ಮೂರನೇ ದಿನದಂತ್ಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 135 ರನ್ ಪೇರಿಸಿದ್ದ ಮಹಾರಾಷ್ಟ್ರಕ್ಕೆ ಇಂದು ವೇಗಿ ಮಿಥುನ್ ಮತ್ತೊಮ್ಮೆ ಮಾರಕವಾಗಿ ಪರಿಣಮಿಸಿದರು.

ಪುಣೆ(ನ.04): ಕರ್ನಾಟಕ ತಂಡದ ಜಯದ ನಾಗಾಲೋಟ ಮುಂದುವರೆದ್ದು, ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಮಹಾರಾಷ್ಟ್ರ ವಿರುದ್ಧ ಇನಿಂಗ್ಸ್ ಗೆಲುವು ದಾಖಲಿಸಿದ ಕರ್ನಾಟಕ, ಒಂದು ಬೋನಸ್ ಅಂಕದೊಂದಿಗೆ 'ಎ' ಗುಂಪಿನಲ್ಲಿ 20 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಮಯಾಂಕ್ ಅಗರ್'ವಾಲ್ ತ್ರಿಶತಕ, ಸಮರ್ಥ್, ಕರುಣ್ ನಾಯರ್ ಶತಕ ಹಾಗೂ ಬೌಲಿಂಗ್'ನಲ್ಲಿ ನಾಯಕ ವಿನಯ್ ಕುಮಾರ್ ಹಾಗೂ ಮಿಥುನ್ ಮನಮೋಹಕ ಪ್ರದರ್ಶನ ಕರ್ನಾಟಕ ರಣಜಿ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿಗೆ ಸಾಕ್ಷಿಯಾಯಿತು

ಅಭಿಮನ್ಯು ಮಿಥುನ್ ಮಾರಕ ದಾಳಿಗೆ ತತ್ತರಿಸಿದ ಮಹಾರಾಷ್ಟ್ರ ಎರಡನೇ ಇನಿಂಗ್ಸ್'ನಲ್ಲಿ 247 ರನ್'ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಕರ್ನಾಟಕ ಇನಿಂಗ್ಸ್ ಹಾಗೂ 136 ರನ್'ಗಳ ಭರ್ಜರಿ ಜಯಭೇರಿ ಬಾರಿಸಿತು.

ಮೂರನೇ ದಿನದಂತ್ಯಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು 135 ರನ್ ಪೇರಿಸಿದ್ದ ಮಹಾರಾಷ್ಟ್ರಕ್ಕೆ ಇಂದು ವೇಗಿ ಮಿಥುನ್ ಮತ್ತೊಮ್ಮೆ ಮಾರಕವಾಗಿ ಪರಿಣಮಿಸಿದರು. ಮಹಾರಾಷ್ಟ್ರ ಪರ ರಾಹುಲ್ ತ್ರಿಪಾಠಿ(51) ಹಾಗೂ ರೋಹಿತ್ ಮೋಟ್ವಾನಿ(49*) ಕೊಂಚ ಪ್ರತಿರೋಧ ತೋರಿದರು. ಆದರೆ ಈ ಜೋಡಿಯನ್ನು ಮಿಥುನ್ ಬೇರ್ಪಡಿಸಿದರು. 51 ರನ್ ಬಾರಿಸಿ ನೆಲಕಚ್ಚಿ ಆಡುತ್ತಿದ್ದ ತ್ರಿಪಾಠಿಯನ್ನು ಪೆವಿಲಿಯನ್'ಗೆ ಕಳಿಸುವಲ್ಲಿ ಮಿಥುನ್ ಯಶಸ್ವಿಯಾದರು. ಈ ಬಳಿಕ ನಿರಂತರ ವಿಕೆಟ್ ಕಳೆದುಕೊಂಡ ಮಹಾರಾಷ್ಟ್ರ 247 ರನ್'ಗಳಿಗೆ ಸರ್ವಪತನ ಕಂಡಿತು.

ಕರ್ನಾಟಕ ಪರ ಮಿಥುನ್ 5 ವಿಕೆಟ್ ಪಡೆದರೆ, ರೋನಿತ್ ಮೋರಿ 2 ಹಾಗೂ ಕುರುಣ್ ನಾಯರ್, ಸ್ಟುವರ್ಟ್ ಬಿನ್ನಿ ಮತ್ತು ಕೆ. ಗೌತಮ್ ತಲಾ ಒಂದು ವಿಕೆಟ್ ಪಡೆದರು. ಚೊಚ್ಚಲ ತ್ರಿಶತಕ ಸಿಡಿಸಿದ ಮಯಾಂಕ್ ಅಗರ್'ವಾಲ್ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್:

ಮಹಾರಾಷ್ಟ್ರ : 245/10 &247/10

ಕರ್ನಾಟಕ: 628/5 ಡಿಕ್ಲೇರ್