ಪ್ರಚಂಡ ವಲಯದಲ್ಲಿರುವ 2 ಬಾರಿ ಚಾಂಪಿಯನ್ ಕೋಲ್ಕತಾ ನೈಟ್‌ರೈಡರ್ಸ್‌, ೨೦೧೬ರ ಚಾಂಪಿಯನ್ ಸನ್‌ರೈಸರ್ಸ್‌ ಹೈದರಾಬಾದ್ ಕಳಪೆ ಲಯದ ಲಾಭ ಪಡೆದು ಐಪಿಎಲ್ 11ನೇ ಆವೃತ್ತಿಯ ಫೈನಲ್‌ಗೇರಲು ಹಾತೊರೆಯುತ್ತಿದೆ. ಶುಕ್ರವಾರ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ಲೇ-ಆಫ್ ಹಂತದ ೨ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಉಭಯ ತಂಡಗಳು ಫೈನಲ್‌ನಲ್ಲಿ ಸ್ಥಾನಕ್ಕಾಗಿ ಸೆಣಸಾಡಲಿವೆ.

ಕೋಲ್ಕತ್ತಾ[ಮೇ.25): ಪ್ರಚಂಡ ವಲಯದಲ್ಲಿರುವ 2 ಬಾರಿ ಚಾಂಪಿಯನ್ ಕೋಲ್ಕತಾ ನೈಟ್‌ರೈಡರ್ಸ್‌, 2016ರ ಚಾಂಪಿಯನ್ ಸನ್‌ರೈಸರ್ಸ್‌ ಹೈದರಾಬಾದ್ ಕಳಪೆ ಲಯದ ಲಾಭ ಪಡೆದು ಐಪಿಎಲ್ 11ನೇ ಆವೃತ್ತಿಯ ಫೈನಲ್‌ಗೇರಲು ಹಾತೊರೆಯುತ್ತಿದೆ. ಶುಕ್ರವಾರ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ಲೇ-ಆಫ್ ಹಂತದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಉಭಯ ತಂಡಗಳು ಫೈನಲ್‌ನಲ್ಲಿ ಸ್ಥಾನಕ್ಕಾಗಿ ಸೆಣಸಾಡಲಿವೆ.

ನಿರ್ಣಾಯಕ ಘಟ್ಟ ಪ್ರವೇಶಿಸುತ್ತಿದ್ದಂತೆ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠಗೊಂಡಿರುವ ಕೆಕೆಆರ್ ಸತತ 4 ಪಂದ್ಯಗಳನ್ನು ಗೆದ್ದು ಲಯ ಕಾಯ್ದುಕೊಂಡಿದೆ. ಲೀಗ್‌ನ ಆರಂಭದಲ್ಲಿ ಅಬ್ಬರಿಸಿ ಬಳಿಕ ಕುಸಿದ ಸನ್‌ರೈಸರ್ಸ್‌, ಮೊದಲ ಕ್ವಾಲಿಫೈಯರ್ ಸೇರಿ ಸತತ 4 ಪಂದ್ಯಗಳನ್ನು ಸೋತಿದ್ದು ಟೂರ್ನಿಯಿಂದ ಹೊರಬೀಳುವ ಭೀತಿ ಎದುರಿಸುತ್ತಿದೆ.

ಟೂರ್ನಿಯಲ್ಲಿ ಶ್ರೇಷ್ಠ ಬೌಲಿಂಗ್ ಪಡೆ ಹೊಂದಿರುವ ಸನ್‌ರೈಸರ್ಸ್‌, ಕಳೆದ ಪಂದ್ಯದಲ್ಲಿ ಕೊನೆ 18 ಎಸೆತಗಳಲ್ಲಿ 43 ರನ್ ರಕ್ಷಿಸಿಕೊಳ್ಳಲು ವಿಫಲವಾಗಿತ್ತು. 17ನೇ ಓವರ್ ವರೆಗೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ತಂಡ, ಕೊನೆಯಲ್ಲಿ ಜಯದ ಸುವರ್ಣಾವಕಾಶವನ್ನು ಕೈಚೆಲ್ಲಿದ್ದು, ತಂಡ ಒತ್ತಡ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತು ಪಡಿಸಿದೆ. 

ಕೇನ್ ಮೇಲೆ ಅವಲಂಬನೆ: ಸನ್‌ರೈಸರ್ಸ್‌ ಬ್ಯಾಟಿಂಗ್ ಸಮಸ್ಯೆ ಬಗೆಹರಿದಿಲ್ಲ. ತಂಡ ತನ್ನ ನಾಯಕ ಕೇನ್ ವಿಲಿಯಮ್ಸನ್ ಮೇಲೆ ಅತಿಯಾಗಿ ಅವಲಂಬಿತಗೊಂಡಿದೆ. ಧವನ್, ಪಾಂಡೆ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಮುಂದುವರಿಸಿದ್ದಾರೆ. ಕೆಕೆಆರ್‌ನ ತ್ರಿವಳಿ ಸ್ಪಿನ್ನರ್‌ಗಳನ್ನುಈಡನ್ ಗಾರ್ಡನ್ಸ್ ಪಿಚ್‌ನಲ್ಲಿ ಎದುರಿಸುವುದು ಸನ್‌ರೈಸರ್ಸ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಜತೆಗೆ ಪ್ರಸಿದ್ಧ್ ಕೃಷ್ಣ ಹಾಗೂ ಆ್ಯಂಡ್ರೆ ರಸೆಲ್ ರನ್ ನಿಯಂತ್ರಣದ ಜತೆ ವಿಕೆಟ್ ಕೀಳುವುದರಲ್ಲೂ ಮುಂದಿದ್ದಾರೆ.

ಕೆಕೆಆರ್ ಬ್ಯಾಟ್ಸ್‌ಮನ್‌ಗಳಿಗೂ ಸವಾಲು: ರಾಜಸ್ಥಾನ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಕೆಕೆಆರ್‌ನ ಅಗ್ರ ಕ್ರಮಾಂಕ ಸ್ಪಿನ್ ಬೌಲಿಂಗ್‌ಗೆ ತಿಣುಕಾಡಿತ್ತು. ಲೆಗ್ ಸ್ಪಿನ್ನರ್ ಗಳಾದ ಶ್ರೇಯಸ್ ಗೋಪಾಲ್ ಹಾಗೂ ಇಶ್ ಸೋಧಿ ಕೆಕೆಆರ್ ರನ್ ಗಳಿಕೆಗೆ ಅಡ್ಡಿಯಾಗಿದ್ದರು. ಸನ್‌ರೈಸರ್ಸ್‌ ಪಾಳಯದಲ್ಲಿ ಆಫ್ಘನ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಇದ್ದು, ಕೆಕೆಆರ್ ಗೆ ಕಂಟಕರಾಗುವ ಎಲ್ಲಾ ಲಕ್ಷಣಗಳು ತೋರುತ್ತಿವೆ. ಕೋಲ್ಕತಾ ಪಿಚ್‌ನಲ್ಲಿ ಶಕೀಬ್ ಪರಿಣಾಮಕಾರಿಯಾಗಬಲ್ಲರು. 

ಜತೆಗೆ ಭುವನೇಶ್ವರ್, ಸಿದ್ಧಾರ್ಥ್ ಕೌಲ್ ಹಾಗೂ ಸಂದೀಪ್ ಶರ್ಮಾರನ್ನು ಸಮರ್ಥವಾಗಿ ಎದುರಿಸುವುದು ಕೆಕೆಆರ್‌ನ ಅಸ್ಥಿರ ಬ್ಯಾಟಿಂಗ್ ಪಡೆಗೆ ಸವಾಲಾಗಿ ಪರಿಣಮಿಸಲಿದೆ.
ಈ ಆವೃತ್ತಿಯಲ್ಲಿ ಉಭಯ ತಂಡಗಳು ೨ ಬಾರಿ ಮುಖಾಮುಖಿಯಾಗಿದ್ದು, ತಲಾ ಒಂದರಲ್ಲಿ ಗೆಲುವು ಸಾಧಿಸಿವೆ. ಈ ಪಂದ್ಯ ವನ್ನು ಗೆಲ್ಲುವ ತಂಡ ಮೇ 27(ಭಾನುವಾರ)
ರಂದು ಮುಂಬೈನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟ್ರೋಫಿಗಾಗಿ ಸೆಣಸಲಿದೆ.