ನಾಲ್ಕನೇ ಟೆಸ್ಟ್ ಪಂದ್ಯದ ತಮ್ಮ ಅನುಭವವನ್ನು ಇಂದು ಕೆಎಲ್ ರಾಹುಲ್ ವೇದ್ಯಪಡಿಸಿದ್ದಾರೆ.

ಧರ್ಮಶಾಲಾ(ಮಾ. 26): ಕೆಎಲ್ ರಾಹುಲ್ ಟೀಮ್ ಇಂಡಿಯಾದ ನೂತನ ಸ್ಟಾರ್ ಆಗಿ ರೂಪುಗೊಳ್ಳುತ್ತಿರುವುದು ಸುಳ್ಳಲ್ಲ. ಬಹಳ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡುತ್ತಿರುವ ಕನ್ನಡಿಗ ರಾಹುಲ್ ಆಸ್ಟ್ರೇಲಿಯಾ ವಿರುದ್ಧ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ನಿನ್ನೆ ಆರಂಭಗೊಂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಭರ್ಜರಿ ಅರ್ಧಶತಕ ಗಳಿಸಿದ್ದಾರೆ. ಕಾಂಗರೂಗಳ ಪಡೆ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಆರು ಇನ್ನಿಂಗ್ಸಲ್ಲಿ ರಾಹುಲ್'ಗೆ ಇದು ಐದನೇ ಅರ್ಧಶತಕವಾಗಿದೆ. ನಾಲ್ಕನೇ ಟೆಸ್ಟ್ ಪಂದ್ಯದ ತಮ್ಮ ಅನುಭವವನ್ನು ಇಂದು ಕೆಎಲ್ ರಾಹುಲ್ ವೇದ್ಯಪಡಿಸಿದ್ದಾರೆ.

ಕಠಿಣ ಸೆಷೆನ್:
ಈ ಪಂದ್ಯದ ಇಂದಿನ ಎರಡನೇ ದಿನದ ಮೊದಲ ಸೆಷೆನ್ ಬಹಳ ಕಠಿಣವಾಗಿತ್ತು ಎಂದು ಕೆಎಲ್ ರಾಹುಲ್ ಹೇಳುತ್ತಾರೆ. ಆಸ್ಟ್ರೇಲಿಯಾದ ವೇಗದ ಬೌಲರ್'ಗಳಾದ ಹೇಜಲ್ವುಡ್ ಹಾಗು ಕುಮಿನ್ಸ್ ಇಬ್ಬರೂ ಮೊದಲ ಸೆಷೆನ್'ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಪಿಚ್ ಕೂಡ ಅವರ ಬೌಲಿಂಗ್'ಗೆ ಪೂರಕವಾಗಿತ್ತು. ಚೆಂಡು ಸಾಕಷ್ಟು ವೇಗ ಹಾಗೂ ಸ್ವಿಂಗ್ ಆಗುತ್ತಿತ್ತು. ತಾವು ರನ್ ಗಳಿಸಲು ಬಹಳ ಪ್ರಯಾಸಪಡಬೇಕಾಯಿತು. ಇದು ತಮ್ಮ ವೃತ್ತಿಜೀವನದ ಅತ್ಯಂತ ಕಠಿಣ ಸೆಷೆನ್ ಎಂದು ಕೆಎಲ್ ರಾಹುಲ್ ಹೇಳುತ್ತಾರೆ.

ಈ ಅವಧಿಯಲ್ಲಿ ರಾಹುಲ್ 10 ರನ್ನಿದ್ದಾಗ ಜೀವದಾನ ಪಡೆದರು. ಅದು ಬಿಟ್ಟರೆ ರಾಹುಲ್ ತಮ್ಮ ಕೆಚ್ಚೆದೆಯ ಹಾಗೂ ಚಾತುರ್ಯದ ಬ್ಯಾಟಿಂಗ್ ಮೂಲಕ ಆಸ್ಟ್ರೇಲಿಯಾದ ಬೌಲಿಂಗ್'ನ್ನು ಸಮರ್ಥವಾಗಿ ಎದುರಿಸಿದರು.

ಈ ಸರಣಿಯಲ್ಲಿ ಕೆಎಲ್ ರಾಹುಲ್ ಒಂದೂ ಶತಕ ಭಾರಿಸದಿದ್ದರೂ ನಿರಾಶೆಯಂತೂ ಮಾಡಿಲ್ಲ. ಸರಣಿಯಲ್ಲಿ ಅವರು 57 ರನ್ ಸರಾಸರಿ ಹೊಂದಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಕೊಹ್ಲಿ ಬಗ್ಗೆ:
ಕೆಎಲ್ ರಾಹುಲ್ ತಮ್ಮ ಟೆಸ್ಟ್ ಕ್ರಿಕೆಟ್'ನಲ್ಲಿ ಇದೇ ಮೊದಲ ಬಾರಿಗೆ ಕೊಹ್ಲಿ ಅನುಪಸ್ಥಿತಿಯಲ್ಲಿ ಆಡುತ್ತಿದ್ದಾರೆ. ಕೊಹ್ಲಿ ಇಲ್ಲದ ಪಂದ್ಯ ಹೇಗಿದೆ ಎಂದು ಕೆಎಲ್'ಆರ್ ಅವರನ್ನು ಕೇಳಿದರೆ, ತಮ್ಮ ತಂಡವು ಕೊಹ್ಲಿಯವರನ್ನು ಮಿಸ್ ಮಾಡಿಕೊಳ್ಳುತ್ತದೆ ಎಂದು ಉತ್ತರಿಸುತ್ತಾರೆ. ಕೊಹ್ಲಿ ನಾಯಕನಾಗಿ ತಂಡದ ಇತರ ಸದಸ್ಯರಿಗೆ ಮಾದರಿಯಾಗಿ ನಿಲ್ಲುತ್ತಾರೆ. ಅವರ ಆಕ್ರಮಣಕಾರಿ ಮನೋಭಾವ ಹಾಗೂ ಉತ್ಸಾಹವು ತಂಡದ ಸದಸ್ಯರಿಗೆ ಪ್ರೇರಣೆಯಾಗಿ ನಿಲ್ಲುತ್ತದೆ. ಅವರಿಲ್ಲದಾಗ ಇತರರು ಅಂಥ ಜವಾಬ್ದಾರಿ ಹೊತ್ತು ಪ್ರದರ್ಶನ ನೀಡಬೇಕಾಗುತ್ತದೆ ಎಂದು ಕೆಎಲ್ ರಾಹುಲ್ ಅಭಿಪ್ರಾಯಪಡುತ್ತಾರೆ.