ಬೆಂಗಳೂರು(ಏ.30): ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಹಳಿಗೆ ಮರಳಲು ಮತ್ತೊಮ್ಮೆ ವಿಫಲವಾಗಿದೆ. ಇಂದಾದರೂ ಆರ್’ಸಿಬಿ ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿದ್ದ ಬೆಂಗಳೂರಿನ ಅಭಿಮಾನಿಗಳಿಗೆ ವಿರಾಟ್ ಪಡೆ ಮತ್ತೆ ನಿರಾಸೆ ಮಾಡಿದೆ

ಕ್ರಿಸ್ ಲಿನ್ ಸಮಯೋಚಿತ ಅರ್ಧಶತಕದ ನೆರವಿನಿಂದ ಕೋಲ್ಕತಾ ನೈಟ್’ರೈಡರ್ಸ್ 6 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದರೆ, ರಾಯಲ್ ಚಾಲೆಂಜರ್ಸ್ ಟೂರ್ನಿಯಲ್ಲಿ 5ನೇ ಸೋಲು ಕಂಡಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ್ದ 176 ರನ್’ಗಳ ಗುರಿ ಬೆನ್ನತ್ತಿದ ಕೆಕೆಆರ್ ಉತ್ತಮ ಆರಂಭವನ್ನೇ ಪಡೆಯಿತು. ಕ್ರಿಸ್ ಲಿನ್ ಹಾಗೂ ಸುನಿಲ್ ನರೈನ್ ಮೊದಲ ವಿಕೆಟ್’ಗೆ 59 ರನ್’ಗಳ ಜತೆಯಾಟವಾಡಿದರು. ನರೈನ್ 27 ರನ್ ಸಿಡಿಸಿ ಮುರುಗನ್ ಅಶ್ವಿನ್’ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಉತ್ತಪ್ಪ ಜತೆ ಇನಿಂಗ್ಸ್ ಕಟ್ಟಿದ ಲಿನ್ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಉತ್ತಪ್ಪ 36 ರನ್ ಬಾರಿಸಿದರು. ರಾಣಾ 15 ರನ್ ಬಾರಿಸಿ ರಿಟೈರ್ಡ್ ಹಟ್ ತೆಗೆದುಕೊಂಡರು. ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ದಿನೇಶ್ ಕಾರ್ತಿಕ್ ಕೇವಲ 10 ಎಸೆತಗಳಲ್ಲಿ 23 ರನ್ ಬಾರಿಸಿ ಕೆಕೆಆರ್ ಗೆಲುವನ್ನು ಸುಲಭಗೊಳಿಸಿದರು. ಒಂದುಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ದಿಟ್ಟವಾಗಿ ಬ್ಯಾಟಿಂಗ್ ನಡೆಸಿದ ಕ್ರಿಸ್ ಲಿನ್ ಅಜೇಯ 62 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು ನಾಯಕ ವಿರಾಟ್ ಕೊಹ್ಲಿ(68), ಬ್ರೆಂಡನ್ ಮೆಕ್ಲಮ್(38) ಬ್ಯಾಟಿಂಗ್ ನೆರವಿನಿಂದ ಆರ್’ಸಿಬಿ 175 ರನ್ ಗಳಿಸಿತ್ತು.