ಟಾಸ್ ಗೆದ್ದು ಮೊದಲ ಫೀಲ್ಡಿಂಗ್ ಆಯ್ದುಕೊಂಡ ಕರ್ನಾಟಕ ಆರಂಭದಲ್ಲೇ ಅಸ್ಸಾಂ ತಂಡಕ್ಕೆ ಶಾಕ್ ನೀಡಿತು. ನಾಯಕ ವಿನಯ್ ಕುಮಾರ್ ಆರಂಭಿಕ ಬ್ಯಾಟ್ಸ್'ಮನ್ ಪಲ್ಲವ್'ಕುಮಾರ್ ದಾಸ್ ಅವರನ್ನು ಪೆವಿಲಿಯನ್'ಗೆ ಅಟ್ಟುವ ಮೂಲಕ ಕರ್ನಾಟಕಕ್ಕೆ ಮೊದಲ ಮುನ್ನಡೆ ಒದಗಿಸಿದರು.
ಮೈಸೂರು(ಅ.14): ಅನುಭವಿ ಸ್ಪಿನ್ನರ್ ಕೆ ಗೌತಮ್(4) ಹಾಗೂ ಶ್ರೇಯಸ್ ಗೋಪಾಲ್(3 ವಿಕೆಟ್) ಅವರ ಮಾರಕ ದಾಳಿಗೆ ತತ್ತರಿಸಿದ ಅಸ್ಸಾಂ 145 ರನ್'ಗಳಿಗೆ ಸರ್ವಪತನ ಕಂಡಿದೆ. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ವಿಕೆಟ್ ನಷ್ಟವಿಲ್ಲದೇ 77 ರನ್ ಕಲೆ ಹಾಕುವುದರೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.
ಕರ್ನಾಟಕ ಪರ ಇನಿಂಗ್ಸ್ ಆರಂಭಿಸಿದ ಆರ್ ಸಮರ್ಥ್ 47ರನ್ ಹಾಗೂ ಮಯಾಂಕ್ ಅಗರ್'ವಾಲ್ 26 ರನ್ ಬಾರಿಸಿ ಎರಡನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.
ಇಲ್ಲಿನ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರ್ ಕಾಲೇಜ್ ಮೈದಾನದಲ್ಲಿ ಇಂದಿನಿಂದ ಆರಂಭಗೊಂಡ ಅಸ್ಸಾಂ ವಿರುದ್ಧದ ಮೊದಲ ಪಂದ್ಯದಲ್ಲಿ ವಿನಯ್ ಕುಮಾರ್ ಪಡೆ ಸ್ಪಷ್ಟ ಮುನ್ನಡೆ ಸಾಧಿಸುವತ್ತ ದಾಪುಗಾಲಿಟ್ಟಿದೆ. ಟಾಸ್ ಗೆದ್ದು ಮೊದಲ ಫೀಲ್ಡಿಂಗ್ ಆಯ್ದುಕೊಂಡ ಕರ್ನಾಟಕ ಆರಂಭದಲ್ಲೇ ಅಸ್ಸಾಂ ತಂಡಕ್ಕೆ ಶಾಕ್ ನೀಡಿತು. ನಾಯಕ ವಿನಯ್ ಕುಮಾರ್ ಆರಂಭಿಕ ಬ್ಯಾಟ್ಸ್'ಮನ್ ಪಲ್ಲವ್'ಕುಮಾರ್ ದಾಸ್ ಅವರನ್ನು ಪೆವಿಲಿಯನ್'ಗೆ ಅಟ್ಟುವ ಮೂಲಕ ಕರ್ನಾಟಕಕ್ಕೆ ಮೊದಲ ಮುನ್ನಡೆ ಒದಗಿಸಿದರು. ಆ ಬಳಿಕವೂ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ತೋರಿದ ಕರ್ನಾಟಕ ಒಂದು ಹಂತದಲ್ಲಿ ಅಸ್ಸಾಂ ತಂಡವನ್ನು (84/7) ನೂರರ ಗಡಿಯೊಳಗೆ ಆಲೌಟ್ ಮಾಡುವ ಮುನ್ಸೂಚನೆ ತೋರಿತು. ಆದರೆ ಅಸ್ಸಾಂ ಕ್ಯಾಪ್ಟನ್ ಗೋಕುಲ್ ಶರ್ಮಾ ನೆಲಕಚ್ಚಿ ಆಡಿದ್ದರ ಪರಿಣಾಮ ತಂಡದ ಮೊತ್ತವನ್ನು 150ರ ಸನಿಹಕ್ಕೆ ಕೊಂಡ್ಯೊಯ್ದರು. ತಂಡದ ಮೊತ್ತ 145 ರನ್'ಗಳಾದಾಗ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.
ಕರ್ನಾಟಕ ಪರ ಶಿಸ್ತಿನ ದಾಳಿ ನಡೆಸಿದ ಕೆ. ಗೌತಮ್ 20 ರನ್'ಗೆ 4 ವಿಕೆಟ್ ಕಬಳಿಸಿದರೆ, ಶ್ರೇಯಸ್ ಗೋಪಾಲ್ 3, ವಿನಯ್ ಕುಮಾರ್ 2 ಹಾಗೂ ಸ್ಟುವರ್ಟ್ ಬಿನ್ನಿ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಅಸ್ಸಾಂ ಮೊದಲ ಇನಿಂಗ್ಸ್ : 145/10
ಗೋಕುಲ್ ಶರ್ಮಾ : 55
ರಿಶವ್ ದಾಸ್ : 26
ಕೆ. ಗೌತಮ್: 20/4
ಕರ್ನಾಟಕ ಮೊದಲ ಇನಿಂಗ್ಸ್: 77/0
ಆರ್. ಸಮರ್ಥ್: 47
ಮಯಾಂಕ್ ಅಗರ್'ವಾಲ್: 26
(ಮೊದಲ ದಿನದಾಟದ ಮುಕ್ತಾಯಕ್ಕೆ)
