ಅಗರ್'ವಾಲ್ 373 ಎಸೆತಗಳಲ್ಲಿ 219 ರನ್ ಸಿಡಿಸಿದ್ದಾರೆ. ಅವರ ಸೊಗಸಾದ ಇನಿಂಗ್ಸ್'ನಲ್ಲಿ 25 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್'ಗಳು ಸೇರಿವೆ. ಇನ್ನೊಂದು ತುದಿಯಲ್ಲಿ ಅಗರ್'ವಾಲ್'ಗೆ ಉತ್ತಮ ಸಾಥ್ ನೀಡಿದ ಕರುಣ್ ನಾಯರ್ 56 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಪುಣೆ(ನ.02): ಕರ್ನಾಟಕದ ಸ್ಟಾರ್ ಆಟಗಾರರಾದ ಮಯಾಂಕ್ ಅಗರ್'ವಾಲ್ ಅಜೇಯ ದ್ವಿಶತಕ(219*) ಹಾಗೂ ರವಿಕುಮಾರ್ ಸಮರ್ಥ್ ಅವರ ಶತಕ(129)ದ ನೆರವಿನಿಂದ ಕರ್ನಾಟಕ ಎರಡನೇ ದಿನದಾಟ ಮುಕ್ತಾಯದ ವೇಳೆಗೆ 2 ವಿಕೆಟ್ ನಷ್ಟಕ್ಕೆ 461 ರನ್ ಕಲೆ ಹಾಕಿದ್ದು, 216 ರನ್'ಗಳ ಮುನ್ನಡೆ ಸಾಧಿಸಿದೆ.
ಇಲ್ಲಿನ ಮಹರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯುತ್ತಿರುವ ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಬಿಗಿ ಹಿಡಿತ ಸಾಧಿಸಿದೆ. ಕರ್ನಾಟಕ ಎರಡನೇ ದಿನವೂ ಉತ್ತಮ ಆರಂಭವನ್ನೇ ಪಡೆಯಿತು. 117 ರನ್'ಗಳೊಂದಿಗೆ ಇನಿಂಗ್ಸ್ ಮುಂದುವರೆಸಿದ ಸಮರ್ಥ್-ಮಯಾಂಕ್ ಅಗರ್'ವಾಲ್ ಜೋಡಿ ದ್ವಿಶತಕ ಜತೆಯಾಟವನ್ನು ಮುಂದುವರೆಸಿತು. ಮಹಾರಾಷ್ಟ್ರ ಬೌಲರ್'ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ 259 ರನ್'ಗಳ ಜತೆಯಾಟವಾಡಿತು. ಸಮರ್ಥ್ 129 ರನ್ ಬಾರಿಸಿ ಸ್ವಪ್ನಿಲ್ ಗುಗಾಲೆಗೆ ವಿಕೆಟ್ ಒಪ್ಪಿಸಿದರು. ದೇಗಾ ನಿಶಾಲ್ ಕೇವಲ 16 ರನ್ ಬಾರಿಸಿ ನಿರಾಸೆ ಮೂಡಿಸಿದರು. ಆದರೆ ಮಯಾಂಕ್ ಅಗರ್'ವಾಲ್'ಗೆ ಕರುಣ್ ನಾಯರ್ ಉತ್ತಮ ಸಾಥ್ ನೀಡಿದ್ದಾರೆ.
ಕಳೆಗಟ್ಟಿದ ಅಗರ್'ವಾಲ್ ದ್ವಿಶತಕ:
ಸಮರ್ಥ್ ಜೊತೆ ದ್ವಿಶತಕದ ಜತೆಯಾಟವಾಡಿದ ಅಗರ್'ವಾಲ್ ತಂಡಕ್ಕೆ ಆಧಾರವಾದರು. ಆ ಬಳಿಕ ಕರುಣ್ ನಾಯರ್ ಜೊತೆ ಇನಿಂಗ್ಸ್ ಮುಂದುವರೆಸಿದ ಮಯಾಂಕ್ ಭರ್ಜರಿ ದ್ವಿಶತಕ ಬಾರಿಸಿ ಸಂಭ್ರಮಿಸಿದರು. ಅಗರ್'ವಾಲ್ 373 ಎಸೆತಗಳಲ್ಲಿ 219 ರನ್ ಸಿಡಿಸಿದ್ದಾರೆ. ಅವರ ಸೊಗಸಾದ ಇನಿಂಗ್ಸ್'ನಲ್ಲಿ 25 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್'ಗಳು ಸೇರಿವೆ. ಇನ್ನೊಂದು ತುದಿಯಲ್ಲಿ ಅಗರ್'ವಾಲ್'ಗೆ ಉತ್ತಮ ಸಾಥ್ ನೀಡಿದ ಕರುಣ್ ನಾಯರ್ 56 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮೂರನೇ ದಿನದಾಟದ ಮೊದಲ ಸೆಷನ್'ನಲ್ಲೇ ಮಯಾಂಕ್ ತ್ರಿಶತಕ ಸಿಡಿಸಿದರೂ ಅಚ್ಚರಿಯಿಲ್ಲ.
ಸಂಕ್ಷಿಪ್ತ ಸ್ಕೋರ್:(ಎರಡನೇ ದಿನದಂತ್ಯಕ್ಕೆ)
ಕರ್ನಾಟಕ: 461/2
ಮಯಾಂಕ್ ಅಗರ್'ವಾಲ್: 219*
ಆರ್. ಸಮರ್ಥ್ : 129
ಮಹರಾಷ್ಟ್ರ ಮೊದಲ ಇನಿಂಗ್ಸ್: 245/10
