ಜಕಾರ್ತ(ಜು.23]: ಏಷ್ಯಾ ಕಿರಿಯರ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿ ಭಾರತದ ಉದಯೋನ್ಮುಖ ಶಟ್ಲರ್ ಲಕ್ಷ್ಯ ಸೆನ್ ಹೊರಹೊಮ್ಮಿದ್ದಾರೆ. ಈ ಮೂಲಕ ಲಕ್ಷ್ಯ ಇತಿಹಾಸ ನಿರ್ಮಿಸಿದ್ದಾರೆ. ಭಾನುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ಲಕ್ಷ್ಯ, ವಿಶ್ವ ನಂ.1 ಥಾಯ್ಲೆಂಡ್‌ನ ಶಟ್ಲರ್ ಕುನ್ಲವಟ್ ವಿಟಿಡ್‌ಸರನ್‌ರನ್ನು 21-19, 21-18 ನೇರ ಗೇಮ್‌ಗಳಲ್ಲಿ ಸೋಲಿಸಿ 6 ವರ್ಷಗಳ ಬಳಿಕ ಮತ್ತೆ ಭಾರತಕ್ಕೆ ಪ್ರಶಸ್ತಿ ತಂದುಕೊಟ್ಟ ಮೊದಲ ಭಾರತದ ಶಟ್ಲರ್ ಎಂಬ ಗೌರವಕ್ಕೂ ಭಾಜನರಾದರು.

ಪುರುಷರ ಸಿಂಗಲ್ಸ್‌ನಲ್ಲಿ ಬರೋಬ್ಬರಿ 53 ವರ್ಷಗಳ ಬಳಿಕ ಏಷ್ಯನ್ ಬ್ಯಾಡ್ಮಿಂಟನ್ ಕಿರಿಯರ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದ ಲಕ್ಷ್ಯ ಭಾರತದ ಮೊದಲ ಹಾಗೂ ಒಟ್ಟಾರೆಯಾಗಿ 3ನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಏಷ್ಯನ್ ಕಿರಿಯರ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು 1965ರಲ್ಲಿ ಗೌತಮ್ ಥಕ್ಕರ್ ಮತ್ತು 2011ರಲ್ಲಿ ಕಂಚು ಗೆದ್ದಿದ್ದ ಸಿಂಧು, 2012ರ ಟೂರ್ನಿಯಲ್ಲಿ ಏಷ್ಯನ್ ಚಾಂಪಿಯನ್ ಆಗಿದ್ದರು. 2011 ಮತ್ತು 2012ರಲ್ಲಿ ಸಮೀರ್ ವರ್ಮಾ ಬೆಳ್ಳಿ ಮತ್ತು ಕಂಚು ಗೆದ್ದಿದ್ದರು.

2009ರಲ್ಲಿ ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್ ಚೋಪ್ರಾ ಮತ್ತು ಪ್ರಜಕ್ತಾ ಸಾವಂತ್ ಜೋಡಿ ಕಂಚು ಗೆದ್ದಿತ್ತು. ಅಮೋಘ ಪ್ರದರ್ಶನ ತೋರಿದ 6ನೇ ಶ್ರೇಯಾಂಕದ ಲಕ್ಷ್ಯ, ಈ ಪ್ರಶಸ್ತಿ ಗೆಲುವಿಗಾಗಿ ವಿಶ್ವದ ಮೂವರು ಅಗ್ರ ಶಟ್ಲರ್‌ಗಳನ್ನು ಸೋಲಿಸಿ ಈ ಪ್ರಶಸ್ತಿ ಗೆದ್ದಿದಾರೆ. ಕ್ವಾರ್ಟರ್ ಪೈನಲ್‌ನಲ್ಲಿ ವಿಶ್ವ ನಂ.2 ಚೀನಾದ ಲೀ ಶಿಫೆಂಗ್‌ರನ್ನು, ಸೆಮಿಫೈನಲ್‌ನಲ್ಲಿ ವಿಶ್ವ ನಂ.4 ಇಮಾನುವೆಲ್ ರುಂಬರನ್ನು ಮತ್ತು ಫೈನಲ್‌ನಲ್ಲಿ ಕುನ್ಲವಟ್’ರನ್ನು ಬಗ್ಗು ಬಡಿದರು.

‘ಏಷ್ಯನ್ ಚಾಂಪಿಯನ್ ಆಗಿರುವುದಕ್ಕೆ ಬಹಳಷ್ಟು ಸಂತಸವಾಗಿದೆ. ಈ ಪ್ರಶಸ್ತಿ ನನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಾನು ತಂಡ ಹಾಗೂ ವೈಯಕ್ತಿಕ ಎರಡೂ ಕೂಟಗಳಲ್ಲೂ ಪಾಲ್ಗೊಂಡಿದ್ದೇನೆ. ಇದೊಂದು ದೀರ್ಘ ಟೂರ್ನಿ ಪ್ರಶಸ್ತಿ ಗೆದ್ದಿರುವುದರಿಂದ ನಾನು ಉತ್ತಮವಾಗಿ ಆಡುತ್ತೇನೆ ಮತ್ತು ಪ್ರಶಸ್ತಿಯನ್ನೂ ಗೆಲ್ಲುತ್ತೇನೆ ಎಂಬ ವಿಶ್ವಾಸ ಹೆಚ್ಚಿದೆ’ ಎಂದು ಲಕ್ಷ್ಯ ಸೆನ್ ಹೇಳಿದ್ದಾರೆ.

10 ಲಕ್ಷ ಬಹುಮಾನ
ನವದೆಹಲಿ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯಾ ಕಿರಿಯರ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಲಕ್ಷ್ಯ ಸೆನ್‌ಗೆ, ಭಾರತದ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಐ) ₹ 10 ಲಕ್ಷ
ನಗದು ಬಹುಮಾನ ಘೋಷಿಸಿದೆ. ಬಿಎಐ ಅಧ್ಯಕ್ಷ ಬಿಸ್ವಾಸ್ ಶರ್ಮಾ, ‘ಲಕ್ಷ್ಯ ಸೆನ್, ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಯುವ ಕ್ರೀಡಾಪಟುಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಿರುವುದಕ್ಕೆ ದೊರೆತ ಪ್ರತಿಫಲ ಇದು’ ಎಂದು ಹೇಳಿದ್ದಾರೆ.