ವಿನಯ್ ಕುಮಾರ್ ಸಾರಥ್ಯದ ಕರ್ನಾಟಕ ತಂಡ, ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಜಯ ಸಾಧಿಸಿ ಆತ್ಮವಿಶ್ವಾಸದೊಂದಿಗೆ ನಾಕೌಟ್ ಹಂತಕ್ಕೇರುವ ಗುರಿ ಹೊತ್ತಿದೆ.

ಮೊಹಾಲಿ(ಡಿ.06): ಆರಂಭದ ಐದು ಪಂದ್ಯಗಳಲ್ಲಿ ಅತ್ಯಾಕರ್ಷಕ ಪ್ರದರ್ಶನ ನೀಡುತ್ತಾ ಬಂದ ಕರ್ನಾಟಕ, ಆನಂತರದ ಎರಡು ಪಂದ್ಯಗಳಲ್ಲಿ ಅನುಭವಿಸಿದ ಬ್ಯಾಟಿಂಗ್ ಹಿನ್ನಡೆಯಿಂದಾಗಿ ಅಗ್ರಸ್ಥಾನದಿಂದ ವಂಚಿತವಾಗಿದ್ದು, ಇದೀಗ ಬುಧವಾರದಿಂದ ಆರಂಭವಾಗುತ್ತಿರುವ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಲು ನಿರ್ಧರಿಸಿದೆ.

ಇಲ್ಲಿನ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯಲಿರುವ ನಾಲ್ಕು ದಿನಗಳ ಪಂದ್ಯವನ್ನು ಗಂಭೀರವಾಗಿ ಪರಿಗಣಿಸಿರುವ ವಿನಯ್ ಕುಮಾರ್ ಸಾರಥ್ಯದ ಕರ್ನಾಟಕ ತಂಡ, ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಜಯ ಸಾಧಿಸಿ ಆತ್ಮವಿಶ್ವಾಸದೊಂದಿಗೆ ನಾಕೌಟ್ ಹಂತಕ್ಕೇರುವ ಗುರಿ ಹೊತ್ತಿದೆ.

‘ಬಿ’ ಗುಂಪಿನಲ್ಲಿರುವ ಕರ್ನಾಟಕ ಆಡಿದ 7 ಪಂದ್ಯಗಳಲ್ಲಿ 4ರಲ್ಲಿ ಗೆಲುವು, 2ರಲ್ಲಿ ಡ್ರಾ ಮತ್ತು ಒಂದು ಪಂದ್ಯದಲ್ಲಿ ಸೋಲನುಭವಿಸಿ 30 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಇಷ್ಟೇ ಪಂದ್ಯಗಳಿಂದ ಮಹಾರಾಷ್ಟ್ರ 2ರಲ್ಲಿ ಗೆಲುವು, ಇನ್ನೆರಡರಲ್ಲಿ ಸೋಲು ಮತ್ತು 4 ಪಂದ್ಯಗಳಲ್ಲಿ ಡ್ರಾ ಸಾಧಿಸಿ 21 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.

ಬ್ಯಾಟಿಂಗ್‌'ನಲ್ಲಿ ಪುಟಿದೇಳಬೇಕಿದೆ

ಒಡಿಶಾ ಮತ್ತು ಸೌರಾಷ್ಟ್ರ ವಿರುದ್ಧದ ಪಂದ್ಯಗಳಲ್ಲಿ ವಿನಯ್ ಪಡೆ ಬ್ಯಾಟಿಂಗ್‌'ನಲ್ಲಿ ಎಡವಿದೆ. ಒಡಿಶಾ ವಿರುದ್ಧದ ಪಂದ್ಯದಲ್ಲಿ ಹೋರಾಡಿ ಡ್ರಾ ಮಾಡಿಕೊಂಡರೂ, ಸೌರಾಷ್ಟ್ರ ಮಾತ್ರ ವಿನಯ್ ಪಡೆಯನ್ನು ಸೋಲಿನ ದವಡೆಗೆ ಸಿಲುಕಿಸಿತ್ತು. ಆದಾಗ್ಯೂ ದಿಟ್ಟ ಹೋರಾಟ ನಡೆಸಿದ್ದ ವಿನಯ್ ಪಡೆ ಪಂದ್ಯವನ್ನು ರೋಚಕವಾಗಿಸಿತ್ತು. ಆದರೆ, ಸೌರಾಷ್ಟ್ರಕ್ಕಿಂತ ಮಹಾರಾಷ್ಟ್ರ ಬಲಿಷ್ಠವಾಗಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಈ ಎರಡರಲ್ಲಿಯೂ ಮತ್ತೊಮ್ಮೆ ಆಲ್ರೌಂಡ್ ಪ್ರದರ್ಶನ ನೀಡುವ ಅನಿವಾರ್ಯತೆ ಕರ್ನಾಟಕದ ಮುಂದಿದೆ. ಮುಖ್ಯವಾಗಿ ಅಸ್ಥಿರ ಪ್ರದರ್ಶನದಿಂದ ಕಂಗೆಟ್ಟಿರುವ ಹಿರಿಯ ಆಟಗಾರ ರಾಬಿನ್ ಉತ್ತಪ್ಪ ಹಾಗೂ ಮಯಾಂಕ್ ಅಗರ್ವಾಲ್ ಜವಾಬ್ದಾರಿಯುತ ಪ್ರದರ್ಶನ ನೀಡಬೇಕಿದ್ದರೆ, ಮನೀಶ್ ಪಾಂಡೆ, ಆರಂಭಿಕ ಸಮರ್ಥ್, ಸ್ಟುವರ್ಟ್ ಬಿನ್ನಿ ಕೂಡ ತಮ್ಮ ಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸದಂತೆ ಎಚ್ಚರವಹಿಸಬೇಕಿದೆ. ಇನ್ನು ಬೌಲಿಂಗ್ ಜತೆಗೆ ಬ್ಯಾಟಿಂಗ್‌'ನಲ್ಲಿಯೂ ತಂಡಕ್ಕೆ ಆಸರೆಯಾಗಿರುವ ವಿನಯ್ ಕುಮಾರ್, ಶ್ರೇಯಸ್ ಗೋಪಾಲ್ ಮತ್ತೊಮ್ಮೆ ಆಲ್ರೌಂಡ್ ಆಟದಿಂದ ಮಹಾರಾಷ್ಟ್ರಕ್ಕೆ ಸವಾಲಾಗಬೇಕಿದೆ.

ತಂಡಗಳು

ಕರ್ನಾಟಕ

ಆರ್. ಸಮರ್ಥ್, ಮಯಾಂಕ್ ಅಗರ್ವಾಲ್, ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಕೌನೇನ್ ಅಬ್ಬಾಸ್, ಸ್ಟುವರ್ಟ್ ಬಿನ್ನಿ, ವಿನಯ್ ಕುಮಾರ್ (ನಾಯಕ), ಶ್ರೇಯಸ್ ಗೋಪಾಲ್, ಶ್ರೀನಾಥ್ ಅರವಿಂದ್, ಅಭಿಮನ್ಯು ಮಿಥುನ್, ಅಬ್ರಾರ್ ಕಾಜಿ, ಕೃಷ್ಣಪ್ಪ ಗೌತಮ್ ಮತ್ತು ರೋನಿತ್ ಮೋರೆ.

ಮಹಾರಾಷ್ಟ್ರ

ಕೇದಾರ್ ಜಾಧವ್ (ನಾಯಕ), ಚಿರಾಗ್ ಖುರಾನ, ಸ್ವಪ್ನಿಲ್ ಗುಗಾಲೆ, ರುತುರಾಜ್ ಗಾಯಕ್‌ವಾಡೆ, ಹರ್ಷದ್ ಖಡಿವಾಲೆ, ಶುಭಂ ಕೊಥಾರಿ, ವಿಶಾಂತ್ ಮೋರೆ, ಶ್ರೀಕಾಂತ್ ಮುಂಢೆ, ಅನುಪಂ ಸಂಕ್ಲೇಚಾ, ನೌಶದ್ ಶೇಖ್, ರಾಹುಲ್ ತ್ರಿಪಾಠಿ, ಅಂಕಿತ್ ಬಾವ್ನೆ, ಮೊಹ್ಸಿನ್ ಸಯೀದ್.

ಪಂದ್ಯ ಆರಂಭ: ಬೆಳಿಗ್ಗೆ 9.30