ಬೆಂಗಳೂರು[ಆ.16]: 8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿಗೆ ಶುಕ್ರವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ. ಆ.31ರ ವರೆಗೂ ಒಟ್ಟು 16 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 7 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಆ.31ರಂದು ಫೈನಲ್‌ ಪಂದ್ಯ ನಿಗದಿಯಾಗಿದೆ.

ಮಳೆಯಿಂದಾಗಿ KPL ಟೂರ್ನಿಯಲ್ಲಿ ಬದಲಾವಣೆ; ಹೊಸ ವೇಳಾಪಟ್ಟಿ ಪ್ರಕಟ!

ಟೂರ್ನಿಯಲ್ಲಿ ಒಟ್ಟು 25 ಪಂದ್ಯಗಳು ನಡೆಯಲಿದೆ. ಆ.16ರಿಂದ 23ರ ವರೆಗೂ ಬೆಂಗಳೂರು ಹಾಗೂ ಆ.25ರಿಂದ 31ರ ವರೆಗೂ ಮೈಸೂರಲ್ಲಿ ಪಂದ್ಯಗಳು ನಡೆಯಲಿವೆ. ಪ್ರಶಸ್ತಿ ವಿಜೇತ ತಂಡಕ್ಕೆ 10 ಲಕ್ಷ ರುಪಾಯಿ ಬಹುಮನ ಮೊತ್ತ ಸಿಗಲಿದೆ.

KPL ಟ್ರೋಫಿ ಲಾಂಚ್; ವೇದಾಗೆ ಫಿದಾ ಆದ ಸುದೀಪ್!

ತಾರಾ ಆಟಗಾರರು: ಕರ್ನಾಟಕದ ತಾರಾ ಆಟಗಾರರಾದ ವಿನಯ್‌ ಕುಮಾರ್‌, ಅಭಿಮನ್ಯು ಮಿಥುನ್‌, ಕೆ.ಗೌತಮ್‌, ಮನೀಶ್‌ ಪಾಂಡೆ, ಪವನ್‌ ದೇಶಪಾಂಡೆ ಸೇರಿದಂತೆ ಇನ್ನೂ ಅನೇಕರು ಪಾಲ್ಗೊಳ್ಳಲಿದ್ದಾರೆ.

ಮೊದಲ ಬಾರಿಗೆ ಪ್ಲೇ-ಆಫ್‌: ಕೆಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಪ್ಲೇ-ಆಫ್‌ ಮಾದರಿ ಅಳವಡಿಸಲಾಗಿದೆ. ರೌಂಡ್‌ ರಾಬಿನ್‌ ಹಂತದಲ್ಲಿ ಪ್ರತಿ ತಂಡ 6 ಪಂದ್ಯಗಳನ್ನು ಆಡಲಿದೆ. ಅಗ್ರ 4 ತಂಡಗಳು ಪ್ಲೇ-ಆಫ್‌ಗೇರಲಿದ್ದು, 2 ಕ್ವಾಲಿಫೈಯರ್‌, 1 ಎಲಿಮಿನೇಟರ್‌ ಹಾಗೂ 1 ಫೈನಲ್‌ ಪಂದ್ಯ ನಡೆಯಲಿದೆ.

ಬೆಂಗಳೂರು-ಮೈಸೂರು ಮೊದಲ ಪಂದ್ಯ

ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆರ್‌.ಜೋನಾಥನ್‌ ಬೆಂಗಳೂರು ತಂಡದ ನಾಯಕರಾಗಿದ್ದು, ಮೈಸೂರು ತಂಡವನ್ನು ಅಮಿತ್‌ ವರ್ಮಾ ಮುನ್ನಡೆಸಲಿದ್ದಾರೆ. ಪಂದ್ಯ ಸಂಜೆ 7ಕ್ಕೆ ಆರಂಭಗೊಳ್ಳಲಿದ್ದು, ಇದಕ್ಕೂ ಮುನ್ನ ಸಂಜೆ 5ರಿಂದ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ.


ಈ ಹಿಂದಿನ ಕೆಪಿಎಲ್‌ ಚಾಂಪಿಯನ್ಸ್‌

ವರ್ಷ    ಚಾಂಪಿಯನ್‌

2009    ಪ್ರಾವಿಡೆಂಟ್‌ ಬೆಂಗಳೂರು

2010    ಮಂಗಳೂರು ಯುನೈಟೆಡ್‌

2014    ಮೈಸೂರು ವಾರಿಯ​ರ್ಸ್

2015    ಬಿಜಾಪುರ ಬುಲ್ಸ್

2016    ಬಳ್ಳಾರಿ ಟಸ್ಕರ್ಸ್

2017    ಬೆಳಗಾವಿ ಪ್ಯಾಂಥರ್ಸ್

2018    ಬಿಜಾಪುರ ಬುಲ್ಸ್‌