Asianet Suvarna News Asianet Suvarna News

ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಮನೀಶ್ ಪಾಂಡೆ

2014ರ ಏಷ್ಯಾ ಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಕಾರ್ತಿಕ್ ಕೊನೆಯ ಬಾರಿಗೆ ಅಂತರಾಷ್ಟ್ರೀಯ ಪಂದ್ಯವನ್ನಾಡಿದ್ದರು.

Karthik replaces injured Pandey in Champions Trophy squad
  • Facebook
  • Twitter
  • Whatsapp

ನವದೆಹಲಿ(ಮೇ.18): ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ತಂಡಕ್ಕೆ ಹಿನ್ನಡೆ ಉಂಟಾಗಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕರ್ನಾಟಕದ ಮನೀಶ್ ಪಾಂಡೆ ಗಾಯದ ಸಮಸ್ಯೆಯಿಂದಾಗಿ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ತಮಿಳುನಾಡಿನ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಬಿಸಿಸಿಐ ಅಧಿಕೃತ ಪ್ರಕಟಣೆ ತಿಳಿಸಿದೆ.

ಗಾಯದ ಸಮಸ್ಯೆಯಿಂದಾಗಿ ಪಾಂಡೆ, ಬುಧವಾರ ಬೆಂಗಳೂರಿನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಿಂದಲೂ ಹೊರಗುಳಿದಿದ್ದರು. ಈ ಆವೃತ್ತಿಯಲ್ಲಿ ಪಾಂಡೆ ಕೋಲ್ಕತ ನೈಟ್'ರೈಡರ್ಸ್ ಪರ 14 ಪಂದ್ಯಗಳಿಂದ 396 ರನ್ ಗಳಿಸಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. ಈ ಮೊದಲೇ ಬಿಸಿಸಿಐ ಆಟಗಾರರು ಗಾಯಗೊಂಡರೆ ಅವರ ಬದಲಿಗೆ ಇಂಗ್ಲೆಂಡ್‌'ಗೆ ತೆರಳಲು ಮೀಸಲು ಆಟಗಾರರನ್ನು ನೇಮಿಸಿತ್ತು. ಹಾಗಾಗಿ ಮೀಸಲು ಆಟಗಾರನಾಗಿದ್ದ ದಿನೇಶ್ ಕಾರ್ತಿಕ್ ಟೀಂ ಇಂಡಿಯಾ ತಂಡದೊಳಗೆ ಸೇರ್ಪಡೆಯಾಗಿದ್ದಾರೆ.

ಐಪಿಎಲ್‌'ನಲ್ಲಿ ಗುಜರಾತ್ ಲಯನ್ಸ್ ಪರ ಆಡಿದ ಕಾರ್ತಿಕ್, 14 ಪಂದ್ಯಗಳಲ್ಲಿ 361 ರನ್ ಕಲೆಹಾಕಿದ್ದರು. ದೇಸಿ ಪಂದ್ಯಾವಳಿಗಳಲ್ಲಿ ಸತತವಾಗಿ ಉತ್ತಮ ಪ್ರದರ್ಶನ ತೋರುತ್ತಾ ಬಂದಿದ್ದ ಕಾರ್ತಿಕ್‌'ಗೆ ಕೊನೆಗೂ ಸ್ಥಾನ ಲಭಿಸಿದೆ.

2004ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಕಾರ್ತಿಕ್ ಇಲ್ಲಿಯವರೆಗೆ 71 ಏಕದಿನ ಪಂದ್ಯಗಳಲ್ಲಿ 27.93ರ ಸರಾಸರಿಯಂತೆ 1313ರನ್ ಬಾರಿಸಿದ್ದಾರೆ. ಅಲ್ಲದೇ 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದ ಸದಸ್ಯರಾಗಿದ್ದರು. 2014ರ ಏಷ್ಯಾ ಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಕಾರ್ತಿಕ್ ಕೊನೆಯ ಬಾರಿಗೆ ಅಂತರಾಷ್ಟ್ರೀಯ ಪಂದ್ಯವನ್ನಾಡಿದ್ದರು.

ಕಾರ್ತಿಕ್ ಆಗಮನದಿಂದ ಭಾರತ ತಂಡಕ್ಕೆ 2ನೇ ವಿಕೆಟ್ ಕೀಪರ್ ಸಿಕ್ಕಂತಾಗಿದೆ. ಒಂದು ವೇಳೆ ಪಂದ್ಯಾವಳಿ ವೇಳೆ ಎಂ.ಎಸ್.ಧೋನಿ ಗಾಯಗೊಂಡರೂ ತಂಡ ವಿಕೆಟ್ ಕೀಪರ್‌ಗಾಗಿ ಹುಡುಕಾಟ ನಡೆಸುವ ಅವಶ್ಯಕತೆ ಇರುವುದಿಲ್ಲ.

Follow Us:
Download App:
  • android
  • ios