ನಿರ್ಧರಿಸಲು ಸ್ವಲ್ಪ ಸಮಯಾವಕಾಶ ಬೇಕು. ಸರಿಯಾಗಿ ಯೋಚಿಸಿ ತಮ್ಮ ನಿರ್ಧಾರ ತಿಳಿಸುವುದಾಗಿ ಅವರು ಆಯ್ಕೆ ಸಮಿತಿಗೆ ಹೇಳಿದ್ದಾರೆ’
ವಿಶ್ರಾಂತಿ ಬಯಸಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಆಯ್ಕೆ ಮಾಡಲಾಗಿಲ್ಲ. ಆದರೆ ಅವರು ಟಿ20 ಸರಣಿಗೆ ಲಭ್ಯರಿದ್ದಾರೋ ಇಲ್ಲವೋ ಎನ್ನುವುದರ ಬಗ್ಗೆ ಇನ್ನೂ ಖಚಿತತೆ ಇಲ್ಲ. ಡಿ.20ರಿಂದ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದ್ದು, ಸರಣಿಯಲ್ಲಿ ಆಡಬೇಕೋ ಬೇಡವೋ ಎನ್ನುವುದನ್ನು ವಿರಾಟ್, ತಂಡದ ಆಡಳಿತ ಹಾಗೂ ಆಯ್ಕೆ ಸಮಿತಿ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
‘ನಿರ್ಧರಿಸಲು ಸ್ವಲ್ಪ ಸಮಯಾವಕಾಶ ಬೇಕು. ಸರಿಯಾಗಿ ಯೋಚಿಸಿ ತಮ್ಮ ನಿರ್ಧಾರ ತಿಳಿಸುವುದಾಗಿ ಅವರು ಆಯ್ಕೆ ಸಮಿತಿಗೆ ಹೇಳಿದ್ದಾರೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದೇ ಕಾರಣದಿಂದ ಸೋಮವಾರ ಲಂಕಾ ವಿರುದ್ಧ ಟಿ20 ಸರಣಿಗೆ ತಂಡದ ಆಯ್ಕೆ ನಡೆಯಲಿಲ್ಲ. ‘ಕೊಹ್ಲಿ ಡಿ.12ರ ವರೆಗೂ ವೈಯಕ್ತಿಕ ಕೆಲಸಗಳಲ್ಲಿ ನಿರತರಾಗಿರಲಿದ್ದು, ಆನಂತರ ವಿಶ್ರಾಂತಿ ಮುಂದುವರಿಸಬೇಕೋ ಇಲ್ಲವೇ ಟಿ20 ಸರಣಿಯಲ್ಲಿ ಆಡಬೇಕೋ ಎನ್ನುವುದನ್ನು ಸ್ವತಃ ಅವರೇ ನಿರ್ಧರಿಸಲಿದ್ದಾರೆ’ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ವಾರಾಂತ್ಯದಲ್ಲಿ ಆಫ್ರಿಕಾ ಟೆಸ್ಟ್
ತಂಡ ಆಯ್ಕೆ: ರಾಷ್ಟ್ರೀಯ ಆಯ್ಕೆ ಸಮಿತಿ, ಕೊಹ್ಲಿ ಹಾಗೂ ಕೋಚ್ ಶಾಸ್ತ್ರಿ ಅವರನ್ನೊಳಗೊಂಡ ತಂಡದ ಆಡಳಿತ ಈ ವಾರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ತಂಡವನ್ನು ಆಯ್ಕೆ ಮಾಡಲಿದೆ. ಅಭ್ಯಾಸಕ್ಕೆ ಸಮಯದ ಕೊರತೆ ಎದುರಾಗಿರುವ ಬಗ್ಗೆ ವಿರಾಟ್ ಧ್ವನಿ ಎತ್ತಿದ ಬಳಿಕ, ಲಂಕಾ ವಿರುದ್ಧ ಟಿ20 ಸರಣಿಗೆ ಕೇವಲ ಟಿ20 ತಜ್ಞರನ್ನು ಮಾತ್ರ ಆಯ್ಕೆ ಮಾಡಿ, ಟೆಸ್ಟ್ ಆಡುವ ಆಟಗಾರರನ್ನು ಮುಂಚಿತವಾಗಿಯೇ ಆಫ್ರಿಕಾಕ್ಕೆ ಕಳುಹಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. 10 ದಿನಗಳು ಮುಂಚಿತವಾಗಿಯೇ ತೆರಳಿದರೆ, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಆಟಗಾರರಿಗೆ ಅನುಕೂಲವಾಗಲಿದೆ ಎನ್ನುವುದು ಬಿಸಿಸಿಐ ಲೆಕ್ಕಾಚಾರವಾಗಿದೆ. ಡಿಸೆಂಬರ್ 20, 22 ಹಾಗೂ 24ರಂದು ಲಂಕಾ ವಿರುದ್ಧ ಟಿ20 ಪಂದ್ಯಗಳು ನಡೆಯಲಿವೆ.
ಡಿಸೆಂಬರ್ 3ನೇ ವಾರದಲ್ಲೇ ಭಾರತದ ಟೆಸ್ಟ್ ತಜ್ಞರು ಆಫ್ರಿಕಾಕ್ಕೆ ವಿಮಾನ ಹತ್ತುವ ಸಾಧ್ಯತೆ ಇದೆ. 2010ರಲ್ಲಿ ಭಾರತ 10 ದಿನಗಳು ಮುಂಚಿತವಾಗಿಯೇ ಆಫ್ರಿಕಾಕ್ಕೆ ತೆರಳಿ, ಗ್ಯಾರಿ ಕರ್ಸ್ಟನ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಿತ್ತು. ಆ ವೇಳೆ ಟೆಸ್ಟ್ ಸರಣಿಯನ್ನು ಭಾರತ 1-1ರಲ್ಲಿ ಸಮಗೊಳಿಸಿಕೊಂಡಿತ್ತು. ಕಳೆದ ಬಾರಿ ಆಸ್ಟ್ರೇಲಿಯಾ ಟೆಸ್ಟ್ ಆಡಲು ಭಾರತಕ್ಕೆ ಮುಂಚಿತವಾಗಿಯೇ ಆಗಮಿಸಿದ್ದಾಗ, ಹೊಸ ಆಟಗಾರರನ್ನು ಒಳಗೊಂಡ ತಂಡ ತವರಿನಲ್ಲಿ ಶ್ರೀಲಂಕಾ ವಿರುದ್ಧ ಟಿ20 ಸರಣಿಯನ್ನು ಆಡುತ್ತಿತ್ತು. ಅದೇ ಮಾದರಿಯನ್ನು ಭಾರತ ತಂಡ ಸಹ ಅನುಸರಿಸುವ ಸಾಧ್ಯತೆ ಇದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
