತಿಗೆ ಬಂದದ್ದೇ ಆದಲ್ಲಿ ಇನ್ನು ಮುಂದೆ ಅದು ನಡೆಸುವ ರಹಸ್ಯ ಸಭೆಗಳಾಗಲೀ, ರಾಜಕೀಯ ವ್ಯಕ್ತಿಗಳನ್ನು ಪದಾಕಾರಿಗಳನ್ನಾಗಿ ಆರಿಸುವುದಾಗಲೀ, ನಿರ್ದಿಷ್ಟ ವ್ಯಕ್ತಿ ಇಲ್ಲವೇ ಸಂಸ್ಥೆ ಜತೆಗಿನ ಒಪ್ಪಂದವಾಗಲೀ ಹಾಗೂ ಆಟಗಾರರ ಆಯ್ಕೆ ಇತ್ಯಾದಿ ವಿಷಯಗಳು ಸಾರ್ವಜನಿಕವಾಗಲಿದೆ.
‘‘ಬಿಸಿಸಿಐ ಕಾರ್ಯಚಟುವಟಿಕೆಗಳೆಲ್ಲವೂ ಸಾರ್ವಜನಿಕವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದ್ದು, ಇದರ ಹಿನ್ನೆಲೆಯಲ್ಲಿ ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿಯನ್ನು ಆರ್ಟಿಐ ವ್ಯಾಪ್ತಿಗೆ ಒಳಪಡಿಸುವ ಸಂಬಂಧದ ಕಾರ್ಯಸಾಧ್ಯತೆಯನ್ನು ಪರಿಶೀಲಿಸುತ್ತಿದ್ದೇವೆ’’ ಎಂದು ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ಹೇಳಿದ್ದಾರೆ.
ಬಿಸಿಸಿಐ ಅನ್ನು ಆರ್ಟಿಐ ಕಾಯಿದೆಯಡಿ ತರುವುದು ಮತ್ತು ಬೆಟ್ಟಿಂಗ್ ಅನ್ನು ಕಾನೂನುಬದ್ಧಗೊಳಿಸಲು ಸಂಸತ್ತು ಮುಂದಾಗಬೇಕೆಂದು ಜುಲೈ 18ರ ತನ್ನ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯ ತಿಳಿಸಿರುವಂತೆ ಇವೆರಡಕ್ಕೂ ಸಾರ್ವಜನಿಕರ ಪ್ರತಿಕ್ರಿಯೆ ಏನು ಎಂಬುದನ್ನು ಪರಿಗಣಿಸುತ್ತೇವೆ. ಜನತೆಯ ಅಭಿಪ್ರಾಯ ಸಂಗ್ರಹವಾದ ಬಳಿಕ ಆಯೋಗವು ತಜ್ಞರು ಮತ್ತು ವಿವಿಧ ಕ್ರೀಡಾ ಕ್ಷೇತ್ರದ ಪ್ರಮುಖರನ್ನು ಸಂದರ್ಶಿಸಿ ಬಳಿಕ ಸರ್ಕಾರಕ್ಕೆ ಈ ಕುರಿತು ಶಿಫಾರಸು ಸಲ್ಲಿಸುತ್ತದೆ ಎಂದೂ ಚೌಹಾಣ್ ಹೇಳಿದ್ದಾರೆ
