ಅಂತಾರಾಷ್ಟ್ರೀಯ ಮಾಸ್ಟರ್ ದಿವ್ಯಾ ದೇಶ್‌ಮುಖ್ ಫಿಡೆ ಮಹಿಳಾ ವಿಶ್ವಕಪ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಚೀನಾದ ಝಾಂಗ್‌ಯೀ ಟಾನ್‌ ವಿರುದ್ಧ ಗೆಲುವು ಸಾಧಿಸಿದ ದಿವ್ಯಾ, ಈ ಹಿರಿಮೆಗೆ ಪಾತ್ರರಾದ ಭಾರತದ ಮೊದಲ ಆಟಗಾರ್ತಿ. 

ಬಟುಮಿ (ಜಾರ್ಜಿಯಾ): ಅಂತಾರಾಷ್ಟ್ರೀಯ ಮಾಸ್ಟರ್‌ ದಿವ್ಯಾ ದೇಶ್‌ಮುಖ್‌ ಇಲ್ಲಿ ನಡೆಯುತ್ತಿರುವ ಫಿಡೆ ಮಹಿಳಾ ವಿಶ್ವಕಪ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಬುಧವಾರ ನಡೆದ ಸೆಮಿಫೈನಲ್‌ನ 2ನೇ ಸುತ್ತಿನಲ್ಲಿ ಮಾಜಿ ವಿಶ್ವ ಚಾಂಪಿಯನ್‌, ಚೀನಾದ ಝಾಂಗ್‌ಯೀ ಟಾನ್‌ ವಿರುದ್ಧ 1.5-0.5 ಅಂಕಗಳಲ್ಲಿ ಗೆಲುವು ಸಾಧಿಸಿದರು. ಇವರಿಬ್ಬರ ನಡುವಿನ ಮೊದಲ ಸುತ್ತು ಡ್ರಾಗೊಂಡಿತ್ತು.

ದಿವ್ಯಾ ಮಹಿಳಾ ಚೆಸ್‌ ವಿಶ್ವಕಪ್‌ನ ಫೈನಲ್‌ಗೇರಿದ ಭಾರತದ ಮೊದಲ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಅಲ್ಲದೇ, 2026ರ ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಕ್ಯಾಂಡಿಡೇಟ್ಸ್‌ನಲ್ಲಿ ಗೆಲ್ಲುವ ಆಟಗಾರ್ತಿ ಮುಂದಿನ ವರ್ಷ ವಿಶ್ವ ಚಾಂಪಿಯನ್‌ಶಿಪ್‌ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಚೀನಾದ ವೆನ್ಜುನ್‌ ಜು ವಿರುದ್ಧ ಸೆಣಸಲಿದ್ದಾರೆ.

Scroll to load tweet…

ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ತೋರುತ್ತಿರುವ ಈ ಮೊದಲು 2ನೇ ಶ್ರೇಯಾಂಕಿತೆ ಚೀನಾದ ಝೋನರ್‌ ಜು ವಿರುದ್ಧ ಗೆದ್ದಿದ್ದರು. ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಹರಿಕಾ ದ್ರೋಣವಳ್ಳಿ ಅವರನ್ನು ಮಣಿಸಿದರು. ಸೆಮಿಫೈನಲ್‌ ಭಾರೀ ಪೈಪೋಟಿಯಿಂದ ಕೂಡಿತ್ತು. ಮೊದಲ ಸುತ್ತಿನಲ್ಲಿ ಸಮಬಲ ಸಾಧಿಸಿದ್ದ ಉಭಯ ಆಟಗಾರ್ತಿಯರು, ಈ ಸುತ್ತಿನಲ್ಲೇ ಫಲಿತಾಂಶ ಕಾಣಲು ಸೆಣಸಿದರು. ಪಂದ್ಯವು ಬರೋಬ್ಬರಿ 101 ನಡೆಗಳಿಗೆ ಸಾಕ್ಷಿಯಾಯಿತು.

ಕೊನೆರು-ಲೀ ಸೆಮೀಸ್‌ ಸೆಣಸಾಟ ಟೈ ಬ್ರೇಕರ್‌ಗೆ

ಭಾರತದ ಗ್ರ್ಯಾಂಡ್‌ ಮಾಸ್ಟರ್‌ ಕೊನೆರು ಹಂಪಿ ಹಾಗೂ ಅಗ್ರ ಶ್ರೇಯಾಂಕಿತೆ ಚೀನಾದ ಟಿಂಗ್‌ಜೀ ಲೀ ನಡುವೆ ನಡೆಯುತ್ತಿರುವ 2ನೇ ಸೆಮಿಫೈನಲ್‌ ಟೈ ಬ್ರೇಕರ್‌ಗೆ ಸಾಗಿದೆ. ಇಬ್ಬರ ನಡುವಿನ 2ನೇ ಸುತ್ತು ಸಹ ಡ್ರಾನಲ್ಲಿ ಕೊನೆಗೊಂಡಿತು. ಈ ಇಬ್ಬರು ಟೈ ಬ್ರೇಕರ್‌ನಲ್ಲಿ ರ್‍ಯಾಪಿಡ್‌ ಚೆಸ್‌ ಮಾದರಿಯಲ್ಲಿ ಆಡಲಿದ್ದಾರೆ. ಗೆಲ್ಲುವ ಆಟಗಾರ್ತಿ ಫೈನಲ್‌ಗೇರಲಿದ್ದು, ಸೋಲುವವರು 3ನೇ ಸುತ್ತಿಗಾಗಿ ಸೆಣಸಲಿದ್ದಾರೆ. ಫೈನಲ್‌ ಜು.27ರಿಂದ ಆರಂಭಗೊಳ್ಳಲಿದೆ.

ಚೀನಾ ಓಪನ್‌: 2ನೇ ಸುತ್ತಿಗೆ ಪಿ.ವಿ.ಸಿಂಧು

ಚಾಂಗ್‌ಝೂ: 2 ಬಾರಿ ಒಲಿಂಪಿಕ್‌ ಪದಕ ವಿಜೇತೆ ಭಾರತದ ಪಿ.ವಿ.ಸಿಂಧು ಇಲ್ಲಿ ನಡೆಯುತ್ತಿರುವ ಚೀನಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ 2ನೇ ಸುತ್ತಿಗೇರಿದ್ದಾರೆ. ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ವಿಶ್ವ ನಂ.6, ಜಪಾನ್‌ನ ತೊಮೊಕ ಮಿಯಾಜಾಕಿ ವಿರುದ್ಧ 21-15, 8-21, 21-17 ಗೇಮ್‌ಗಳಲ್ಲಿ ಗೆದ್ದರು. 2ನೇ ಸುತ್ತಿನಲ್ಲಿ ಸಿಂಧುಗೆ ಭಾರತದವರೇ ಆದ 17 ವರ್ಷದ ಉನ್ನತಿ ಹೂಡಾ ಎದುರಾಗಲಿದ್ದಾರೆ. ಮೊದಲ ಸುತ್ತಿನಲ್ಲಿ ಉನ್ನತಿ, ಸ್ಕಾಟ್ಲೆಂಡ್‌ನ ಕರ್ಸ್ಟಿ ಗಿಲ್ಮೋರ್‌ ವಿರುದ್ಧ 21-11, 21-16ರಲ್ಲಿ ಗೆದ್ದರು. ಇನ್ನು ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್ ಶೆಟ್ಟಿ, ಜಪಾನ್‌ನ ಕೆನ್ಯಾ ಮಿಟ್ಸುಹಾಶಿ ಹಾಗೂ ಹಿರೊಕಿ ಒಕಮುರಾ ವಿರುದ್ಧ 21-13, 21-9ರಲ್ಲಿ ಗೆದ್ದು ಮುನ್ನಡೆದರು.

ಕಿರಿಯರ ಬ್ಯಾಡ್ಮಿಂಟನ್‌: ತಾನ್ವಿ, ವೆನ್ನಾಲಾಗೆ ಜಯ

ಸೊಲೊ(ಇಂಡೋನೇಷ್ಯಾ): ಇಲ್ಲಿ ನಡೆಯುತ್ತಿರುವ ಏಷ್ಯಾ ಕಿರಿಯರ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಮೂವರು 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಇತ್ತೀಚೆಗೆ ಯುಎಸ್‌ ಓಪನ್‌ನಲ್ಲಿ ರನ್ನರ್‌-ಅಪ್ ಆಗಿದ್ದ ಯುವ ತಾರೆ ತಾನ್ವಿ ಶರ್ಮಾ 2ನೇ ಸುತ್ತಿನಲ್ಲಿ ಅಮೆರಿದಕ ವೈದೇಹಿ ಕಾಳಿದಾಸನ್‌ ವಿರುದ್ಧ 21-6, 21-6 ಗೇಮ್‌ಗಳಲ್ಲಿ ಗೆದ್ದರು. ವೆನ್ನಲಾ ಕಾಲಗೋಟ್ಲಾ, ತಾನ್ವಿ ರೆಡ್ಡಿ ಕೂಡ 3ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

45ನೇ ವಯಸ್ಸಿನಲ್ಲಿ ಟೆನಿಸ್‌ ಸಿಂಗಲ್ಸ್‌ ಪಂದ್ಯ ಗೆದ್ದ ವೀನಸ್‌

ವಾಷಿಂಗ್ಟನ್‌: ಅಮೆರಿಕದ ದಿಗ್ಗಜ ಟೆನಿಸ್‌ ಆಟಗಾರ್ತಿ ವೀನಸ್‌ ವಿಲಿಯಮ್ಸ್‌ ಮಹಿಳೆಯರ ಟೆನಿಸ್‌ನಲ್ಲಿ ದಾಖಲೆ ಬರೆದಿದ್ದು, ತಮ್ಮ 45ನೇ ವಯಸ್ಸಿನಲ್ಲಿ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ಪಂದ್ಯ ಗೆಲ್ಲುವ ಮೂಲಕ, ಈ ಸಾಧನೆ ಮಾಡಿದ 2ನೇ ಅತಿ ಹಿರಿಯ ಆಟಗಾರ್ತಿ ಎನಿಸಿದ್ದಾರೆ. ಡಿಸಿ ಓಪನ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ವೀನಸ್‌ ತಮ್ಮಗಿಂತ 22 ವರ್ಷ ಕಿರಿಯವರಾದ ಪೇಟನ್‌ ಸ್ಟಿಯನ್ಸ್‌ರನ್ನು 6-3, 6-4 ಸೆಟ್‌ಗಳಲ್ಲಿ ಸೋಲಿಸಿ ಮುನ್ನಡೆದರು. ಈ ಹಿಂದೆ ಅಮೆರಿಕದ ದಿಗ್ಗಜೆ ಮಾರ್ಟಿನಾ ನವ್ಯಾರ್ಟಿಲೋವಾ 2004ರಲ್ಲಿ ತಮ್ಮ 47ನೇ ವಯಸ್ಸಿನಲ್ಲಿ ಪಂದ್ಯ ಗೆದ್ದಿದ್ದರು.