ಬೆಂಗಳೂರು(ಸೆ. 04): ವೆಸ್ಟ್ ಇಂಡೀಸ್'ನ ಗ್ರೇಟ್ ಆಲ್'ರೌಂಡರ್ ಕೀರಾನ್ ಪೊಲ್ಲಾರ್ಡ್ ಇದೀಗ ಸುದ್ದಿಯಲ್ಲಿದ್ದಾರೆ. ಯಾವುದೋ ಶತಕವೋ, ಹ್ಯಾಟ್ರಿಕ್ ಪಡೆದೋ ಸುದ್ದಿಯಲ್ಲಿಲ್ಲ. ಬದಲಾಗಿ ನೋಬಾಲ್ ಹಾಕುವ ಮೂಲಕ ಸುದ್ದಿ ಮಾಡಿದ್ದಾರೆ. ಬರೀ ನೋಬಾಲ್ ಹಾಕಿದ್ದರೆ ಸುದ್ದಿಯಾಗುತ್ತಿರಲಿಲ್ಲ. ಇವರು ಎದುರಾಳಿ ಬ್ಯಾಟುಗಾರನಿಗೆ ಶತಕ ಭಾರಿಸುವ ಅವಕಾಶ ತಪ್ಪಿಸಲು ಬೇಕಂತಲೇ ನೋಬಾಲ್ ಎಸೆದಿದ್ದಾರೆ.

ಕೆರಿಬಿಯನ್ ಪ್ರೀಮಿಯರ್ ಲೀಗ್'ನಲ್ಲಿ ಬಾರ್ಬಡೋಸ್ ಮತ್ತು ಸೇಂಟ್ ಕಿಟ್ಸ್ ಆ್ಯಂಡ್ ನೆವಿಸ್ ನಡುವಿನ ಟಿ20 ಪಂದ್ಯದಲ್ಲಿ ಈ ಘಟನೆ ನಡೆದಿದೆ. ಪೊಲ್ಲಾರ್ಡ್'ರ ನೋಬಾಲ್'ನಿಂದ ಶತಕವಂಚಿತರಾದವರು ಎವಿನ್ ಲೆವಿಸ್ ಎಂಬ ಪ್ರತಿಭಾನ್ವಿತ ಆಟಗಾರ. ಬಾರ್ಬಡೋಸ್ ಒಡ್ಡಿದ 129 ರನ್'ನ ಗೆಲುವಿನ ಸವಾಲನ್ನು ಬಹಳ ಸುಲಭವಾಗಿ ಬೆನ್ನತ್ತಿದ ಸೇಂಟ್ ಕಿಟ್ಸ್ ಆ್ಯಂಡ್ ನೆವಿಸ್ ತಂಡ ಕೇವಲ 7 ಓವರ್'ನಲ್ಲಿ 128 ರನ್ ಗಳಿಸಿ ಗೆಲುವಿನಂಚಿಗೆ ಬಂದಿತ್ತು. ಎವಿನ್ ಲೆವಿಸ್ ಕೇವಲ 32 ಎಸೆತದಲ್ಲಿ 97 ರನ್ ಚಚ್ಚಿ ಕ್ರೀಸ್'ನಲ್ಲಿದ್ದರು. ಈ ಸಂದರ್ಭದಲ್ಲಿ ಬೌಲಿಂಗ್ ಮಾಡಿದ ಕೀರಾನ್ ಪೊಲ್ಲಾರ್ಡ್ ಬೌನ್ಸರ್ ಎಸೆದು ನೋಬಾಲ್ ಮಾಡಿದರು. ಒಂದು ವೇಳೆ ಲೆವಿಸ್ ಆ ಚೆಂಡಿನಲ್ಲಿ ಶತಕ ಭಾರಿಸಿದ್ದರೆ ಟಿ20 ಕ್ರಿಕೆಟ್'ನಲ್ಲಿ ಎರಡನೇ ಅತೀ ವೇಗದ ಶತಕ ದಾಖಲಿಸಿದ ಕೀರ್ತಿ ಸಿಗುತ್ತಿತ್ತು. 2013ರಲ್ಲಿ ಕ್ರಿಸ್ ಗೇಲ್ ಕೇವಲ 30 ಎಸೆತದಲ್ಲಿ ಶತಕ ಭಾರಿಸಿ ವಿಶ್ವದಾಖಲೆ ಹೊಂದಿದ್ದಾರೆ. ಕಾಕತಾಳೀಯವಾಗಿ, ಎವಿನ್ ಲೆವಿಸ್ ಬ್ಯಾಟ್ ಮಾಡುವಾಗ ಇನ್ನೊಂದು ಬದಿಯಲ್ಲಿ ಕ್ರೀಸ್'ನಲ್ಲಿದ್ದದ್ದು ಕ್ರಿಸ್ ಗೇಲ್ ಅವರೆಯೇ. ಇದೇ ವೇಳೆ, ಪೊಲ್ಲಾರ್ಡ್ ತಮ್ಮ ರಾಷ್ಟ್ರೀಯ ತಂಡದ ಸಹ ಆಟಗಾರನಿಗೆ ರೆಕಾರ್ಡ್ ಮಾಡುವ ಅವಕಾಶ ತಪ್ಪಿಸಲೆಂದು ಬೇಕಂತಲೇ ನೋಬಾಲ್ ಎಸೆದಿರಬಹುದೆಂಬ ಅನುಮಾನವಿದೆ.

ಸೋಷಿಯಲ್ ಮೀಡಿಯಾದಲ್ಲಿ, ಅದರಲ್ಲೂ ಟ್ವೀಟ್ಟರ್'ನಲ್ಲಿ ಕೀರಾನ್ ಪೊಲ್ಲಾರ್ಡ್ ಅವರನ್ನು ಸಖತ್ತಾಗಿ ಟ್ರೋಲ್ ಮಾಡಲಾಗುತ್ತಿದೆ.