ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿ ಪಂದ್ಯದಲ್ಲೂ ದೇಶಕ್ಕಾಗಿ ಹೋರಾಟ ಮಾಡುತ್ತಾರೆ. ಆದರೆ 2012ರಲ್ಲಿ ವಿರಾಟ್ ಕೊಹ್ಲಿ ಎಡವಟ್ಟು ಮಾಡಿದ್ದರು. ಮರುದಿನ ಎಚ್ಚೆತ್ತ ವಿರಾಟ್ ಕೊಹ್ಲಿ, ತನ್ನನ್ನ ಬ್ಯಾನ್ ಮಾಡಬೇಡಿ ಎಂದು ಗೋಗೆರೆದಿದ್ದರು.
ಲಂಡನ್(ಸೆ.06) : ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ಜೀವನದ ಅತ್ಯಂತ ಕೆಟ್ಟ ದಿನವನ್ನು ನೆನಪಿಸಿಕೊಂಡಿದ್ದಾರೆ. 2012ರ ಆಸ್ಟ್ರೇಲಿಯಾ ಪ್ರವಾಸದ ಸಿಡ್ನಿ ಟೆಸ್ಟ್ ವೇಳೆ ಪ್ರೇಕ್ಷಕರತ್ತ ಮಧ್ಯದ ಬೆರಳು ತೋರಿ ವಿವಾದಕ್ಕೆ ಗುರಿಯಾಗಿದ್ದರು.
ವಿಸ್ಡನ್ ಕ್ರಿಕೆಟ್ ಮಂತ್ಲಿ ಜತೆಗಿನ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಆ ದಿನಗಳನ್ನು ನೆನೆಸಿಕೊಂಡಿದ್ದಾರೆ. ಸಿಡ್ನಿ ಟೆಸ್ಟ್ ವೇಳೆ ಆಸ್ಟ್ರೇಲಿಯಾದ ಪ್ರೇಕ್ಷಕರಿಗೆ ಮಧ್ಯದ ಬೆರಳು ತೋರಿದ ದಿನವನ್ನು ನಾನೀಗಲೂ ಮೈದಾನಕ್ಕಿಳಿಯುವಾಗ ನೆನಪಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಆ ಪ್ರಕರಣ ನಡೆದ ಮರು ದಿನ, ಮ್ಯಾಚ್ ರೆಫ್ರಿ ರಂಜನ್ ಮದುಗಲೆ ನನ್ನನ್ನು ಅವರ ಕೋಣೆಗೆ ಕರೆದಿದ್ದರು. ಆಗ ‘ನಾನೇನು ತಪ್ಪು ಮಾಡಿದ್ದೇನೆ’ ಎಂದು ಯೋಚನೆ ಮಾಡಿದ್ದೆ. ನಿನ್ನೆ ಬೌಂಡರಿ ಲೈನ್ನ ಬಳಿ ಏನಾಯಿತು? ಎಂದು ಅವರು ಪ್ರಶ್ನಿಸಿದರು. ಏನಿಲ್ಲ.. ಸಣ್ಣ ಮಾತುಕತೆ ನಡೆಯಿತಷ್ಟೇ ಎಂದು ಕೊಹ್ಲಿ ಉತ್ತರಿಸಿದರು.
ಮುರುಕ್ಷಣ ನನ್ನ ಎದುರು ಅವರು ಪತ್ರಿಕೆಯನ್ನು ಎಸೆದರು. ಅದರಲ್ಲಿ, ನಾನು ಮಧ್ಯದ ಬೆರಳು ತೋರಿದ್ದ ಚಿತ್ರ ಮುಖಪುಟದಲ್ಲಿ ಪ್ರಕಟವಾಗಿತ್ತು. ನನ್ನಿಂದ ತಪ್ಪಾಗಿದೆ ಕ್ಷಮಿಸಿ. ಪ್ಲೀಸ್ ನನ್ನನ್ನು ಬ್ಯಾನ್ ಮಾಡಬೇಡಿ ಎಂದು ಅವರಲ್ಲಿ ಕೇಳಿಕೊಂಡಿದ್ದೆ.
ಆ ಪ್ರಕರಣದ ಬಳಿಕ ನಾನು ಬದಲಾದೆ. ಅವರು (ಮ್ಯಾಚ್ ರೆಫ್ರಿ) ಉತ್ತಮ ವ್ಯಕ್ತಿ. ನಾನಿನ್ನೂ ಯುವ ಆಟಗಾರ. ಇಂಥ ಘಟನೆಗಳೆಲ್ಲವೂ ನಡೆಯುತ್ತಲೇ ಇರುತ್ತವೆ ಎಂದು ಅವರು ಅಂದುಕೊಂಡಿದ್ದರು’ ಎಂದು ಕೊಹ್ಲಿ ವಿವರಿಸಿದ್ದಾರೆ.
ಈ ಪ್ರಕರಣದ ಬಳಿಕ ವಿರಾಟ್, ತಾನು ಮಾಡಿರುವುದು ತಪ್ಪು. ಆದರೆ ತಾಯಿ-ತಂಗಿ ಕುರಿತು ಕೆಟ್ಟಾದಾಗಿ ಮಾತನಾಡಿದರೆ ಹೇಗೆ ತಾನೆ ಸಹಿಸಿಕೊಳ್ಳಲು ಸಾಧ್ಯ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದರು.
