Asianet Suvarna News Asianet Suvarna News

ಪ್ರೊ ಕಬಡ್ಡಿ ರೀತಿ ರಾಜ್ಯದಲ್ಲೂ ಕಬಡ್ಡಿ ಲೀಗ್‌

ಪ್ರೊ ಕಬಡ್ಡಿ ಮಾದರಿಯಲ್ಲಿ ಕರ್ನಾಟಕದಲ್ಲೂ ಟೂರ್ನಿ ಆರಂಭಿಸಲು ರಾಜ್ಯ ಕಬಡ್ಡಿ ಸಂಸ್ಥೆ ಸಿದ್ಧತೆ. ಮುಂದಿನ ತಿಂಗಳ ಸಭೆಯಲ್ಲಿ ಪ್ರಸ್ತಾಪ . ಉದ್ಘಾಟನಾ ಆವೃತ್ತಿಗೆ 8 ರಿಂದ 10 ತಂಡಗಳ ರಚನೆ. ಇಲ್ಲಿದೆ ಹೆಚ್ಚಿನ ಮಾಹಿತಿ.

Karnataka kabaddi association set to launch New kabaddi league for state
Author
Bengaluru, First Published Oct 21, 2018, 8:08 AM IST

ಪುಣೆ(ಅ.21): ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಭಾರೀ ಯಶಸ್ಸು ಪಡೆದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕರ್ನಾಟಕ ಪ್ರೀಮಿಯರ್‌ ಲೀಗ್‌(ಕೆಪಿಎಲ್‌) ಆರಂಭವಾಗಿತ್ತು. ಇದೀಗ ಪ್ರೊ ಕಬಡ್ಡಿ ಲೀಗ್‌ ಆವೃತ್ತಿಯಿಂದ ಆವೃತ್ತಿಗೆ ಯಶಸ್ಸು ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಪ್ರೊ ಕಬಡ್ಡಿ ಮಾದರಿಯಲ್ಲಿಯೇ ಕಬಡ್ಡಿ ಲೀಗ್‌ ಆರಂಭಿಸಲು ರಾಜ್ಯ ಕಬಡ್ಡಿ ಸಂಸ್ಥೆ ಉತ್ಸುಕಗೊಂಡಿದ್ದು, ಸಕಲ ಸಿದ್ಧತೆ ನಡೆಸುತ್ತಿದೆ.

ಪ್ರೊ ಕಬಡ್ಡಿ ಆರಂಭವಾದ ಮೇಲೆ ಕ್ರಿಕೆಟ್‌ ಆಟಗಾರರಂತೆ ಕಬಡ್ಡಿ ಆಟಗಾರರು ಕೂಡ ತಾರಾ ಆಟಗಾರರಾಗಿ ಬೆಳೆಯುತ್ತಿದ್ದಾರೆ. ಕೋಟಿಗಟ್ಟಲೇ ಸಂಭಾವನೆ ಪಡೆಯುತ್ತಿದ್ದಾರೆ. ಆದರೆ, ಪ್ರೊ ಕಬಡ್ಡಿ ಮತ್ತು ರಾಷ್ಟ್ರೀಯ ತಂಡದಲ್ಲಿ ರಾಜ್ಯದ ಆಟಗಾರರಿಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ. ಹೀಗಾಗಿ ನಮ್ಮಲ್ಲಿರುವ ಪ್ರತಿಭೆಯನ್ನು ಇನ್ನಷ್ಟುಗುರುತಿಸಬೇಕು, ಬೆಳೆಸಬೇಕು. ಪ್ರೊ ಕಬಡ್ಡಿ ಮತ್ತು ರಾಷ್ಟ್ರೀಯ ತಂಡದಲ್ಲಿ ರಾಜ್ಯದ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಕರ್ನಾಟಕದಲ್ಲಿ ಈ ಲೀಗ್‌ ಆರಂಭಿಸಲು ರಾಜ್ಯ ಕಬಡ್ಡಿ ಸಂಸ್ಥೆ ತೀರ್ಮಾನಿಸಿದೆ. ಈ ವಿಷಯವನ್ನು ಸ್ವತಃ ರಾಜ್ಯ ಕಬಡ್ಡಿ ಸಂಸ್ಥೆಯ ಅಧ್ಯಕ್ಷ ಹನುಮಂತೇಗೌಡ ಮತ್ತು ಪ್ರಧಾನ ಕಾರ್ಯದರ್ಶಿ ಮುನಿರಾಜು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಮುಂದಿನ ತಿಂಗಳು ತೀರ್ಮಾನ: ಈ ಹಿಂದೆ ಕೂಡ ರಾಜ್ಯದಲ್ಲಿರುವ ಕಬಡ್ಡಿ ಪ್ರತಿಭೆಗಳನ್ನು ಗುರುತಿಸುವ ಹಿನ್ನೆಲೆಯಲ್ಲಿ ಪ್ರೊ ಕಬಡ್ಡಿ ಮಾದರಿಯಲ್ಲಿಯೇ ಕಬಡ್ಡಿ ಲೀಗ್‌ ಆರಂಭಿಸಲು ಚಿಂತಿಸಲಾಗಿತ್ತು. ಆದರೆ, ನಾನಾ ಸಮಸ್ಯೆಯಿಂದ ಲೀಗ್‌ ಅನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಿರಲಿಲ್ಲ. ಆದರೆ, ಮುಂದಿನ ತಿಂಗಳು ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ರಾಜ್ಯ ಕಬಡ್ಡಿ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.

ಆರಂಭದಲ್ಲಿ 8 ರಿಂದ 10 ತಂಡಗಳು:
ಕರ್ನಾಟಕ ಕಬಡ್ಡಿ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಭಾಗವಹಿಸಲು 8 ರಿಂದ 10 ತಂಡಗಳನ್ನು ರಚನೆ ಮಾಡಿಕೊಳ್ಳುವ ಯೋಜನೆ ಹಾಕಿಕೊಳ್ಳಲಾಗಿದೆ. ಮೂರು ಅಥವಾ ನಾಲ್ಕು ಜಿಲ್ಲೆಗಳನ್ನು ಸೇರಿಸಿ ಒಂದು ತಂಡ ರಚನೆ ಮಾಡಲಾಗುತ್ತದೆ. ಯಾವ ಯಾವ ಜಿಲ್ಲೆಯಲ್ಲಿ ಕಬಡ್ಡಿ ಪ್ರಭಾವ ಹೆಚ್ಚು ಇದೆಯೂ ಆಯಾ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಮೊದಲಿಗೆ ಈ ರೀತಿಯಾಗಿ ತಂಡಗಳನ್ನು ರಚನೆ ಮಾಡಿಕೊಂಡು ಪ್ರೊ ಕಬಡ್ಡಿ ಮಾದರಿಯಲ್ಲಿ ಆಡಿಸುವುದು. ಆ ಮೇಲೆ ಅದರ ಯಶಸ್ಸಿನ ಆಧಾರದ ಮೇಲೆ ತಂಡಗಳ ವಿಸ್ತರಣೆಗೆ ಮುಂದಾಗುವ ಯೋಜನೆ ಹಾಕಿಕೊಳ್ಳಲಾಗಿದೆ.

ರಾಯಭಾರಿಗಳಿಗಾಗಿ ಹುಡುಕಾಟ:
ಟೂರ್ನಿಯ ವೆಚ್ಚ ಹೆಚ್ಚಾಗುವುದರಿಂದ ರಾಯಭಾರಿಗಳನ್ನು ನೇಮಿಸಿಕೊಳ್ಳಬೇಕಿದೆ. ಮೊದಲು ಟೂರ್ನಿಯ ಬಗ್ಗೆ ಪ್ರಸ್ತಾಪ ಮಾಡಿ ತೀರ್ಮಾನ ಕೈಗೊಂಡ ನಂತರ ರಾಯಭಾರಿಗಳನ್ನು ಹುಡುಕುವ ಕೆಲಸ ಆರಂಭವಾಗಲಿದೆ. ಈಗಾಗಲೇ ಪ್ರೊ ಕಬಡ್ಡಿ ಭಾರೀ ಯಶಸ್ಸು ಗಳಿಸಿರುವುದರಿಂದ ಕರ್ನಾಟಕ ಪ್ರೀಮಿಯರ್‌ ಕಬಡ್ಡಿ ಲೀಗ್‌ಗೆ ರಾಯಭಾರಿಗಳನ್ನು ಹುಡುಕುವುದು ಅಷ್ಟೇನು ಕಷ್ಟದ ಕೆಲಸವಾಗದು ಎಂಬುದು ರಾಜ್ಯ ಕಬಡ್ಡಿ ಸಂಸ್ಥೆಯ ವಿಶ್ವಾಸ.

ರಾಜ್ಯ ಕಬಡ್ಡಿ ಲೀಗ್‌ ಕುರಿತು ಮುಂದಿನ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇವೆ. ಎಲ್ಲಾ ಸದಸ್ಯರ ಅಭಿಪ್ರಾಯವನ್ನು ಪಡೆದು ತೀರ್ಮಾನ ಕೈಗೊಳ್ಳುತ್ತೇವೆ. ಮುಖ್ಯವಾಗಿ ನಮ್ಮ ರಾಜ್ಯದ ಪ್ರತಿಭೆಗಳಿಗೆ ರಾಷ್ಟ್ರೀಯ ತಂಡದಲ್ಲಿ, ಪ್ರೊ ಕಬಡ್ಡಿಯಲ್ಲಿ ಹೆಚ್ಚಿನ ಅವಕಾಶ ದೊರಕಿಸಬೇಕಿದೆ ಎಂದು ರಾಜ್ಯ ಕಬಡ್ಡಿ ಸಂಸ್ಥೆ ಅಧ್ಯಕ್ಷ ಹನುಮಂತೇ ಗೌಡ ಹೇಳಿದ್ದಾರೆ.

ಈ ಹಿಂದೆ ಕೂಡ ರಾಜ್ಯದಲ್ಲಿ ಕಬಡ್ಡಿ ಲೀಗ್‌ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ನಾನಾ ಕಾರಣಗಳಿಂದ ನಿರ್ದಿಷ್ಟವಾದ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ರಾಜ್ಯದಲ್ಲಿ ಲೀಗ್‌ ಆರಂಭಿಸಲು ಇದು ಸೂಕ್ತ ಸಮಯ. ನಮ್ಮ ಪ್ರತಿಭೆಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಎಂದು ರಾಜ್ಯ ಕಬಡ್ಡಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮುನಿರಾಜು  ಹೇಳಿದ್ದಾರೆ.

ಮಂಜು ಮಳಗುಳಿ

Follow Us:
Download App:
  • android
  • ios