ಬೆಂಗಳೂರು(ಆ.21): ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯ 8ನೇ ಆವೃತ್ತಿಯಲ್ಲಿ ಮೊದಲ ಸೆಂಚುರಿ ಸಿಡಿಸಿದ ಮನೀಶ್ ಪಾಂಡೆಗೆ ನಿರಾಸೆಯಾಗಿದೆ. ಹುಬ್ಳಿ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದ್ದ ಬೆಳಗಾವಿ ಪ್ಯಾಂಥರ್ಸ್‌ಗೆ ಮೊಹಮ್ಮದ್ ತಾಹ ಹಾಗೂ ಪ್ರವೀಣ್ ದುಬೆ ಶಾಕ್ ನೀಡಿದ್ದಾರೆ. ಅಂತಿಮ ಓವರ್‌ನಲ್ಲಿ ದುಬೆ ಸಾಹಸದಿಂದ ಹುಬ್ಳಿ ಟೈಗರ್ಸ್ 5 ವಿಕೆಟ್ ರೋಚಕ ಗೆಲುವು ಸಾಧಿಸಿದೆ.  

ಮೊದಲು ಬ್ಯಾಟಿಂಗ್ ಮಾಡಿದ ಬೆಳಗಾವಿ ತಂಡಕ್ಕೆ ಮನೀಶ್ ಪಾಂಡೆ ಆಸರೆಯಾದರು. 41 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದರೂ, ಮನೀಶ್ ಪಾಂಡೆ ಹೋರಾಟ ಬೆಳಗಾವಿಗೆ ಚೇತರಿಕೆ ನೀಡಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಪಾಂಡೆ ಭರ್ಜರಿ ಸೆಂಚುರಿ ಸಿಡಿಸಿದರು. ಮನೀಶಾ ಪಾಂಡೆ 50 ಎಸೆತದಲ್ಲಿ 7 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ  ಅಜೇಯ 102 ರನ್ ಸಿಡಿಸಿದರು. ಪಾಂಡೆಗೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಹೀಗಾಗಿ ಬೆಳಗಾವಿ ಪ್ಯಾಂಥರ್ಸ್, 7 ವಿಕೆಟ್ ನಷ್ಟಕ್ಕೆ 180  ರನ್ ಸಿಡಿಸಿತು.

181 ರನ್ ಗುರಿ ಬೆನ್ನಟ್ಟಿದ ಹುಬ್ಳಿ ಟೈಗರ್ಸ್ ಉತ್ತಮ ಆರಂಭ ಪಡೆಯಿತು. ಮೊಹಮ್ಮದ್ ತಾಹ, ಲವ್ನೀತ್ ಸಿಸೋಡಿ 40 ರನ್ ಜೊತೆಯಾಟ ನೀಡಿದರು. ಸಿಸೋಡಿಯಾ 29 ರನ್ ಸಿಡಿಸಿ ಔಟಾದರು. ಮೊಹಮ್ಮದ್ ತಾಹ ಅರ್ಧಶತಕ ಸಿಡಿಸಿ ನೆರವಾದರು. ಶಿಶಿರ್ ಭವಾನೆ 12 ಹಾಗೂ ಕೆಪಿ ಪವನ್ 22 ರನ್ ಸಿಡಿಸಿ ಔಟಾಗೋ ಮೂಲಕ ಆತಂಕ ಸೃಷ್ಟಿಸಿದರು. ಏಕಾಂಗಿ ಹೋರಾಟ ಮುಂದುವರಿಸಿದ ಮೊಹಮ್ಮದ್ ತಾಹ, ಪ್ರವೀಣ್ ದುಬೆ ಜೊತೆ ಇನ್ನಿಂಗ್ಸ್ ಕಟ್ಟಿದರು. ತಾಹ 75 ರನ್ ಸಿಡಿಸಿ ಔಟಾದರು.

ಪ್ರವೀಣ್ ದುಬೆ ಸ್ಫೋಟಕ ಬ್ಯಾಟಿಂಗ್ ಬೆಳಗಾವಿ ಪ್ಯಾಂಥರ್ಸ್ ತಂಡದ ಗೆಲುವಿನ ಆಸೆ ಚಿಗುರಿಸಿತು. ಅಂತಿಮ 6 ಎಸೆತದಲ್ಲಿ ಬೆಳಗಾವಿ ಗೆಲುವಿಗೆ 11 ರನ್ ಅವಶ್ಯಕತೆ ಇತ್ತು. ದುಬೆ ಅಬ್ಬರಕ್ಕೆ ಹುಬ್ಳಿ ರೋಚಕ ಗೆಲುವು ಸಾಧಿಸಿತು. 19.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ದುಬೆ 18 ಎಸೆತದಲ್ಲಿ 33 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇತ್ತ ಮನೀಶ್ ಪಾಂಡೆ ಶತಕ ವ್ಯರ್ಥವಾಯ್ತು.