ರಾಜಸ್ಥಾನ ವಿರುದ್ಧದ ತನ್ನ ವೈಭವೋಪೇತ ಗೆಲುವನ್ನು ಮಂಗಳವಾರವೇ ಖಚಿತಪಡಿಸಿದ್ದ ಕರ್ನಾಟಕ, ಉಳಿದ ನಾಲ್ಕು ವಿಕೆಟ್‌ಗಳನ್ನು ಕೇವಲ ನಾಲ್ಕು ಓವರ್‌ಗಳಲ್ಲಿಯೇ ಪಡೆದು ಜಯದ ನಗೆಬೀರಿತು.

ವಿಜಯನಗರಂ(ನ.15): ಪ್ರತಿಷ್ಠಿತ ಟೂರ್ನಿಯಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸುವುದರೊಂದಿಗೆ ಈ ಋತುವಿನ ರಣಜಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ ತನ್ನ ಅಜೇಯ ಓಟವನ್ನು ಮುಂದುವರೆಸಿದೆ.

ಇಲ್ಲಿನ ಡಾ. ಪಿ.ವಿ.ಜಿ. ರಾಜು ಎಸಿಎ ಕ್ರೀಡಾ ಸಂಕೀರ್ಣದಲ್ಲಿ ಮುಕ್ತಾಯ ಕಂಡ ಪಂದ್ಯದಲ್ಲಿ ರಾಜಸ್ಥಾನದ ವಿರುದ್ಧ 393 ರನ್‌'ಗಳ ಅಂತರದಿಂದ ಮಣಿಸಿ ಕರ್ನಾಟಕ ಆರು ಪಾಯಿಂಟ್ಸ್‌ಗಳನ್ನು ತನ್ನದಾಗಿಸಿಕೊಂಡಿತು. ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ರಾಜಸ್ಥಾನ ಯಾವುದೇ ಅಂಕ ಗಳಿಸಲು ಸಾಧ್ಯವಾಗದೆ ಶೂನ್ಯಕ್ಕೆ ತೃಪ್ತವಾಯಿತು.

ರಾಜಸ್ಥಾನ ತಂಡದ ವಿರುದ್ಧದ ಈ ಭರ್ಜರಿ ಗೆಲುವಿನಿಂದಾಗಿ ‘ಬಿ’ ಗುಂಪಿನಲ್ಲಿ ವಿನಯ್ ಕುಮಾರ್ ಪಡೆ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಸೋಮವಾರದಿಂದ (ನ.21) ದೆಹಲಿಯಲ್ಲಿ ಆರಂಭವಾಗಲಿರುವ ತನ್ನ ಮುಂದಿನ ಪಂದ್ಯದಲ್ಲಿ ವಿನಯ್ ಬಳಗ ಒಡಿಶಾ ವಿರುದ್ಧ ಕಾದಾಡಲಿದೆ. ಕ್ವಾರ್ಟರ್‌ ಫೈನಲ್ ಹಾದಿಯನ್ನು ಬಹುತೇಕ ಸುಗಮ ಮಾಡಿಕೊಂಡಿರುವ ಕರ್ನಾಟಕ ಮತ್ತೊಂದು ರಣಜಿ ಟ್ರೋಫಿ ಗೆಲ್ಲುವ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.

ನಾಲ್ಕು ವಿಕೆಟ್‌ಗೆ ನಾಲ್ಕೇ ಓವರ್!

ಅಂದಹಾಗೆ ರಾಜಸ್ಥಾನ ವಿರುದ್ಧದ ತನ್ನ ವೈಭವೋಪೇತ ಗೆಲುವನ್ನು ಮಂಗಳವಾರವೇ ಖಚಿತಪಡಿಸಿದ್ದ ಕರ್ನಾಟಕ, ಉಳಿದ ನಾಲ್ಕು ವಿಕೆಟ್‌ಗಳನ್ನು ಕೇವಲ ನಾಲ್ಕು ಓವರ್‌ಗಳಲ್ಲಿಯೇ ಪಡೆದು ಜಯದ ನಗೆಬೀರಿತು.

118 ರನ್‌ಗಳಿಗೆ 6 ವಿಕೆಟ್‌ಗಳಿಂದ ತನ್ನ ನಾಲ್ಕನೇ ದಿನದಾಟ ಆರಂಭಿಸಿದ ಪಂಕಜ್ ಸಿಂಗ್ ಸಾರಥ್ಯದ ರಾಜಸ್ಥಾನ, ಹೆಚ್ಚೇನೂ ಪ್ರತಿರೋಧ ತೋರದೆ 37 ಓವರ್‌ಗಳಲ್ಲಿ 131 ರನ್‌ಗಳಿಗೆ ಆಲೌಟ್ ಆಗಿ ತನ್ನ ಹೋರಾಟ ಕೊನೆಗೊಳಿಸಿತು. 14 ರನ್ ಗಳಿಸಿ ಔಟಾಗದೆ ಉಳಿದಿದ್ದ ರಾಜೇಶ್ ಬಿಷ್ಣೋಯಿ ದಿನದಾಟದ ಎರಡನೇ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿ ಕ್ರೀಸ್ ತೊರೆದರು.

ವಿನಯ್‌ಗೆ 5 ವಿಕೆಟ್

ಗಾಯದಿಂದಾಗಿ ಹೊರಬಂದ ನಂತರ ಸಂಪೂರ್ಣವಾಗಿ ಚೇತೋಹಾರಿ ಪ್ರದರ್ಶನ ನೀಡುತ್ತಿರುವ ನಾಯಕ ವಿನಯ್ ಕುಮಾರ್ ರಾಜಸ್ಥಾನ ವಿರುದ್ಧ 5 ವಿಕೆಟ್ ಸಾಧನೆ ಮೆರೆದರು. ಕೆಳ ಕ್ರಮಾಂಕದಲ್ಲಿ ಟಿ.ಎಂ. ಉಲ್ ಹಕ್ (4) ಮತ್ತು ನಾಯಕ ಪಂಕಜ್ ಸಿಂಗ್ (0) ಅವರನ್ನು ಪೆವಿಲಿಯನ್'ಗೆ ಅಟ್ಟಿದ ವಿನಯ್ ಅದರೊಂದಿಗೆ ರಣಜಿ ಕ್ರಿಕೆಟ್‌ನಲ್ಲಿ 19ನೇ ಬಾರಿಗೆ ಐದು ವಿಕೆಟ್‌'ಗಳನ್ನು ಗಳಿಸಿದರು. ಅಂದಹಾಗೆ ಕೊನೆಯ ಆಟಗಾರ ಸಿದ್ಧಾರ್ಥ್ ದೋಬಲ್ ಗಾಯಗೊಂಡಿದ್ದರಿಂದ ಕ್ರೀಸ್‌ಗೆ ಇಳಿಯಲಿಲ್ಲ.

ಸ್ಕೋರ್ ವಿವರ

ಕರ್ನಾಟಕ ಮೊದಲ ಇನ್ನಿಂಗ್ಸ್: 374

ರಾಜಸ್ಥಾನ ಮೊದಲ ಇನ್ನಿಂಗ್ಸ್: 148

ಕರ್ನಾಟಕ ದ್ವಿತೀಯ ಇನ್ನಿಂಗ್ಸ್: 298/6 (ಡಿ)

ರಾಜಸ್ಥಾನ ದ್ವಿತೀಯ ಇನ್ನಿಂಗ್ಸ್

37 ಓವರ್‌ಗಳಲ್ಲಿ 131ಕ್ಕೆ ಆಲೌಟ್