3 ಕಡೆ ಪಂದ್ಯ?ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ನವೀಕರಣಗೊಳ್ಳುತ್ತಿದ್ದ ಹಿನ್ನೆಲೆಯೂ ಸೇರಿದಂತೆ ಹಲವಾರು ಕಾರಣಗಳಿಂದ ಕಳೆದ ವರ್ಷ ಬೆಂಗಳೂರಿನಲ್ಲಿ ಕೆಪಿಎಲ್ ಆಯೋಜನೆಯಾಗಿರಲಿಲ್ಲ. ಆದರೆ, ಈ ಬಾರಿ ಬೆಂಗಳೂರು ಸೇರಿದಂತೆ 3 ಕಡೆ ಕೆಪಿಎಲ್ ಪಂದ್ಯಾವಳಿ ಆಯೋಜಿಸಲು ಕೆಎಸ್‌ಸಿಎ ಸಿದ್ಧತೆ ನಡೆಸಿದೆ. ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಪಂದ್ಯಗಳು ಆಯೋಜನೆಯಾಗಲಿವೆ. ಸುಮಾರು 20 ದಿನಗಳ ಕಾಲ ಕೆಪಿಎಲ್ ಟೂರ್ನಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು(ಆ.02): ಜನಪ್ರಿಯ ದೇಸೀ ಟಿ20 ಕ್ರಿಕೆಟ್ ಪಂದ್ಯಾವಳಿಯಾದ ಇಂಡಿಯನ್ ಪ್ರೀಮಿಯರ್ ಲೀಂಗ್ (ಐಪಿಎಲ್) ಯಶಸ್ಸಿನಿಂದ ಉತ್ತೇಜನ ಪಡೆದು ರಾಜ್ಯಮಟ್ಟದಲ್ಲಿ ಆರಂಭವಾದ ದೇಶದ ಮೊದಲ ಟಿ20 ಕ್ರಿಕೆಟ್ ಪಂದ್ಯಾವಳಿ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಮತ್ತೆ ಬಂದಿದೆ. ಕಳೆದ 8 ವರ್ಷಗಳಲ್ಲಿ ಐದು ಬಾರಿಯಷ್ಟೇ ನಡೆದಿರುವ ಕೆಪಿಎಲ್ ಟಿ20ಯ 6ನೇ ಆವೃತ್ತಿ ನಡೆಯುವುದು ಇದೀಗ ಖಚಿತವಾಗಿದೆ.
ಇದೇ ಬರುವ ಸೆಪ್ಟೆಂಬರ್ ತಿಂಗಳಲ್ಲಿ ಪಂದ್ಯಾವಳಿ ನಡೆಯುವ ನಿರೀಕ್ಷೆ ಇದ್ದು, ಈ ಬಾರಿ 8ರ ಬದಲಾಗಿ 7 ತಂಡಗಳು ಮಾತ್ರ ಕಣದಲ್ಲಿರುವ ಸಾಧ್ಯತೆ ಇದೆ. ಈ ಹಿಂದಿನ ಕೆಪಿಎಲ್ ಆವೃತ್ತಿಯಲ್ಲಿ 8 ತಂಡಗಳು ಸೆಣಸಿದ್ದವು. ಈ ಬಾರಿಯ ಆವೃತ್ತಿಯಲ್ಲಿ ಈ ಹಿಂದೆ ಆಡಿದ್ದ ರಾಕ್ಸ್ಟಾರ್ಸ್ ಮತ್ತು ಮಂಗಳೂರು ಯುನೈಟೆಡ್ ತಂಡಗಳು ಲೀಗ್ನಿಂದ ಹೊರಗುಳಿಯಲಿವೆ ಎನ್ನಲಾಗಿದೆ. ಈ ಎರಡೂ ತಂಡಗಳು ಹಿಂದೆ ಸರಿಯುವುದಕ್ಕೆ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ.
2016ರಲ್ಲಿ ನಡೆದಿದ್ದ ಕೆಪಿಎಲ್ 5ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡ ಹುಬ್ಬಳ್ಳಿ ಟೈಗರ್ಸ್ ಎದುರು 35 ರನ್ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಪಡೆದಿತ್ತು. ಇದೀಗ ಆರನೇ ಆವೃತ್ತಿಯ ಕೆಪಿಎಲ್ ಟೂರ್ನಿ ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಸಜ್ಜಾಗುತ್ತಿದೆ. ಇದಕ್ಕಾಗಿ ಫ್ರಾಂಚೈಸಿಗಳ ಜತೆ ಮಾತುಕತೆ ನಡೆಸಿದ್ದು, ಅಂತಿಮ ಹಂತಕ್ಕೆ ತಲುಪಿದೆ.
ಶೀಘ್ರ ಆಟಗಾರರ ಹರಾಜು
ಈ ಹಿಂದಿನ 5 ಆವೃತ್ತಿಗಳಿಗಿಂತ ಪ್ರಸಕ್ತ ಆವೃತ್ತಿಯನ್ನು ವಿಭಿನ್ನವಾಗಿ ಆಯೋಜಿಸಲು ಕೆಎಸ್ಸಿಎ ಮುಂದಾಗಿದ್ದು, ಇದಕ್ಕಾಗಿ 6ನೇ ಆವೃತ್ತಿಯಲ್ಲಿ ಎಲ್ಲಾ ತಂಡಗಳು ಆಟಗಾರರನ್ನು ಹೊಸದಾಗಿ ಖರೀದಿಸಲು ಸೂಚಿಸಲಾಗಿದೆ. ಆಟಗಾರರ ನೂತನ ಹರಾಜು ಪ್ರಕ್ರಿಯೆಯನ್ನು ಶೀಘ್ರ ನಡೆಸಲಾಗುವುದು. ತಂಡಗಳ ಮಾಲೀಕರು ಆಟಗಾರರನ್ನು ಉಳಿಸಿಕೊಳ್ಳುವುದರ ಬಗ್ಗೆ ಆಯೋಜಕರು ಖಚಿತಪಡಿಸಿಲ್ಲ. ಒಂದು ತಂಡ ಕನಿಷ್ಠ 18 ಮಂದಿ ಆಟಗಾರರನ್ನು ಹೊಂದಿರಬೇಕು. ಇದರಲ್ಲಿ ಆಯಾ ಫ್ರಾಂಚೈಸಿ ಇರುವ ಜಿಲ್ಲೆಗಳ ಕನಿಷ್ಠ ಇಬ್ಬರು ಆಟಗಾರರಿಗೆ ಅವಕಾಶ ನೀಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಹೊಸ ತಂಡ
ಬೆಂಗಳೂರು ತಂಡ ಕೆಪಿಎಲ್ಗೆ ಹೊಸದಾಗಿ ಸೇರ್ಪಡೆಗೊಂಡಿದೆ. ಬೆಂಗಳೂರು ತಂಡಕ್ಕೆ ಕಲ್ಯಾಣಿ ಮೋಟಾರ್ಸ್ ಮಾಲೀಕರಾಗಿದ್ದಾರೆ. ಬೆಂಗಳೂರು ತಂಡ ಸೇರ್ಪಡೆಯೊಂದಿಗೆ ಒಟ್ಟು ಏಳು ತಂಡಗಳು ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿವೆ. ಈ ಹಿಂದಿನ ಆವೃತ್ತಿಗಳಲ್ಲಿ ತಂಡದ ಮಾಲೀಕತ್ವ ಹೊಂದಿರುವವರು ಕೆಲ ನೂತನ ಕಂಪೆನಿಗಳಿಗೆ ಷೇರುಗಳನ್ನು ನೀಡಿದ್ದಾರೆ. ಆದಾಗ್ಯೂ, ಬಹುತೇಕ ತಂಡಗಳು ಹಳೆಯ ಮಾಲಿಕರನ್ನೇ ಹೊಂದಿರಲಿವೆ.
ಶಿವಮೊಗ್ಗಕ್ಕೆ ಹೊಸ ಮಾಲಿಕ?
2015ರ ಕೆಪಿಎಲ್ ಟೂರ್ನಿಯಲ್ಲಿ ಹೊಸ ತಂಡವಾಗಿ ಸೇರ್ಪಡೆಯಾದ ನಮ್ಮ ಶಿವಮೊಗ್ಗ ತಂಡವನ್ನು 2017ರಲ್ಲಿ ಹೊಸ ಮಾಲೀಕರು ಖರೀದಿಸಿದ್ದಾರೆ ಎಂಬ ಸುದ್ದಿಯಿದೆ. ಈ ವಿಷಯವಾಗಿ ಕೆಎಸ್ಸಿಎ ಅಧಿಕಾರಿಗಳು ಖಚಿತಪಡಿಸುತ್ತಿಲ್ಲ. ಕಳೆದ 2 ಆವೃತ್ತಿಗಳಲ್ಲಿ ನಮ್ಮ ಶಿವಮೊಗ್ಗ ತಂಡಕ್ಕೆ ಉಮಾಪತಿ ಶೇಖರ್ ಎಂಬುವವರು ಮಾಲೀಕರಾಗಿದ್ದರು. ಜಿ.ಕೆ.ಅನಿಲ್ ಕುಮಾರ್ ಕೋಚ್ ಆಗಿದ್ದರು.
ಯಾರುಂಟು?
ಬಳ್ಳಾರಿ ಟಸ್ಕರ್ಸ್
ಹುಬ್ಬಳ್ಳಿ ಟೈಗರ್ಸ್
ಮೈಸೂರು ವಾರಿಯರ್ಸ್
ಬೆಳಗಾವಿ ಪ್ಯಾಂಥರ್ಸ್
ಬಿಜಾಪುರ ಬುಲ್ಸ್
ನಮ್ಮ ಶಿವಮೊಗ್ಗ
ಬೆಂಗಳೂರು (ಹೊಸ ತಂಡ)
ಯಾರಿಲ್ಲ?
ರಾಕ್ ಸ್ಟಾರ್ಸ್
ಮಂಗಳೂರು ಯುನೈಟೆಡ್
ವರದಿ: ಧನಂಜಯ.ಎಸ್.ಹಕಾರಿ, ಕನ್ನಡಪ್ರಭ
