Asianet Suvarna News Asianet Suvarna News

ಕೆಪಿಎಲ್ ಆರಂಭಕ್ಕೆ ಕ್ಷಣಗಣನೆ

ಉದ್ಘಾಟನಾ ಪಂದ್ಯದಲ್ಲಿ ಕರ್ನಾಟಕ ರಣಜಿ ತಂಡದ ನಾಯಕ ತಂಡದ ನಾಯಕ ವಿನಯ್ ಕುಮಾರ್ ನೇತೃತ್ವದ ಹುಬ್ಬಳ್ಳಿ ಟೈಗರ್ಸ್‌ ಹಾಗೂ ಎಸ್.ಅರವಿಂದ್ ಸಾರಥ್ಯದ ಬೆಳಗಾವಿ ಪ್ಯಾಂಥರ್ಸ್‌ ಸೆಣಸಾಡಲಿವೆ.

KPL kicks off today

ಬೆಂಗಳೂರು(ಸೆ.01): ಕರ್ನಾಟಕ ಪ್ರೀಮಿಯರ್ ಲೀಗ್ 6ನೇ ಆವೃತ್ತಿಗೆ ಇಂದು ಚಾಲನೆ ಸಿಗಲಿದೆ. ಇಂದಿನಿಂದ 23ರ ವರೆಗೂ ನಡೆಯಲಿದ್ದು, ಮೊದಲೆರಡು ಪಂದ್ಯಗಳಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಉದ್ಘಾಟನಾ ಪಂದ್ಯದಲ್ಲಿ ಕರ್ನಾಟಕ ರಣಜಿ ತಂಡದ ನಾಯಕ ತಂಡದ ನಾಯಕ ವಿನಯ್ ಕುಮಾರ್ ನೇತೃತ್ವದ ಹುಬ್ಬಳ್ಳಿ ಟೈಗರ್ಸ್‌ ಹಾಗೂ ಎಸ್.ಅರವಿಂದ್ ಸಾರಥ್ಯದ ಬೆಳಗಾವಿ ಪ್ಯಾಂಥರ್ಸ್‌ ಸೆಣಸಾಡಲಿವೆ.

ಬೆಳಗಾವಿ ಪ್ಯಾಂಥರ್ಸ್‌ ತಂಡದಲ್ಲಿ ಯುವ ಹಾಗೂ ಅನುಭವಿ ಆಟಗಾರರಿದ್ದಾರೆ. ಎಸ್.ಅರವಿಂದ್, ಸ್ಟುವರ್ಟ್ ಬಿನ್ನಿ, ಕೆ.ಗೌತಮ್ ಐಪಿಎಲ್ ಆಡಿದ ಅನುಭವ ಹೊಂದಿದ್ದಾರೆ. ರಾಜ್ಯ ಕ್ರಿಕೆಟ್‌ನಲ್ಲಿ ಸಾಕಷ್ಟು ಹೆಸರು ಮಾಡಿರುವ ಮಿರ್ ಕೌನೇನ್ ಅಬ್ಬಾಸ್, ಸ್ಟ್ಯಾಲಿನ್ ಹೂವರ್, ಕೆ.ಎನ್.ಭರತ್'ರಂತಹ ಆಟಗಾರರ ಬಲವಿದೆ. ಯುವ ಆಟಗಾರ ಶುಭಾಂಗ್ ಹೆಗ್ಡೆ ಮೇಲೆ ನಿರೀಕ್ಷೆ ಇಡಲಾಗಿದೆ. ತಂಡಕ್ಕೆ ಶ್ರೀಲಂಕಾದ ಮಾಜಿ ನಾಯಕ ಮರ್ವನ್ ಅಟಾಪಟ್ಟು ಸಲಹೆಗಾರರಾಗಿದ್ದು, ಅವರ ಮಾರ್ಗದರ್ಶನದಲ್ಲಿ ತಂಡ ಕಣಕ್ಕಿಳಿಯಲಿದೆ. ಅಲ್ಲದೇ ದುಬೈನಲ್ಲಿ ತಂಡ ನ್ಯೂಜಿಲೆಂಡ್‌'ನ ಮಾಜಿ ಆಲ್ರೌಂಡರ್ ಜೇಕಬ್ ಓರಮ್ ಅವರೊಂದಿಗೆ ಅಭ್ಯಾಸ ಶಿಬಿರದಲ್ಲೂ ಪಾಲ್ಗೊಂಡಿತ್ತು. ಹೀಗಾಗಿ ತಂಡದ ಮೇಲೆ ಸಹಜವಾಗಿಯೇ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಪಾಂಡೆ ಅಲಭ್ಯ: ಶ್ರೀಲಂಕಾ ಪ್ರವಾಸದಲ್ಲಿರುವ ಮನೀಶ್ ಪಾಂಡೆ ತಂಡದಲ್ಲಿ ಆಡುತ್ತಿಲ್ಲ. ಲಂಕಾ ಪ್ರವಾಸ ಮುಕ್ತಾಯಗೊಂಡ ನಂತರ ಅವರು ಕೆಲ ದಿನಗಳ ಮಟ್ಟಿಗೆ ತಂಡ ಕೂಡಿಕೊಳ್ಳುವ ಸಾಧ್ಯತೆ ಇದೆ. ಇದೇ ತಿಂಗಳು ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆರಂಭವಾಗಲಿದ್ದು, ಭಾರತ ತಂಡದಲ್ಲಿ ಸಹಜವಾಗಿಯೇ ಪಾಂಡೆ ಸ್ಥಾನ ಪಡೆಯಲಿದ್ದಾರೆ. ಆದರೆ ಮಹತ್ವದ ಸರಣಿಗೂ ಮುನ್ನ ಕೆಪಿಎಲ್ ಪಂದ್ಯಗಳು ಪಾಂಡೆಗೆ ಅಭ್ಯಾಸ ನಡೆಸಲು ಉತ್ತಮ ವೇದಿಕೆಯಾಗಲಿದೆ ಎನ್ನಲಾಗಿದೆ.

ಕೆಪಿಎಲ್‌'ನಿಂದ ರಣಜಿಗೆ ತಯಾರಿ: ರಣಜಿ ಋತು ಆರಂಭಕ್ಕೂ ಮೊದಲೇ ಕೆಪಿಎಲ್ ನಡೆಯುತ್ತಿರುವುದರಿಂದ ಮಾನಸಿಕವಾಗಿ ಸಿದ್ಧತೆ ನಡೆಸಲು ಅನುಕೂಲವಾಗಲಿದೆ ಎಂದು ಬೆಳಗಾವಿ ತಂಡದ ನಾಯಕ ಎಸ್.ಅರವಿಂದ್ ಹೇಳಿದ್ದಾರೆ. ಟಿ20ಯಲ್ಲಿ ಒತ್ತಡ ನಿಭಾಯಿಸುವ ಕಲೆಯನ್ನು ಕಲಿಯಬಹುದಾಗಿದೆ. ರಣಜಿ ಪಂದ್ಯಗಳು ಸಹ ರೋಚಕವಾಗಿ ಸಾಗುವುದರಿಂದ ಕೆಪಿಎಲ್‌'ನಲ್ಲಿನ ಕಲಿಕೆ, ಎಲ್ಲೆಡೆ ನೆರವಿಗೆ ಬರಲಿದೆ ಎಂದು ಅರವಿಂದ್ ಅಭಿಪ್ರಾಯಪಟ್ಟಿದ್ದಾರೆ.

ವಿನಯ್, ಮಯಾಂಕ್ ಮೇಲೆ ಒತ್ತಡ: ಹುಬ್ಬಳ್ಳಿ ಟೈಗರ್ಸ್‌ ತಂಡದಲ್ಲಿ ಯುವ ಆಟಗಾರರೇ ಹೆಚ್ಚಿದ್ದಾರೆ. ಅನುಭವಿ ಆಟಗಾರರಾದ ವಿನಯ್ ಕುಮಾರ್ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್‌'ವಾಲ್ ಮೇಲೆ ತಂಡ ಹೆಚ್ಚಾಗಿ ಅವಲಂಬಿತಗೊಂಡಿದೆ. ಉಳಿದಂತೆ ಯುವ ಬ್ಯಾಟ್ಸ್‌'ಮನ್ ಅಭಿಷೇಕ್ ರೆಡ್ಡಿ ಬ್ಯಾಟಿಂಗ್ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಡಿ.ನಿಶ್ಚಲ್, ಕ್ರಾಂತಿ ಕುಮಾರ್, ಡೇವಿಡ್ ಮಥಿಯಸ್ ಮೇಲೆ ಹೆಚ್ಚಿನ ಜವಾಬ್ದಾರಿ ಹೆಚ್ಚಿದೆ.

ರಾಜ್ಯ ತಂಡಕ್ಕೆ ಕಾಲಿಡಲು ಅವಕಾಶ: ಕೆಪಿಎಲ್ ಪಂದ್ಯಾವಳಿಯಿಂದ ಈ ಬಾರಿ ಕರ್ನಾಟಕ ತಂಡಕ್ಕೆ ಕೆಲ ಆಟಗಾರರು ಕಾಲಿಟ್ಟರೂ ಆಶ್ಚರ್ಯವಿಲ್ಲ ಎಂದು ಹುಬ್ಬಳ್ಳಿ ನಾಯಕ ವಿನಯ್ ಕುಮಾರ್ ಹೇಳಿದ್ದಾರೆ. ಯುವ ಆಟಗಾರರಲ್ಲಿ ಪೈಪೋಟಿ ಹೆಚ್ಚಿದೆ. ಉತ್ತಮ ಪ್ರದರ್ಶನ ನೀಡಬೇಕು ಎನ್ನುವ ಛಲ ಪ್ರತಿಯೊಬ್ಬರಲ್ಲೂ ಕಾಣಬಹುದು. ಪೈಪೋಟಿ ಹೆಚ್ಚಿದ್ದಾಗ ಸಹಜವಾಗಿಯೇ ಗುಣಮಟ್ಟ ಸಹ ಹೆಚ್ಚಿರುತ್ತದೆ. ಹೀಗಾಗಿ ಈ ಪಂದ್ಯಾವಳಿಯಿಂದ ದೊಡ್ಡ ಮಟ್ಟದ ನಿರೀಕ್ಷೆ ಇದೆ ಎಂದು ವಿನಯ್ ಕುಮಾರ್ ಹೇಳಿದ್ದಾರೆ.

Follow Us:
Download App:
  • android
  • ios